ಪೂರಕವಾದ ಹೆಣ್ಣುಮಕ್ಕಳ ಶಿಕ್ಷಣ ಪ್ರಬುದ್ಧ ಭಾರತ ನಿರ್ಮಾಣದ ಅಡಿಪಾಯ        - Mahanayaka
12:09 AM Tuesday 29 - October 2024

ಪೂರಕವಾದ ಹೆಣ್ಣುಮಕ್ಕಳ ಶಿಕ್ಷಣ ಪ್ರಬುದ್ಧ ಭಾರತ ನಿರ್ಮಾಣದ ಅಡಿಪಾಯ       

prajwal mourya
07/03/2024

  • ಪ್ರಜ್ವಲ್ ಮೌರ್ಯ

ಶಿಕ್ಷಣ ಎಂದಕೂಡಲೇ ಪ್ರತಿಯೊಬ್ಬರಿಗೂ ಹೌದು ಎಂದು ಎಚ್ಚರಗೊಳ್ಳುತ್ತಾರೆ. ಏಕೆಂದರೆ ಶಿಕ್ಷಣವು ಎಲ್ಲರಿಗೂ ಅತ್ಯವಶ್ಯವಾಗಿ ಬೇಕಾದುದು , ಮೂಲಭೂತವಾದುದು ಅತ್ಯಂತ ಮೂಲಭೂತವಾದದ್ದು. ಕಾರಣ ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರುವಂತಹದ್ದು ಅದು ಏನೆಂದರೆ ಶಿಕ್ಷಣವು ತುಂಬಾ ಪರಿಣಾಮಕಾರಿಯಾದ ಅಸ್ತ್ರ. ಮಾನವನ ಜೀವನದಲ್ಲಿ ಶಿಕ್ಷಣವು ತುಂಬಾ ಪರಿಣಾಮಕಾರಿಯಾದ ಪಾತ್ರವನ್ನು ವಹಿಸುತ್ತದೆ.

ಒಬ್ಬ ಮನುಷ್ಯ ಹುಟ್ಟುತ್ತ ಏನನ್ನು ಕೂಡ ಭೂಮಿಗೆ ತರುವುದಿಲ್ಲ ಹಾಗೆ ಹೋಗುತ್ತಾ ಏನನ್ನು ಕೂಡ ಒಯ್ಯುವುದಿಲ್ಲ. ಬರಿಗೈನಲ್ಲಿ ಬಂದು ಬರಿಗೈನಲ್ಲಿ ಭೂಲೋಕವನ್ನು ತ್ಯಜಿಸುತ್ತಾನೆ. ಈ ಮಧ್ಯದಲ್ಲಿ ಅವನನ್ನು /ಅವಳನ್ನು ಒಂದು ಸರಿಯಾದ ಪಥಕ್ಕೆ ಕರೆದೊಯ್ಯುವುದು ಶಿಕ್ಷಣ ಮಾತ್ರ. ಅಂದರೆ ಒಂದು ವಿಷಯವಾದರೂ ಸರಿ ಕಾರ್ಯವಾದರೂ ಸರಿ ಅವರು ತೊಡಗಿಸಿಕೊಳ್ಳ ಬೇಕಾದರೆ ಅದು ತನ್ನ ಒಳಮನಸ್ಸಿನ ಸ್ವಚಿಂತನೆಯಿಂದ. ಆ ಸ್ವಚಿಂತನೆಯನ್ನು ಪ್ರತಿಯೊಬ್ಬ ನಲ್ಲಿ ಮೂಡಿಸುವುದೇ ಶಿಕ್ಷಣ.

ಶಿಕ್ಷಣವೆಂದರೆ ಅದು ಯಾವುದೇ ಒಂದು ವಿಷಯವನ್ನು ಹೇಗೆ ಅರ್ಥೈಸಿಕೊಳ್ಳಬೇಕು ಹಾಗೂ ಯಾವುದೇ ಕಾರ್ಯವನ್ನು ಯಾವ ರೀತಿ ಕಾರ್ಯಗತಗೊಳಿಸಬೇಕು, ಆ ಕೆಲಸವನ್ನು ಮಾಡಬೇ ಕೋ?? ಬೇಡವೋ?? ಹಾಗೂ ವಿಷಯ ಸರಿಯೋ?? ತಪ್ಪೋ?? ಹೀಗೆ ತಮ್ಮನ್ನು ತನ್ನ ಮನಸ್ಸಾಕ್ಷಿ ಇಂದ ಚಿಂತನೆಗೆ ಹಚ್ಚುವುದು. ಹಾಗೂ ಅವರನ್ನು ಮಾರ್ಪಡಿಸುವ ಒಂದು ಪ್ರಮುಖವಾದ ವಿಧಾನ.

ಶಿಕ್ಷಣವೆಂದರೆ ಒಬ್ಬ ಮಾನವನ ಮೆದುಳನ್ನು ತರಬೇತುಗೊಳಿಸುವ ವಿಧಾನ. ಅಂದರೆ ಯಾವುದೇ ಸಂದರ್ಭವನ್ನು ಹೇಗೆ ನಿಭಾಯಿಸಬೇಕು ಯಾವುದೇ ಸಮಸ್ಯೆಯನ್ನು ಹೇಗೆ ನಿವಾರಿಸಬೇಕು ಹಾಗೂ ಯಾವ ಸಮಯದಲ್ಲಿ ಹೇಗೆ ನಡವಳಿಕೆಯನ್ನು ರೂಡಿಸಿಕೊಳ್ಳಬೇಕು ಎಂದು  ಮಾನವನ ಅಥವಾ ವಿದ್ಯಾರ್ಥಿಗಳ ಮೆದುಳನ್ನು ತರಬೇತುಗೊಳಿಸುವ ಒಂದು ಕಾರ್ಯವಿಧಾನ.

ಅನಾದಿಕಾಲದಿಂದಲೂ ಇಲ್ಲಿಯವರೆಗೆ ಕೆಲವು ಅರ್ಥವಿಲ್ಲದ ನಂಬಿಕೆಗಳು ಜನಸಾಮಾನ್ಯರ ಮನಸ್ಸಿನಲ್ಲಿ ಮನೆಮಾಡಿವೆ. ಅಂದರೆ ನಮ್ಮ ಪೂರ್ವಿಕರಿಂದ ನಮ್ಮಗಳ ಈ ದಿನಗಳವರೆಗೂ ಕೆಲವೊಂದು ಅರ್ಥವಿಲ್ಲದ ನಂಬಿಕೆಗಳು ಬಹುತೇಕ ಎಲ್ಲರ ಮನಸ್ಸಿನಲ್ಲೂ ಬೇರೂರಿವೆ.

ಅದು ಏನೆಂದರೆ ಓದು ಅಥವಾ ಶಿಕ್ಷಣ ಜೀವನಕ್ಕೆ ಅವಶ್ಯಕವೇ ಅಷ್ಟೊಂದು ಅವಶ್ಯಕವೇ?? ಎಂಬುದು. ಇನ್ನೊಂದು ಅದುವೇ ಲಿಂಗಬೇಧ. ಅಂದರೆ ಗಂಡು ಮಕ್ಕಳಿಗೆ ಶಿಕ್ಷಣ ಬೇಕು ಆದರೆ ಇನ್ನೊಂದು ಮನೆಯನ್ನು ತಲುಪುವ ಅಥವಾ ಮನೆಯಲ್ಲಿ ಮನೆಗೆಲಸಗಳನ್ನು ಮಾಡುವ ಹೆಣ್ಣುಮಕ್ಕಳಿಗೇಕೆ ಶಿಕ್ಷಣ ಎಂಬ ನಂಬಿಕೆ ಇವತ್ತಿಗೂ ನಮ್ಮ ಸಮಾಜದ ಮಾನವರ ಮನಸ್ಸಿನಲ್ಲಿ ಬೀಡುಬಿಟ್ಟಿದೆ.(ಹಲವಾರು ಕುಟುಂಬಗಳಲ್ಲಿ) ಕೆಲವರಲ್ಲಿ ತುಂಬಾ ಆಳವಾಗಿ , ಒಂದು ಮೂಢನಂಬಿಕೆ ಯಂತೆ ಹೆಣ್ಣುಮಕ್ಕಳಿಗೇಕೆ ಶಿಕ್ಷಣ ಎಂಬ ಅಸಡ್ಡೆ ಹಾಗೂ ನಿರಾಸಕ್ತಿ ಇದ್ದರೆ ಮತ್ತೊಂದೆಡೆ ಇನ್ನೂ ಕೆಲವರಲ್ಲಿ ಬದುಕಲು ಬೇಕಾಗಿರುವುದು  ಶಿಕ್ಷಣವಲ್ಲ ,ಪುಸ್ತಕಗಳಲ್ಲ,  ಜೀವನದಲ್ಲಿ ಹಣದ ಮುಂದೆ ಬೇರಾವುದೂ ಇಲ್ಲ ಎಂಬ ಕ್ರೂರವಾದ ಚಿಂತನೆ ಹಾಗೂ ಹಾಸ್ಯಾಸ್ಪದ ವೆನಿಸುವ ಚಿಂತನೆಯು ಕೂಡ ಇದೆ.

ಹಿಂದೆಯೇನೋ ತಿಳುವಳಿಕೆಯ ಕೊರತೆಯೋ ಅಥವಾ ವ್ಯವಸ್ಥೆಯ ಕೊರತೆಯೋ ಹೆಣ್ಣುಮಕ್ಕಳಿಗೆ ಶಿಕ್ಷಣದ ಅವಶ್ಯಕತೆ ಇಲ್ಲ ಎಂಬ ನಂಬಿಕೆ ಇತ್ತು ಹಾಗೂ ಅದು ಈಗಿನ ದಿನಗಳಲ್ಲೂ ಕೂಡ ಅದೇ ಅಭಿಪ್ರಾಯ ಕೆಲವರಲ್ಲಿ ಹಾಗೆ ಉಳಿದಿರುವುದು ನಮ್ಮ ನಾಡಿನ ದೇಶದ ದುರಂತವೇ ಸರಿ ಎಂದು ಹೇಳಿದರು ತಪ್ಪಾಗಲಾರದು.

ಹೆಣ್ಣು ಅಂದರೆ ಒಬ್ಬ ಮನುಷ್ಯನ ಜೀವನದಲ್ಲಿ ಮಹತ್ತರವಾದುದನ್ನು ಹಾಗೂ ತುಂಬಾ ಪ್ರಮುಖವಾದ ಜವಾಬ್ದಾರಿಗಳನ್ನು ಕರ್ತವ್ಯಗಳನ್ನು, ನಿರ್ವಹಿಸುವಾಕೆ, ಎಲ್ಲದಕ್ಕಿಂತ ಹೆಚ್ಚಾಗಿ ತನ್ನ ದೇಹದ ರಚನೆಯ ಮೂಲಕ ಪ್ರತಿಯೊಂದು ಜೀವಿಯನ್ನು ಈ ಭೂಮಿಗೆ ತರುವಾಗ ಎಲ್ಲರನ್ನು ಪ್ರೀತಿಯಿಂದ, ಕಾಳಜಿಯಿಂದ ಪೊರೆಯುವಾಕೆ. ಆದ್ದರಿಂದಲೇ ಕನ್ನಡ ನವೋದಯ ಸಾಹಿತ್ಯದ ಕವಿಗಳು ಪ್ರಕೃತಿಯನ್ನು ಹಾಗೂ ಭೂಮಿಯನ್ನು ಹೆಣ್ಣಿಗೆ ಹೋಲಿಸಿರುವುದು. ಅಂದರೆ ಅಷ್ಟು ಪ್ರಮುಖವಾದ ಪಾತ್ರವನ್ನು ಹೆಣ್ಣು ಸಮಾಜದಲ್ಲಿ ವಹಿಸುತ್ತಾರೆ.

ಇಂದಿನ ದಿನಗಳಲ್ಲಿದೇಶದಲ್ಲಿನ ಚಟುವಟಿಕೆಗಳು, ವಿದ್ಯಮಾನಗಳು, ಅಯೋಮಯ. ಅಂದರೆ ಆಶ್ಚರ್ಯ ವಿಭಿನ್ನ ಎಂದರೆ ತಪ್ಪಾಗಲಾರದು.  ಏಕೆಂದರೆ ಬಹುತೇಕ ಯಾರು ಕೂಡ ತಾವು ತಪ್ಪನ್ನ ಮಾಡಿದಾಗ  ನಾನು ನಾವು ತಪ್ಪನ್ನು ಮಾಡುತ್ತಿದ್ದೇವೆ/ ಮಾಡುತ್ತಿದ್ದೇನೆ.  ಇದರಿಂದ ಮುಂದಿನ ಪೀಳಿಗೆಗೆ ಸಮಾಜಕ್ಕೆ ಎಂತಹ ಸಂದೇಶ ಹೋಗುತ್ತದೆ ಎಂಬ ಅರಿವು ಇದ್ದಂತೆ ಕಾಣುವುದಿಲ್ಲ. ಸಮಾಜವು ಇರಲಿ ತಮ್ಮ ಕುಟುಂಬದ ಸದಸ್ಯರಿಗೆ ಮಕ್ಕಳಿಗೆ ಬಂಧು ಬಳಗದವರಿಗೆ ಆತ್ಮೀಯ ಸ್ನೇಹಿತರಿಗೆ ಮುಖ್ಯವಾಗಿ ಬೆಳೆಯುವ ಪೈರು ಮೊಳಕೆಯಲ್ಲಿ ಎಂಬಂತೆ ಬೆಳೆಯುತ್ತಿರುವ ಮಕ್ಕಳ ಮನಸ್ಸುಗಳ ಮೇಲೆ ಎಂತಹ ಪರಿಣಾಮವನ್ನು ಬೀರುತ್ತದೆ ಎಂಬ ಕನಿಷ್ಠ ಪರಿಜ್ಞಾನವೂ ಇದೆಯೋ ಇಲ್ಲವೋ ತಿಳಿದಿದೆಯೋ ತಿಳಿದಿಲ್ಲವೋ ಗೊತ್ತಿಲ್ಲವೆಂಬಂತಾಗಿದೆ. ಅಥವಾ ಇಲ್ಲವೆಂಬಂತೆ ಕಾಣುತ್ತದೆ

ಹಾಗೆ ಇವತ್ತಿನ ದಿನಗಳಲ್ಲಿ ಹೆಣ್ಣುಮಕ್ಕಳ ಶಿಕ್ಷಣವು ದೇಶದ ಸಾಕ್ಷರತಾ ಪ್ರಮಾಣವನ್ನು ನೋಡಿದಾಗ ಅದರಲ್ಲೂ ಕೂಡ ಕಡಿಮೆ ಇರುವುದು ವಿಪರ್ಯಾಸವೇ ಸರಿ. ಇದೆಲ್ಲವನ್ನು ಗಮನದಲ್ಲಿ ಇಟ್ಟುಕೊಂಡು ನೋಡಿದಾಗ ಕನ್ನಡ ಸಾಹಿತ್ಯ ಕಾನನದ ಮಹಾ ತಪಸ್ವಿಗಳಾದ ಶ್ರೀಯುತ ಕೆಪಿ ಪೂರ್ಣಚಂದ್ರ ತೇಜಸ್ವಿಯವರು ಹೇಳಿರುವ ಮಾತು ಪ್ರಸ್ತುತ ಹಾಗೂ ನೆನಪಿಗೆ ಬರುತ್ತದೆ. ಅದುವೇ ದೇಶದ ಬಗ್ಗೆಯ ಕಳಕಳಿ ಸಾಮಾಜಿಕ ಜವಾಬ್ದಾರಿ ಬೇರೆಯವರಿಂದ ಅಪೇಕ್ಷಿಸುವಂತದೇ  ಅಲ್ಲ ಅದು ಪ್ರತಿಯೊಬ್ಬರಲ್ಲೂ ಅಂದರೆ ನಮ್ಮಲ್ಲೇ ಇರಬೇಕಾದುದು.

ಸಾಮಾಜಿಕ ಜವಾಬ್ದಾರಿ ಎಂಬುದು ಎಲ್ಲಿಂದ ಬರುತ್ತೆ ಬರುವುದು. ಇದಕ್ಕೆ ಉತ್ತರ ಸಾಮಾಜಿಕ ಜವಾಬ್ದಾರಿ ಎಂಬುದು ಬರುವುದು ತಮ್ಮ ದಿನನಿತ್ಯದ ಚಟುವಟಿಕೆಗಳ ಅಭ್ಯಾಸದಿಂದ ಹಾಗೂ ಶಿಕ್ಷಣದಿಂದ. ಅದು ಎಲ್ಲರಲ್ಲೂ ಬರಬೇಕಾದರೆ ಮೌಲ್ಯಯುತವಾದ ಶಿಕ್ಷಣದಿಂದ ಮಾತ್ರ ಸಾಧ್ಯ.

ನಾಗಾಲ್ಯಾಂಡ್ ಕೊಹಿಮಾ ಜಿಲ್ಲೆಯ 23 ಸರ್ಕಾರಿ ಶಾಲೆಗಳಲ್ಲಿನ ಫಲಿತಾಂಶ ಶೂನ್ಯ ಎಂದು ದಾಖಲಾಗಿದೆ ಅಲ್ಲದೆ ಹಿಂದಿನ ಪ್ರೌಢಶಾಲಾ ಶಿಕ್ಷಣದ ಪರೀಕ್ಷಾ ಪ್ರಮಾಣಪತ್ರದ ಪರೀಕ್ಷೆಯಲ್ಲಿ ಶೂನ್ಯ ಫಲಿತಾಂಶವು ದಾಖಲಾಗಿದೆ ಇದು ಆಶ್ಚರ್ಯ ಸೂಚಕವೂ ಹಾಗೂ ಚಿಂತನೆಗೆ ಹಚ್ಚುವ ವಿಷಯವೂ ಹೌದು.

2) ನಾಗಾಲ್ಯಾಂಡ್ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಉತ್ತೀರ್ಣ ಪ್ರಮಾಣವು ಶೇಕಡ 48 ರಿಂದ ಶೇ42 ಕ್ಕೆ ಕುಸಿದಿದೆ. ಹಾಗೂ ಇಲ್ಲಿನ ಗುಡ್ಡಗಾಡು ಪ್ರದೇಶಗಳಲ್ಲಿ ಆಗಿರುವ ಬಾಲ್ಯ ವಿವಾಹಗಳು ಕೂಡ ಶಿಕ್ಷಣದ ಪ್ರಗತಿಗೆ ಬಿದ್ದ ಹೊಡೆತವೆಂದೇ ಹೇಳಲಾಗಿದೆ. ಹಾಗೆ ಕರ್ನಾಟಕದಲ್ಲೂ ಕೂಡ ಹಲವಾರು ಪ್ರಕರಣಗಳು ನಡೆದಿವೆ.

ಕಲ್ಯಾಣ ಕರ್ನಾಟಕ ಹಾಗೂ ಹಿಂದುಳಿದ ಜಿಲ್ಲೆಗಳಲ್ಲಿ ತಿಳುವಳಿಕೆಯ ಕೊರತೆಯಿಂದಾಗಿ ಈ ಸಾಂಕ್ರಾಮಿಕ ದ ಲಾಕ್ ಡೌನ್ ಸಮಯದಲ್ಲಿ ಹಲವಾರು ಬಾಲ್ಯ ವಿವಾಹಗಳು ಹಾಗೂ ಬಾಲ ಕಾರ್ಮಿಕರು ಹೆಚ್ಚಾಗಿವೆ. ಇದಕ್ಕೆ ಕಾರಣ ಬಡತನ ಹಾಗೂ ಶಿಕ್ಷಣದ ಕೊರತೆ ತಿಳುವಳಿಕೆಯ ಕೊರತೆ. ಇದಕ್ಕೆಲ್ಲಾ ಕಡಿವಾಣ ಹಾಕಲು ಸುಲಭವಾದ ಮಾರ್ಗ ಅದುವೇ ಶಿಕ್ಷಣ, ತಿಳುವಳಿಕೆ. ಪ್ರಮುಖವಾಗಿ ಪೂರಕವಾದ ಹೆಣ್ಣು ಮಕ್ಕಳ ಶಿಕ್ಷಣ.

ಮತ್ತೊಮ್ಮೆ ಖಚಿತವಾಗಿ ಹೇಳುತ್ತಿದ್ದೇನೆ ಇಲ್ಲಿ ಗಂಡುಮಕ್ಕಳ ಶಿಕ್ಷಣವು ಅವಶ್ಯಕವಲ್ಲ ಎಂಬುದು ನನ್ನ ವಾದವಲ್ಲ. ಮನೆಯಲ್ಲಿನ ಹೆಣ್ಣುಮಗಳು ಅಥವಾ ತಾಯಿ ಶಿಕ್ಷಣವನ್ನು ಪಡೆದರೆ ಮನೆಯ ಯಾವ ಸದಸ್ಯರನ್ನು ಶಿಕ್ಷಣದಿಂದ ವಂಚಿತರಾಗಲು ಬಿಡುವುದಿಲ್ಲ ಎಂಬುದು ಬಹುತೇಕ ಸತ್ಯಕ್ಕೆ ತುಂಬಾ ಹತ್ತಿರವಾದ ಹಾಗೂ ಎಲ್ಲರಿಗೂ ಗೊತ್ತಿರುವ ಸಂಗತಿಯಾಗಿದೆ.

ಹಾಗಾಗಿ,  ಪ್ರಸ್ತುತ ಸಮಾಜದ ಪರಿವರ್ತನೆಗಾಗಿ, ಮೌಲ್ಯಯುತ ಶಿಕ್ಷಣಕ್ಕಾಗಿ ,ಪ್ರಬುದ್ಧ ಭಾರತದ ನಿರ್ಮಾಣಕ್ಕಾಗಿ, ಲಿಂಗಭೇದವಿಲ್ಲದ ಸಮಾನವಾದ ಪೂರಕವಾದ ಮೌಲ್ಯಯುತವಾದ ಹಾಗೂ ನೈತಿಕತೆಯಿಂದ ಕೂಡಿದ ಶಿಕ್ಷಣವು ಬಹು ಮುಖ್ಯವಾಗಿದೆ. ಕೊನೆಯದಾಗಿ ನಮ್ಮ ನಿಮ್ಮೆಲ್ಲರ ನಿಲುವು ಪ್ರಬುದ್ಧ ಭಾರತ ನಿರ್ಮಾಣ ಹಾಗಾಗಿ ಎಲ್ಲರೂ ಯಾವುದೇ ಪೂರ್ವಗ್ರಹ ಪೀಡಿತರಾಗದೆ ಅವೈಜ್ಞಾನಿಕ ಹುಸಿಯಾದ ನಂಬಿಕೆಗಳಿಗೆ ದಾಸರಾಗದೆ ಎಲ್ಲರಿಗೂ ಸಮಾನವಾದ ಮೌಲ್ಯ ಆಧಾರಿತ ನೈತಿಕ ಶಿಕ್ಷಣವನ್ನು ನೀಡುವಲ್ಲಿ ಮುಂದಾಗೋಣ ಈ ಮೂಲಕ ಮಾನವನಲ್ಲಿರುವ ಮೌಡ್ಯ, ಸಣ್ಣತನ ಪೂರ್ವಗ್ರಹಪೀಡಿತ ನಂಬಿಕೆಗಳು( ಹೆಣ್ಣುಮಕ್ಕಳಿಗೇಕೆ ಶಿಕ್ಷಣವೆಂಬ ನಂಬಿಕೆ) ಆಷಾಡಭೂತಿ ತನು ಕಪಟತನ ವನ್ನು ತ್ಯಜಿಸುವ  ಮೂಲಕ ಹಾಗೂ ತಿಳುವಳಿಕೆಯ ಮೂಲಕ ಪ್ರತಿಯೊಬ್ಬರೂ ಪ್ರಭುದ್ಧ ಭಾರತದ ನಿರ್ಮಾಣದಲ್ಲಿ ಕೈ ಜೋಡಿಸೋಣ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ