ಕೈದಿಗಳಿಗೆ ಕಂಪ್ಯೂಟರ್ ಕಲಿಕೆ: ಕಾರಾಗೃಹ ಬಂಧಿಗಳ ಬದುಕು ಬದಲಿಸುವ ಯತ್ನ!! - Mahanayaka

ಕೈದಿಗಳಿಗೆ ಕಂಪ್ಯೂಟರ್ ಕಲಿಕೆ: ಕಾರಾಗೃಹ ಬಂಧಿಗಳ ಬದುಕು ಬದಲಿಸುವ ಯತ್ನ!!

chamarajanagar 3
16/11/2023

ಚಾಮರಾಜನಗರ: ಕಂಪ್ಯೂಟರ್ ಕಲಿಕೆ‌ ಮೂಲಕ ವಿಚಾರಣಾ ಕೈದಿಗಳು, ಕಾರಗೃಹ ಬಂಧಿಗಳು ಭವಿಷ್ಯದಲ್ಲಿ ಬದುಕು ಬದಲಿಸಿಕೊಳ್ಳಬೇಕೆಂದು ಕಂಪ್ಯೂಟರ್ ಶಿಕ್ಷಣ ಆರಂಭ ಮಾಡಿರುವ ವಿಶೇಷ ಯೋಜನೆ ಚಾಮರಾಜನಗರ ಜಿಲ್ಲಾ ಕಾರಾಗೃಹದಲ್ಲಾಗಿದೆ.

ರಾಜ್ಯದಲ್ಲೇ ಮೊದಲು ಎನ್ನಬಹುದಾದ ಕಾರಾಗೃಹ ಬಂಧಿಗಳಿಗೆ ಕಂಪ್ಯೂಟರ್ ಶಿಕ್ಷಣ ತರಬೇತಿಯನ್ನು ನೀಡುವ ವಿನೂತನ ಕಾರ್ಯಕ್ರಮ ಚಾಮರಾಜನಗರ ಕಾರಾಗೃಹದಲ್ಲಿ ಆರಂಭಗೊಂಡಿದ್ದು ಇನ್‍ಫೋಸಿಸ್ ರೋಟರಿ ಪಂಚಶೀಲ ಸಹಯೋಗದಿಂದ ಈ ಯೋಜನೆ ಆರಂಭಗೊಂಡಿದೆ.

ಕಾರಾಗೃಹ ಬಂಧಿಗಳಿಗೆ ಕಾರಾಗೃಹದಲ್ಲೇ ಕಂಪ್ಯೂಟರ್ ತರಬೇತಿ ಪಡೆಯಲು ಸುಸಜ್ಜಿತ ಕೊಠಡಿಯಲ್ಲಿ 10 ಕಂಪ್ಯೂಟರ್ ಮತ್ತು ಪ್ರಿಂಟರ್ ಗಳನ್ನು ಇನ್ಫೋಸಿಸ್ ನೀಡಿದೆ ಜೊತೆಗೆ ತರಬೇತಿದಾರರನ್ನು ನಿಯೋಜಿಸಲಾಗಿದೆ.


Provided by

ಕಂಪ್ಯೂಟರ್ ಶಿಕ್ಷಣದ ಜೊತೆಗೆ ಕಲಿಕಾರ್ಥಿಗಳಿಗೆ ಸುಲಭವಾಗಿ ಕಂಪ್ಯೂಟರ್ ಅರ್ಥೈಸುವ ಕನ್ನಡ ಕಿರುಪುಸ್ತಕಗಳನ್ನು ಇಡಲಾಗಿದೆ. ಕಂಪ್ಯೂಟರ್ ಕಲಿತ ಬಳಿಕ ಉದ್ಯೋಗ ಪಡೆದು ಬದುಕು ಬದಲಿಸಿಕೊಳ್ಳಲಿ ಎಂಬ ಮಾದರಿ ಉದ್ದೇಶ ಈ ಯೋಜನೆ ಹಿಂದಿದ್ದು ಬುಧವಾರ ಸಂಜೆ ಈ ಕಲಿಕೆ ಕಾರ್ಯಕ್ರಮಕ್ಕೆ ಚಾಲನೆ ಕೊಡಲಾಗಿದೆ.

ಸ್ವಂತ ಶಕ್ತಿ ಮೇಲೆ ಜೀವನ ರೂಪಿಸಿಕೊಳ್ಳಿ: ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಈ ಸಂಬಂಧ ಮಾತನಾಡಿ, ಕೆಲ ದಿನಗಳ ಹಿಂದೆ ಸಾಕ್ಷರತಾ ಕಾರ್ಯಕ್ರಮಕ್ಕಾಗಿ ಕಾರಾಗೃಹಕ್ಕೆ ಬಂದ ವೇಳೆ ಕಾರಾಗೃಹ ಬಂಧಿಗಳಿಗೂ ಕಂಪ್ಯೂಟರ್ ಶಿಕ್ಷಣ ನೀಡಬೇಕೆಂಬ ಆಲೋಚನೆ ಬಂತು. ಅಂದೇ ಕಾರ್ಯಕ್ರಮದಲ್ಲಿ ಕಂಪ್ಯೂಟರ್ ಶಿಕ್ಷಣ ತರಬೇತಿಗೆ ಕ್ರಮವಹಿಸುವುದಾಗಿ ಭರವಸೆ ನೀಡಿದ್ದೆ. ಇನ್‍ಫೋಸಿಸ್ ಸೇರಿದಂತೆ ಇತರೆ ಸಂಸ್ಥೆಗಳು ನಮ್ಮ ಮನವಿಗೆ ಒಗೊಟ್ಟು ಇಲ್ಲಿನ ಬಂಧಿಗಳಿಗೆ ಅತ್ಯಾಧುನಿಕ 10 ಕಂಪ್ಯೂಟರ್, ಪ್ರಿಂಟರ್‍ಗಳನ್ನು ನೀಡಿ ತರಬೇತಿಗೆ ಅಗತ್ಯ ಸಿಬ್ಬಂದಿ ನಿಯೋಜಿಸಿದೆ.

ಕಾರಾಗೃಹದಲ್ಲಿ ಇರುವ ಸಮಯ ಸದುಪಯೋಗವಾಗಲಿ. ಇಲ್ಲಿಂದ ಹೊರಹೋದ ಮೇಲೆ ಸ್ವಂತ ಶಕ್ತಿಯ ಮೇಲೆ ಜೀವನ ರೂಪಿಸಿಕೊಳ್ಳಬೇಕು ಎಂಬ ಉದ್ದೇಶದಿಂದ ಕಂಪ್ಯೂಟರ್ ತರಬೇತಿಗೆ ವ್ಯವಸ್ಥೆ ಮಾಡಲಾಗಿದೆ. ಹೆಚ್ಚು ಓದಿಲ್ಲದೆ ಇರುವವರು ಸಹ ಕಂಪ್ಯೂಟರ್ ಕಲಿಯಲು ಅವಕಾಶವಿದೆ. ಇಲ್ಲಿ ಅನೇಕ ಬಗೆಯ ಕಂಪ್ಯೂಟರ್ ತರಬೇತಿ ನೀಡಲಾಗುತ್ತದೆ. ಈಗಿರುವ ಗ್ರಂಥಾಲಯದ ಜೊತೆ ಇ ಲೈಬ್ರರಿ ಸಹ ಆರಂಭಿಸಿದರೆ ಬಂಧಿಗಳಿಗೆ ಅವರವರ ಭಾಷೆಯಲ್ಲಿಯೇ ಓದಲು ಅನುಕೂಲ ಮಾಡಿಕೊಡಬಹುದು ಎಂದು ತಿಳಿಸಿದರು.

ಇತ್ತೀಚಿನ ಸುದ್ದಿ