ಬೆಳ್ತಂಗಡಿಯಲ್ಲಿ ಮುಗಿಲು ಮುಟ್ಟಿದ ಕಾಂಗ್ರೆಸ್ ಬಣ ರಾಜಕೀಯ: ಎರಡೂ ಬಣಗಳಿಂದ ಶಕ್ತಿ ಪ್ರದರ್ಶನಕ್ಕೆ ವೇದಿಕೆ ಸಿದ್ದ - Mahanayaka
12:52 AM Wednesday 11 - December 2024

ಬೆಳ್ತಂಗಡಿಯಲ್ಲಿ ಮುಗಿಲು ಮುಟ್ಟಿದ ಕಾಂಗ್ರೆಸ್ ಬಣ ರಾಜಕೀಯ: ಎರಡೂ ಬಣಗಳಿಂದ ಶಕ್ತಿ ಪ್ರದರ್ಶನಕ್ಕೆ ವೇದಿಕೆ ಸಿದ್ದ

belthangady
13/12/2022

ಬೆಳ್ತಂಗಡಿ: ವಿಧಾನ ಸಭಾ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಬೆಳ್ತಂಗಡಿಯ ಕಾಂಗ್ರೆಸ್ ಪಕ್ಷದಲ್ಲಿ ಒಂದೆಡೆಯಿಂದ ಬಣ ರಾಜಕೀಯ ತೀವ್ರಗೊಂಡರೆ, ಮತ್ತೊಂದೆಡೆಯಿಂದ ಯುವ ಅಭ್ಯರ್ಥಿಗಾಗಿ ಬೇಡಿಕೆ ತೀವ್ರಗೊಂಡಿದೆ.

ಇದೀಗ ಬೆಳ್ತಂಗಡಿಯಲ್ಲಿ ಮಾಜಿ ಶಾಸಕ ಕೆ.ವಸಂತ ಬಂಗೇರ ಅವರು ಚುನಾವಣಾ ರಾಜಕೀಯದಿಂದ ದೂರ ಸರಿದಂತೆ ಕಾಣಿಸುತ್ತಿದ್ದು, ಮಾಜಿ ಸಚಿವ ಕೆ.ಗಂಗಾಧರ ಗೌಡ ಹಾಗೂ ಯುವ ನಾಯಕ ರಕ್ಷಿತ್ ಶಿವರಾಂ ಅವರೇ ಪ್ರಮುಖ ಆಕಾಂಕ್ಷಿಗಳಾಗಿ ಕಾಣಿಸುತ್ತಿದ್ದಾರೆ.

ಕಳೆದ ಒಂದು ದಶಕದಿಂದ ರಾಜಕೀಯದಿಂದ ದೂರ ಸರಿದಿದ್ದ ಗಂಗಾಧರ ಗೌಡ ಅವರು ಇದೀಗ ಪಕ್ಷದ ಟಿಕೇಟಿಗಾಗಿ ಪ್ರಯತ್ನಿಸುತ್ತಿರುವುದು ಕಾಂಗ್ರೆಸ್ ಕಾರ್ಯಕರ್ತರಲ್ಲಿಯೇ ಅಸಮಾಧಾನಕ್ಕೆ ಕಾರಣವಾಗಿದೆ. ಪಕ್ಷದಲ್ಲಿನ ಒಂದು ದೊಡ್ಡ ಬಣ ರಕ್ಷಿತ್ ಶಿವರಾಂ ಅವರಿಗಾಗಿಯೇ ಬೇಡಿಕೆ ಮುಂದಿಡುತ್ತಿದ್ದಾರೆ. ರಕ್ಷಿತ್ ಅವರಿಗೆ ಟಿಕೆಟು ಖಚಿತವಾಗಿದೆ ಎಂಬ ವಿಶ್ವಾಸ ಇಲ್ಲಿನ ಕಾಂಗ್ರೆಸ್ ನ ಒಂದು ಬಣದ ಕಾರ್ಯಕರ್ತರದ್ದಾಗಿದೆ. ಯುವಕರಿಗೆ ಅವಕಾಶ ನೀಡಬೇಕು ಎಂಬ ಚಿಂತನೆ ಪಕ್ಷದಲ್ಲಿ ವ್ಯಾಪಕವಾಗಿರುವುದು ತಮಗೆ ಪ್ರಯೋಜನವಾಗಲಿದೆ ಎಂಬುದು ರಕ್ಷಿತ್ ಬೆಂಬಲಿಗರ ವಾದ. ಪಕ್ಷದಲ್ಲಿನ ಹಿರಿಯ ಮುಖಂಡರ ಬೆಂಬಲ ಇದೆ ಎಂಬುದು ರಕ್ಷಿತ್ ವಿಶ್ವಾಸಕ್ಕೆ ಕಾರಣವಾಗಿದೆ.

ಕಾಂಗ್ರೆಸ್ ಪಕ್ಷದಲ್ಲಿನ ಬಣ ರಾಜಕೀಯವನ್ನು ಶಮನಗೊಳಿಸುವ ನಿಟ್ಟಿನಲ್ಲಿ ಜಿಲ್ಲಾ ಅಧ್ಯಕ್ಷ ಹರೀಶ್ ಕುಮಾರ್ ಅವರು ನಡೆಸಿದ ಪ್ರಯತ್ನಗಳು ಒಂದಿಷ್ಟು ಪರಿಣಾಮ ಬೀರಿರುವಂತೆ ಕಾಣಿಸುತ್ತಿದೆ.  ಆದರೆ ನಿರಂತರವಾಗಿ ಬಿಜೆಪಿ ವಿರುದ್ದ ಹೋರಾಡುತ್ತಿದ್ದ ಕಾಂಗ್ರೆಸ್ ಕಾರ್ಯಕರ್ತರು ಕಳೆದ ಒಂದು ತಿಂಗಳನಿಂದ ಪರಸ್ಪರ ಕೆಸರೆರೆಚಾಟದಲ್ಲಿ ನಿರರಾಗಿದ್ದಾರೆ ಎಂಬುದು ವಿಶೇಷ.

ಕಾಂಗ್ರೆಸ್ ಬಣಗಳ ಶಕ್ತಿ ಪ್ರದರ್ಶನಕ್ಕೆ ವೇದಿಕೆ ಸಿದ್ದ:

ಕಾಂಗ್ರೆನ ‌ಬಣ ರಾಜಕೀಯ ಮುಗಿಲು ಮುಟ್ಟಿರುವಾಗಲೇ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಳ್ತಂಗಡಿಗೆ ಆಗಮಿಸುತ್ತಿದ್ದಾರೆ. ರಂಜನ್ ಜಿ. ಗೌಡ  ಅವರ ನೇತೃತ್ವದಲ್ಲಿ ನಡೆಯುವ ಕಾಂಗ್ರೆಸ್ ಕಾರ್ಯಕರ್ತರ ಕಬಡ್ಡಿ ಪಂದ್ಯಾಟದ ಉದ್ಘಾಟನೆ ನೆರವೇರಿಸಲಿದ್ದಾರೆ.  ಕಾರ್ಯಕ್ರಮಕ್ಕೆ ಭಾರೀ ಪ್ರಮಾಣದಲ್ಲಿ ಜನ ಸೇರಿಸುವ ಪ್ರಯತ್ನದಲ್ಲಿ ಪಕ್ಷದ ಮುಖಂಡರುಗಳು ಪ್ರಯತ್ನಿಸುತ್ತಿದ್ದಾರೆ. ಇದರ ಬೆನ್ನಿಗೆ ಭಾನುವಾರದಿಂದ ರಕ್ಷಿತ್ ಶಿವರಾಂ ನೇತೃತ್ವದಲ್ಲಿ ನೇತ್ರಾವತಿ ಉಳಿಸಿ ಪಾದಯಾತ್ರೆ ಮುಂಡಾಜೆಯಿಂದ ಉಪ್ಪಿನಂಗಡಿಯವರೆಗೆ ಮೂರು ದಿನಗಳ ಕಾಲ ನಡೆಯಲಿದ್ಧು, ಇವರೂ ಜನ ಸೇರಿಸುವ ಪ್ರಯತ್ನದಲ್ಲಿದ್ದಾರೆ. ಈ ಎರಡೂ ಕಾರ್ಯಕ್ರಮಗಳು ಎರಡೂ ಬಣಗಳ ಶಕ್ತಿ ಪ್ರದರ್ಶನಕ್ಕೆ ವೇದಿಕೆಯಾಗಲಿದೆ.  ಈ ಎರಡು ಕಾರ್ಯಕ್ರಮಗಳು ಬೆಳ್ತಂಗಡಿಯಲ್ಲಿ ಕಾಂಗ್ರೆಸ್ ಪಕ್ಷದ ಭವಿಷ್ಯ ನಿರ್ಧರಿಸುವಲ್ಲಿ ಮಹತ್ವದ್ದಾಗಲಿದೆ.

ಕಾಂಗ್ರೆಸ್ ನ ಬಣ ರಾಜಕೀಯದ ನಡುವೆ ಸದ್ದಿಲ್ಲದೆ ಪಕ್ಷದ ಕಾರ್ಯಕರ್ತರನ್ನು ಬಿಜೆಪಿ ತನ್ನತ್ತ ಸೆಳೆಯುತ್ತಿದ್ಧು, ಮುಖಂಡರುಗಳು ಟಿಕೇಟು ಅಂತಿಮಗೊಳಿಸಿ ಬರುವಾಗ ಇಲ್ಲಿ ಕಾರ್ಯಕರ್ತರು ಇರುತ್ತಾರೋ ಎಂಬುದು ಕಾದು ನೋಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LwWxa0YtfZe3V04Rgx7ZIV

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ