ಅನ್ಯ ಕೋಮಿನ ಯುವಕನನ್ನು ಪ್ರೀತಿಸಿದ ತಂಗಿ: ತಾಯಿ–ತಂಗಿಯನ್ನು ಕೆರೆಗೆ ತಳ್ಳಿ ಕೊಂದ ಕೋಮುವಾದಿ ಮಗ!
ಮೈಸೂರು: ಕೋಮುವಾದಿ ಯುವಕನೋರ್ವ ತನ್ನ ತಂಗಿ ಹಾಗೂ ತಾಯಿಯನ್ನು ಕೆರೆಗೆ ತಳ್ಳಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಮೈಸೂರಿನ ಹುಣಸೂರು ತಾಲೂಕಿನ ಮರೂರು ಗ್ರಾಮದಲ್ಲಿ ನಡೆದಿದೆ.
ಧನುಶ್ರೀ(19) ಹಾಗೂ ಆಕೆಯ ತಾಯಿ ಅನಿತಾ (43) ಹತ್ಯೆಗೀಡಾದವರಾಗಿದ್ದಾರೆ, ಅನಿತಾ ಅವರ ಮಗ ನಿತಿನ್ ತನ್ನ ತಾಯಿ ಹಾಗೂ ಸಹೋದರಿಯನ್ನು ಕೊಂದ ಪಾಪಿಯಾಗಿದ್ದಾನೆ.
ತನ್ನ ತಂಗಿ ಅನ್ಯ ಕೋಮಿನ ಯುವಕನನ್ನು ಪ್ರೀತಿಸುತ್ತಿದ್ದಳು ಎನ್ನುವ ಕಾರಣಕ್ಕಾಗಿ ಆಕೆ ಹಾಗೂ ತನ್ನ ತಾಯಿಯನ್ನು ಉಪಾಯವಾಗಿ ಬೈಕ್ ನಲ್ಲಿ ಕೆರೆಯ ಬಳಿಗೆ ಕರೆ ತಂದಿದ್ದಾನೆ. ಮೊದಲು ತಂಗಿಯನ್ನು ಕೆರೆಗೆ ತಳ್ಳಿದ್ದಾನೆ. ಈ ವೇಳೆ ತಾಯಿ ಆಕೆಯ ರಕ್ಷಣೆಗೆ ಮುಂದಾಗಿದ್ದು, ಈ ವೇಳೆ ತಾಯಿಯನ್ನೂ ಕೆರೆಗೆ ತಳ್ಳಿ ಮನುವಾದೀಯ ಕೃತ್ಯ ಎಸಗಿದ್ದಾನೆ.
ಕೆರೆಗೆ ಬಿದ್ದ ತಾಯಿ ಮಗಳು ಮೃತಪಟ್ಟಿದ್ದಾರೆ. ಘಟನೆಯ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದು, ಮೃತದೇಹಗಳನ್ನು ಹೊರ ತೆಗೆದಿದ್ದಾರೆ.
ಘಟನೆ ಸಂಬಂಧ ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.