ಗ್ಯಾರಂಟಿ ಕೊಟ್ಟು ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರಕಾರದ ನಿಜಬಣ್ಣ ಒಂದೇ ವಾರದಲ್ಲಿ ಬಯಲು - Mahanayaka
5:11 PM Wednesday 11 - December 2024

ಗ್ಯಾರಂಟಿ ಕೊಟ್ಟು ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರಕಾರದ ನಿಜಬಣ್ಣ ಒಂದೇ ವಾರದಲ್ಲಿ ಬಯಲು

hd kumaraswamy
24/05/2023

ಬೆಂಗಳೂರು: ಗ್ಯಾರಂಟಿಗಳ ಮೂಲಕ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರಕಾರದ ನೈಜಬಣ್ಣ ಒಂದು ವಾರದಲ್ಲಿಯೇ ಬಯಲಿಗೆ ಬಂದಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಕಿಡಿಕಾರಿದರು.

ವಿಧಾನಸೌಧದಲ್ಲಿ ಇಂದು ಬೆಳಗ್ಗೆ ಮಾಧ್ಯಮಗಳ ಜತೆ ಮಾತನಾಡಿದ ಅವರು, ಮೊದಲ ಸಂಪುಟ ಸಭೆಯಲ್ಲಿಯೇ ಗ್ಯಾರಂಟಿಗಳನ್ನು ಜಾರಿಗೆ ತಂದೇ ತರುತ್ತೇವೆ ಎಂದು ಹೇಳಿದ್ದ ಈಗಿನ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗಳು ಈಗ ವರಸೆ ಬದಲಿಸಿ, ಷರತ್ತುಗಳು ಅನ್ವಯ ಆಗುತ್ತವೆ ಎನ್ನುತ್ತಿದ್ದಾರೆ! ಇದ್ಯಾವ ನ್ಯಾಯ ಎಂದು ಪ್ರಶ್ನಿಸಿದರು.

ಗ್ಯಾರಂಟಿಗಳ ಭರವಸೆ ನೀಡಿದ್ದೀರಿ. ಜಾರಿ ಮಾಡಿ ಎಂದು ಜನರು ಕೇಳುತ್ತಿದ್ದಾರೆ. ವಿದ್ಯುತ್ ಬಿಲ್ ಕಟ್ಟುತ್ತಿಲ್ಲ, ಬಸ್ ಟಿಕೆಟ್ ಪಡೆಯಲು ನಿರಾಕರಿಸುತ್ತಿದ್ದಾರೆ. ನುಡಿದಂತೆ ನಡೆಯಬೇಕು, ಮಾತು ತಪ್ಪಿದರೆ ಜನರಿಗೆ ಮೋಸ ಮಾಡಿದಂತೆ ಆಗುತ್ತದೆ. ನಾವು ಜನರ ಪರ ನಿಲ್ಲುತ್ತೇವೆ ಎಂದು ಮಾಜಿ ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದರು.

ನಾನು ಕೊಟ್ಟ ಮಾತು ತಪ್ಪಲ್ಲ, ಮಾತಿಗೆ ತಪ್ಪಿದರೆ ಒಂದು ಕ್ಷಣವೂ ಅಧಿಕಾರದಲ್ಲಿ ಇರಲ್ಲ ಅಂದಿದ್ದಾರೆ ಅವರು. ಅವರೆಲ್ಲ ಮಾಡಿರುವ ಭಾಷಣಗಳನ್ನು ಜನರು ನೋಡಿದ್ದಾರೆ, ಕೇಳಿದ್ದಾರೆ. ಎಲ್ಲರಿಗೂ ವಿದ್ಯುತ್ ಉಚಿತ ಎಂದು ಭಾಷಣದಲ್ಲಿ ಹೇಳಿದ್ದರು. ಈಗ ನೋಡಿದರೆ, ಅದಕ್ಕೆ ಮಾರ್ಗಸೂಚಿ ರಚನೆ ಆಗಬೇಕು ಎನ್ನುತ್ತಿದ್ದಾರೆ. ಅವತ್ತು ವೀರಾವೇಶದಲ್ಲಿ ಮಾತಾಡಿ ಚಪ್ಪಾಳೆ ಗಿಟ್ಟಿಸಿಕೊಂಡರು. ಒಂದೇ ವಾರದಲ್ಲಿ ಅವರ ನಿಜವಾದ ಬಣ್ಣ ಬಯಲಾಗ್ತಿದೆ. ಇವರು ಜನರ ಭಾವನೆಗಳ ಜತೆ ಚೆಲ್ಲಾಟ ಆಡುತ್ತಿದ್ದಾರೆ. ಕಾದು ನೋಡೋಣ. ನಂತರ ಜನತೆಯ ಜತೆ ಸೇರಿ ಯಾವ ರೀತಿ ಹೋರಾಟ ಮಾಡಬೇಕೋ ಮಾಡುತ್ತೇನೆ ಎಂದು ಕುಮಾರಸ್ವಾಮಿ ಅವರು ಎಚ್ಚರಿಕೆ ನೀಡಿದರು.

ಹಾದಿ ಬೀದಿಯಲ್ಲಿ ಹೋಗೋರಿಗೆಲ್ಲಾ ಗ್ಯಾರಂಟಿ ಯೋಜನೆ ಕೊಡಕ್ಕಾಗಲ್ಲ ಎಂಬ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಹೇಳಿಕೆಯನ್ನು ಒಪ್ಪಲಾಗದು. ಮೊದಲು ಭಾಷಣ ಏನು ಮಾಡಿದ್ದರಲ್ಲ, ಅವತ್ತು ಭರವಸೆ ಕೊಡಬೇಕಾದಾಗಾ ನಿಮಗೆ ತಲೆ ಇರಲಿಲ್ಲವಾ. ಈಗ ಮತ ಕೊಟ್ಟವರೆಲ್ಲಾ ಹಾದಿಬೀದಿಯವರು ಆಗಿಬಿಟ್ರಾ‌.? ಎಂದು ಮಾಜಿ ಸಿಎಂ ಆಕ್ರೋಶ ವ್ಯಕ್ತಪಡಿಸಿದರು.

ಕಳೆದ ಎರಡು ದಿನಗಳ ಮಳೆ ಬೆಂಗಳೂರಿನ ಮೇಲೆ ಯಾವ ರೀತಿಯ ಪರಿಣಾಮ ಬೀರಿದೆ ಎನ್ನುವುದನ್ನು ನಾನು ಬಲ್ಲೆ. ಕಳೆದ ಹದಿನೈದು ವರ್ಷಗಳಿಂದ ಬೆಂಗಳೂರಿನಲ್ಲಿ ಬಿಜೆಪಿ, ಕಾಂಗ್ರೆಸ್ ಆಡಳಿತ ನಡೆಸಿವೆ. ಬೆಂಗಳೂರು ಈಗ ಪ್ರತಿ ಮಳೆಗಾಲದಲ್ಲಿಯೂ ಈ ಸಮಸ್ಯೆಗಳು ಆಗ್ತಿವೆ. ಇದರ ಬಗ್ಗೆ ರಾಷ್ಟ್ರೀಯ ಪಕ್ಷಗಳಿಗೆ ಚಿಂತೆ ಇದೆಯಾ‌? ಎಂದು ಅವರು ಕಿಡಿ ಕಾರಿದರು.

ಚುನಾವಣೆ ಫಲಿತಾಂಶದ ಬಗ್ಗೆ ಅವಲೋಕನ ಸಭೆ:

ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಪಕ್ಷಕ್ಕೆ ಸಿಕ್ಕಿದ ಫಲಿತಾಂಶದ ಬಗ್ಗೆ ಆತ್ಮಾವಲೋಕನ ಸಭೆ ಹಾಗೂ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯೂ ನಾಳೆ ಬೆಂಗಳೂರಿನಲ್ಲಿ ನಡೆಯಲಿದೆ ಎಂದು ಇದೇ ವೇಳೆ ಮಾಜಿ ಮುಖ್ಯಮಂತ್ರಿ ಅವರು ತಿಳಿಸಿದರು.

ಪಕ್ಷದಲ್ಲಿ ಮಾಡಬೇಕಿರುವ ಬದಲಾವಣೆಗಳು ಹಾಗೂ ತರಬೇಕಿರುವ ಸುಧಾರಣೆಗಳ ಬಗ್ಗೆ ಸಭೆಯಲ್ಲಿ ಮುಕ್ತವಾಗಿ ಚರ್ಚೆ ನಡೆಯಲಿದೆ. ಇದರಲ್ಲಿ ಯಾವ ಮುಚ್ಚುಮರೆ ಇಲ್ಲ. ದೊಡ್ಡ ನಿರೀಕ್ಷೆ ಇಟ್ಟುಕೊಂಡಿದ್ದೆವು. ಪಂಚರತ್ನ ರಥಯಾತ್ರೆಗೂ ದೊಡ್ಡ ಸಂಖ್ಯೆಯಲ್ಲಿ ಜನರು  ಸೇರಿದ್ದರು. ಆದರೆ, ಫಲಿತಾಂಶ ನಮಗೆ ಅತೀವ ನಿರಾಶೆ ಉಂಟು ಮಾಡಿದೆ ಎಂದರು ಅವರು.

ಆತ್ಮಾವಲೋಕನ ಸಭೆಯಲ್ಲಿ ಪಕ್ಷದ ಸಂಘಟನೆ ಬಗ್ಗೆ ಹೆಚ್ಚು ಒತ್ತು ಕೊಟ್ಟು ಚರ್ಚೆ ಮಾಡುತ್ತೇವೆ. ಕಾರ್ಯಕರ್ತರಲ್ಲಿ ವಿಶ್ವಾಸದ ಕೊರತೆ ಇದೆ. ಯುವಕರಿಗೆ, ಕಾರ್ಯಕರ್ತರಿಗೆ ಹೊಸ ಜವಾಬ್ದಾರಿ ಕೊಡಬೇಕು ಎಂಬ ಉದ್ದೇಶ ಇದೆ. ಪಕ್ಷದ ಸಂಘಟನೆ ದೃಷ್ಟಿಯಿಂದ ಕೆಲವು ಮಹತ್ವದ ಬದಲಾವಣೆ ಮಾಡಲಿದ್ದೇವೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.

ನವೆಂಬರ್ ನಲ್ಲಿ ರಾಜಕೀಯ ಬದಲಾವಣೆ ಆಗಲಿದೆ ಎಂಬ ಹೇಳಿಕೆ ಬಗ್ಗೆ ಮಾಧ್ಯಮಗಳು ಪ್ರಶ್ನಿಸಿದಾಗ, ನಾನು ರಾಜಕೀಯದಲ್ಲಿ ಬೆಳವಣಿಗೆಗಳು ಆಗುತ್ತವೆ ಎಂದಿದ್ದೆ ಅಷ್ಟೇ‌. ಸರ್ಕಾರ ಹೋಗುತ್ತೆ ಅಂತಾ ಹೇಳಿದ್ದೆನಾ‌? ಎಂದು ಮರು ಪ್ರಶ್ನಿಸಿದರು.

ಈ ಸಂದರ್ಭದಲ್ಲಿ ಮಾಜಿ ಸಚಿವ ಹೆಚ್.ಡಿ.ರೇವಣ್ಣ, ವಿಧಾನ ಪರಿಷತ್ ಸದಸ್ಯ ಕೆ.ಎ.ತಿಪ್ಪೇಸ್ವಾಮಿ ಸೇರಿದಂತೆ ಪಕ್ಷದ ಎಲ್ಲ ನೂತನ ಶಾಸಕರು, ವಿಧಾನ ಪರಿಷತ್ ಸದಸ್ಯರು ಹಾಜರಿದ್ದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ