ವಾರ್ಡ್ ಕೌನ್ಸಿಲರ್ ಅತ್ಯಾಚಾರ ಮಾಡಿದ್ದಾರೆ ಎಂಬ ದೂರು ಬರೀ ಸುಳ್ಳು: ತನಿಖೆಯಲ್ಲಿ ಬಯಲಾಯ್ತು ಸತ್ಯಾಂಶ

ಮಧ್ಯಪ್ರದೇಶದ ಸಾರಂಗಪುರ್ ನಲ್ಲಿ 2021 ಮಾರ್ಚ್ ನಲ್ಲಿ ಓರ್ವ ಮಹಿಳೆ ವಾರ್ಡ್ ಕೌನ್ಸಿಲರ್ ಶಫೀಕ್ ಅನ್ಸಾರಿ ನನ್ನ ಮೇಲೆ ಅತ್ಯಾಚಾರ ನಡೆಸಿದ್ದಾರೆ ಎಂದು ದೂರು ಸಲ್ಲಿಸಿದ್ದರು. ಈ ಶಫೀಕ್ ರವರ ಮಗನ ವಿವಾಹ ನಿಶ್ಚಯಿಸಿ ಒಂದು ತಿಂಗಳಷ್ಟೇ ಕಳೆದಿತ್ತು. ಬಳಿಕ ಶಫೀಕ್ ರನ್ನೂ ವಿವಾಹ ನಿಶ್ಚಯಿಸಲ್ಪಟ್ಟಿದ್ದ ಅವರ ಮಗ ಮೊಹಮ್ಮದ್ ಅಹ್ ಸನ್ ಮತ್ತೋರ್ವ ಪುತ್ರ ಇಕ್ಬಾಲ್ ಅನ್ಸಾರಿಯನ್ನೂ ಪೊಲೀಸರು ಬಂಧಿಸಿದರು. ತಂದೆಯನ್ನು ಅಡಗಿಸಿಟ್ಟಿದ್ದಾರೆ ಎಂಬ ಕಾರಣಕ್ಕಾಗಿ ಆ ಮಕ್ಕಳನ್ನು ಅರೆಸ್ಟ್ ಮಾಡಲಾಗಿತ್ತು .
ಇವರನ್ನು ಜೈಲಿಗೆ ಹಾಕಿದ ಸಂದರ್ಭದಲ್ಲಿ ಜಿಲ್ಲಾಡಳಿತವು ಬುಲ್ಡೋಜರ್ ಮೂಲಕ ಶಫೀಕ್ ಅನ್ಸಾರಿ ಯವರ ಎರಡು ಅಂತಸ್ತಿನ ಮನೆ ಉರುಳಿಸಿತು. ಈ ಮನೆ ಸುಮಾರು ಎರಡು ಕೋಟಿ ರೂಪಾಯಿ ಬೆಲೆ ಬಾಳುತ್ತಿತ್ತು. ಈ ಪ್ರಕರಣ ನಕಲಿಯಾಗಿದೆ ಮತ್ತು ಶಫೀಕ್ ನಿರಪರಾಧಿ ಎಂದು ರಾಜಗಡ್ ಜಿಲ್ಲಾ ನ್ಯಾಯಾಲಯ ತೀರ್ಪು ನೀಡಿದೆ.
ಶಫೀಕ್ ಅನ್ಸಾರಿ 94 ದಿನಗಳ ಕಾಲ ಜೈಲಲ್ಲಿದ್ದರು.
ದೂರು ಕೊಟ್ಟ ಮಹಿಳೆ ಮತ್ತು ಆಕೆಯ ಪತಿಯ ಹೇಳಿಕೆಗಳಲ್ಲಿ ವೈರುಧ್ಯವಿದೆ ಎಂದು ರಾಜಘಡ್ ಚೀಫ್ ಅಡಿಷನಲ್ ಸೆಷನ್ಸ್ ಜಡ್ಜ್ ತೀರ್ಪು ನೀಡಿದ್ದಾರೆ. ಈ ಮಹಿಳೆ ಮತ್ತು ಆಕೆಯ ಪತಿ ಮಾದಕ ವಸ್ತುಗಳ ವ್ಯಾಪಾರ ನಡೆಸುತ್ತಿರುವುದಾಗಿ ಈ ಮೊದಲು ಶಫೀಕ್ ಅವರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಇದರ ಸಿಟ್ಟಿನಲ್ಲಿ ಅವರು ಅತ್ಯಾಚಾರದ ದೂರು ದಾಖಲಿಸಿದ್ದಾರೆ ಎಂದು ನ್ಯಾಯಾಲಯಕ್ಕೆ ಮನವರಿಕೆಯಾಗಿದೆ. ವೈದ್ಯಕೀಯ ಪರೀಕ್ಷೆಯಲ್ಲಿ ಅತ್ಯಾಚಾರ ನಡೆಸಿರುವುದು ಸಾಬೀತಾಗಿಲ್ಲ.
ಹಾಗೆ ಈ ಘಟನೆಗೆ ಸಂಬಂಧಿಸಿ ದೂರು ನೀಡಿದ ಮಹಿಳೆ ತನ್ನ ಪತಿಗೆ ತಿಳಿಸಲು ವಿಳಂಬಿಸಿರುವುದಕ್ಕೆ ತೃಪ್ತಿಕರವಾದ ಕಾರಣ ಲಭಿಸಿಲ್ಲ ಎಂದು ನ್ಯಾಯಾಲಯ ತಿಳಿಸಿದೆ.
ತಾನು ತನ್ನ ಮಗನ ವಿವಾಹಕ್ಕೆ ನೆರವಾಗಬೇಕು ಎಂದು ಶಫೀಕ್ ಅವರ ಮನೆಗೆ ಹೋದ ಸಂದರ್ಭದಲ್ಲಿ ತನ್ನ ಮೇಲೆ ಅತ್ಯಾಚಾರ ನಡೆದಿದೆ ಎಂದು ದೂರುದಾರೆ ಹೇಳಿದ್ದಳು. ಮಾದಕ ವಸ್ತು ಮಾರಾಟದ ದೂರನ್ನು ಅನುಸರಿಸಿ ಮುನ್ಸಿಪಾಲಿಟಿ ಮಹಿಳೆಯ ಮನೆಯನ್ನು ಉರುಳಿಸಿತ್ತು. ಇದೇ ಸಿಟ್ಟಿನಿಂದ ಈ ಮಹಿಳೆ ಸುಳ್ಳು ದೂರು ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj