ಚಾಮರಾಜನಗರ: ಚುನಾವಣಾ ಅಖಾಡಕ್ಕಿಳಿಲಿದ್ದಾರೆ ಜನಸಾಮಾನ್ಯರು: ಬೀಸುತ್ತಿದೆ ಬದಲಾವಣೆಯ ಗಾಳಿ
ಚಾಮರಾಜನಗರ: ರಾಜಕೀಯ ಅಂದ್ರೆ ಕೇವಲ ಹಣ, ಜಾತಿ ಬಲ ಎನ್ನುವ ಕಾಲ ಕಳೆದ ಕೆಲವು ವರ್ಷಗಳಿಂದ ದೂರವಾಗಿ ಬದಲಾವಣೆ ಗಾಳಿ ಬೀಸುತ್ತಿದ್ದು ಈ ಬಾರಿಯ ಚುನಾವಣೆಯಲ್ಲಿ ವಿವಿಧ ರಂಗಗಳ ಶ್ರೀಸಾಮಾನ್ಯರು ಸ್ಪರ್ಧಿಸಲು ಅಖಾಡ ಸಿದ್ಧಪಡಿಸಿಕೊಳ್ಳುತ್ತಿದ್ದಾರೆ.
ಹೌದು…, ಒಂದು ಪಕ್ಷದ ಭದ್ರಕೋಟೆ ಎಂಬ ಮಾನದಂಡಕ್ಕಿಂತ ಜನರು ತಮಗೂ ಒಂದು ಬಾರಿ ಅವಕಾಶ ಕೊಡಲಿದ್ದಾರೆ ಎಂಬ ವಿಶ್ವಾಸದಲ್ಲಿ ಛಾಪು ಮೂಡಿಸಲು ಮುಂದಾಗಿದ್ದಾರೆ ನಿವೃತ್ತ ಯೋಧ, ಅರ್ಚಕ, ಎಂಜನಿಯರ್, ರೈತ ಮುಖಂಡರು, ಉದ್ಯಮಿಗಳು.
ರಾಜಕೀಯಕ್ಕಿಳಿದ ರೈತ ಮುಖಂಡರು: ನಿರಂತರ ಹೋರಾಟ, ರೈತ ಸಂಘದ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದ ಡಾ.ಗುರುಪ್ರಸಾದ್ ಚಾಮರಾಜನಗರದಿಂದ ಹಾಗೂ ಕಡಬೂರು ಮಂಜುನಾಥ್ ಗುಂಡ್ಲುಪೇಟೆ ಕ್ಷೇತ್ರದಿಂದ ಬೇರೆ ಬೇರೆ ಪಕ್ಷಗಳಡಿ ಸ್ಪರ್ಧಿಸಲು ಮುಂದಾಗಿದ್ದಾರೆ.
ಡಾ.ಗುರುಪ್ರಸಾದ್ ಉನ್ನತ ವ್ಯಾಸಂಗ ಮಾಡಿ, ಪಿಎಚ್ ಡಿ ಪದವಿ ಪಡೆದು ಕೃಷಿಯಲ್ಲಿ ತೊಡಗಿಸಿಕೊಂಡಿದ್ದು ರೈತ ಹೋರಾಟದಲ್ಲಿ ಮುಂಚೂಣಿ ಹೆಸರನ್ನು ಪಡೆದಿದ್ದಾರೆ. ಎಎಪಿ ಪಕ್ಷದಿಂದ ಸಂಭಾವ್ಯ ಅಭ್ಯರ್ಥಿಯಾಗಿದ್ದು, ಒಂದು ವೇಳೆ ರಾಜ್ಯ ರೈತ ಸಂಘವು ಸ್ವತಂತ್ರವಾಗಿ ಸ್ಪರ್ಧೆಗಿಳಿದರೇ ರೈತ ಸಂಘದಿಂದ ಚುನಾವಣಾ ಕಣಕ್ಕೆ ಇಳಿಯಲಿದ್ದಾರೆ. ಪಕ್ಷ ಇನ್ನೂ ನಿರ್ಧಾರವಾಗದಿದ್ದರೂ ಸ್ಪರ್ಧಿಸುವುದು ಖಚಿತವಾಗಿದೆ.
ಕಡಬೂರು ಮಂಜುನಾಥ್ ಅವರು ಕೂಡ ರೈತ ಮುಖಂಡರಾಗಿದ್ದು ಆದರ್ಶದ ವಿವಾಹ ಮಾಡಿಕೊಂಡು ಗಮನ ಸೆಳೆದ ಯುವ ಮುಖಂಡರಾಗಿದ್ದಾರೆ. ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ನೇರಾ ಹಣಾಹಣಿ ಎನ್ನುತ್ತಿದ್ದ ಗುಂಡ್ಲುಪೇಟೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಕಣದ ದಿಕ್ಕನ್ನು ಬದಲಿಸಿರುವ ಅಭ್ಯರ್ಥಿಯಾಗಿದ್ದಾರೆ.
ಕೆಆರ್ ಎಸ್ ನಿಂದ ಅರ್ಚಕ ಅಭ್ಯರ್ಥಿ: ಸ್ಥಾಪನೆಗೊಂಡ ಕೆಲವೇ ವರ್ಷಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡಿ ಜನರ ನಂಬಿಕೆ ಗಳಿಸುತ್ತಿರುವ ಕೆಆರ್ ಎಸ್ ಪಕ್ಷದಿಂದ ಚಾಮರಾಜನಗರ ಕ್ಷೇತ್ರದಲ್ಲಿ ಶ್ರೀನಿವಾಸಶಾಸ್ತ್ರಿ ಅಭ್ಯರ್ಥಿ ಆಗುತ್ತಿದ್ದಾರೆ. ಕೊಳ್ಳೇಗಾಲದ ಮರಡಿಗುಡ್ಡದ ಅರ್ಚಕರಾಗಿರುವ ಶ್ರೀನಿವಾಸ್ ಶಾಸ್ತ್ರಿ ಇದೇ ಮೊದಲ ಬಾರಿಗೆ ಎಂಎಲ್ ಎ ಸ್ಥಾನಕ್ಕೆ ಸ್ಪರ್ಧೆ ಮಾಡಲು ಮುಂದಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ಈಗಾಗಲೇ ಪ್ರಚಾರ ಆರಂಭಿಸಿ ಜನರನ್ನು ಸೆಳೆಯುತ್ತಿದ್ದಾರೆ. ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಿರುವ ಕೆಆರ್ ಎಸ್ ಪಾರ್ಟಿ ಈ ಬಾರಿ ಚುನಾವಣಾ ರಾಜಕಾರಣದಲ್ಲಿ ಕಮಾಲ್ ಮಾಡಲು ಮುಂದಾಗಿದ್ದಾರೆ.
ಆಗ ದೇಶಸೇವೆ ಈಗ ಜನಸೇವೆ:
ಬರೋಬ್ಬರಿ 17 ವರ್ಷ ಭಾರತೀಯ ಸೇನೆಯಲ್ಲಿ ಕಾರ್ಯನಿರ್ವಹಿಸಿ ನಿವೃತ್ತರಾಗಿರುವ ಗಂಗಾಧರ್ ಎಂಬ ನಿವೃತ್ತ ಯೋಧ ಹನೂರು ಕ್ಷೇತ್ರದಲ್ಲಿ ಜೆಡಿಯು ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ಹತ್ತಾರು ವರ್ಷಗಳಿಂದ ಕ್ಷೇತ್ರದಲ್ಲಿ ವಿವಿಧ ಸಾಮಾಜಿಕ ಕಾರ್ಯಗಳಿಂದ ಗುರುತಿಸಿಕೊಂಡಿರುವ ಗಂಗಾಧರ್ ಈ ಬಾರಿಯ ಚುನಾವಣೆಯಲ್ಲಿ ತಮ್ಮ ಛಾಪು ಮೂಡಿಸಲು ಮುಂದಾಗಿದ್ದಾರೆ.
ಅಬ್ಬರ ಇಲ್ಲದೇ ಕೆಲಸಗಳ ಮೂಲಕ ಜನರ ಮನ ಗೆಲ್ಲಲು ಮುಂದಾಗಿರುವ ಗಂಗಾಧರ್ ಕ್ಷೇತ್ರದ ಸಮಸ್ಯೆಗಳಿಗೆ ಮುಕ್ತಿ ಕಾಣಿಸಲು ತನಗೊಂದು ಅವಕಾಶ ಕೊಡಿ ಎನ್ನುತ್ತಿದ್ದಾರೆ. ದೇಶಸೇವೆ ಮಾಡಿ ಬಂದಿರುವ ಗಂಗಾಧರ್ ಅವರಿಗೆ ಜನಸೇವೆ ಮಾಡಲು ಮತದಾರ ಜೈಹೋ ಎನ್ನುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.
ಎಲೆಕ್ಷನ್ ಗೆ ನಿಲ್ಲಿದ್ದಾರೆ ಎಂಜಿನಿಯರ್ : ಏರೋನಾಟಿಕಲ್ ಎಂಜಿನಿಯರ್ ಆಗಿರುವ ನಾಗೇಂದ್ರ ಎಂಬವರು ಹನೂರು ವಿಧಾನಸಭಾ ಕ್ಷೇತ್ರದಿಂದ ಎಎಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದು ಒಂದು ಹಂತದ ಪ್ರಚಾರ ಮುಗಿಸಿ ಎಎಪಿ ಮಾಡಿರುವ ಕಾರ್ಯಗಳ ಜನರಿಗೆ ತಲುಪಿಸುವ ಕಾರ್ಯ ಮಾಡುತ್ತಿದ್ದಾರೆ. ಹಣ ಮತ್ತಿತ್ತರ ಆಸೆಗೆ ಬೀಳದೇ ವಿದ್ಯಾವಂತನಾದ ತನಗೆ ಒಂದು ಅವಕಾಶ ಕೊಡಬೇಕು ಎಂದು ಜನರ ಗಮನ ತಮ್ಮತ್ತ ಸೆಳೆಯುತ್ತಿದ್ದಾರೆ.
18 ವರ್ಷಗಳಿಂದ ಪಕ್ಷದಲ್ಲಿ ಇದ್ದಿದ್ದಕ್ಕೆ ಅವಕಾಶ: 18 ವರ್ಷಗಳಿಂದ ಪಕ್ಷದಲ್ಲಿದ್ದು ವಿವಿಧ ಜವಾಬ್ದಾರಿ ನಿರ್ವಹಿಸಿರುವ ಉದ್ಯಮಿ ಸೈಯದ್ ಅಕ್ರಂ ಅವರಿಗೆ ಈ ಬಾರಿ ಚಾಮರಾಜನಗರ ಕ್ಷೇತ್ರದಿಂದ ಸ್ಪರ್ಧಿಸಲು ಜೆಡಿಎಸ್ ಜೈ ಎಂದಿದೆ. ಚಾಮರಾಜನಗರ ಜೆಡಿಎಸ್ ನ ಸಂಭಾವ್ಯ ಅಭ್ಯರ್ಥಿಯಾಗಿರುವ ಸೈಯದ್ ಅಕ್ರಂ ಅಖಾಡಕ್ಕೆ ಧುಮುಕಲು ಉತ್ಸುಕರಾಗಿದ್ದು ತಮ್ಮದೇ ಆದ ಶೈಲಿಯಲ್ಲಿ ಜನರನ್ನು ತಲುಪಿ ಜೆಡಿಎಸ್ ಬೆಂಬಲಿಸುವಂತೆ ಕೇಳಿಕೊಳ್ಳುತ್ತಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw