ಘಟಾನುಘಟಿ ನಾಯಕರಿದ್ದರೂ ಸಿಎಂ ಸ್ಥಾನಕ್ಕೆ ಕೇವಲ ಇಬ್ಬರಿಗೆ ಮಣೆ ಹಾಕಿದ ಕಾಂಗ್ರೆಸ್ ಹೈಕಮಾಂಡ್!
ಬೆಂಗಳೂರು: ಕರ್ನಾಟಕ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಬಹುಮತ ಪಡೆದ ಬಳಿಕ ಇದೀಗ ಯಾರನ್ನು ಸಿಎಂ ಮಾಡಬೇಕು ಎಂಬ ವಿಚಾರ ಕಾಂಗ್ರೆಸ್ ಹೈಕಮಾಂಡ್ ಗೆ ಕಗ್ಗಂಟಾಗಿ ಪರಿಣಮಿಸಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ನಡುವೆ ತೀವ್ರ ಪೈಪೋಟಿ ಆರಂಭವಾಗಿದೆ. ಈ ನಡುವೆ ದಲಿತ ಸಿಎಂ ಆಗಬೇಕು ಎಂಬ ಕೂಗು ಕೂಡ ಕೇಳಿ ಬಂದಿದೆ.
ಪ್ರತಿ ಚುನಾವಣೆಯಲ್ಲೂ ದಲಿತ ಮತಗಳು ಯಾವುದೇ ಪಕ್ಷಕ್ಕೆ ಅಧಿಕಾರ ತಂದು ಕೊಡುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತವೆ. ಚುನಾವಣೆ ಆರಂಭಕ್ಕೂ ಮೊದಲು ಬಿಜೆಪಿ, ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳು ದಲಿತ ಸಿಎಂ ಹೆಸರಿನಲ್ಲಿ ಭಾರೀ ಚರ್ಚೆಗಳನ್ನು, ಸವಾಲು, ಪ್ರತಿ ಸವಾಲುಗಳನ್ನು ಹಾಕಿಕೊಂಡಿದ್ದವು.ಆದರೆ ಚುನಾವಣಾ ಫಲಿತಾಂಶ ಬಂದ ಬಳಿಕ ಈ ಬಗ್ಗೆ ಯಾವುದೇ ಸದ್ದು ಗದ್ದಲ ಇಲ್ಲವಾಗಿದ್ದು, ಸ್ವತಃ ದಲಿತ ಶಾಸಕರೇ ಈ ಬಗ್ಗೆ ಮಾತನಾಡಲು ಹಿಂದೇಟು ಹಾಕುತ್ತಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗಳನ್ನು ಹುಟ್ಟು ಹಾಕಿದೆ.
ಕೇವಲ ಕುರುಬ ಮತ್ತು ಒಕ್ಕಲಿಗ, ಲಿಂಗಾಯತ, ಅಲ್ಪಸಂಖ್ಯಾತರ ಮತಗಳಿಂದ ಕಾಂಗ್ರೆಸ್ ಗೆದ್ದಿಲ್ಲ. ಈ ಬಾರಿ ದಲಿತ ಐಕ್ಯತಾ ವೇದಿಕೆ, ಬಿಜೆಪಿಯ ಸಂವಿಧಾನ ವಿರೋಧಿ ನಡೆಯ ವಿರುದ್ಧ ನಡೆಸಿದ ಹೋರಾಟದ ಫಲವಾಗಿ ಇಂದು ಕಾಂಗ್ರೆಸ್ ಸರ್ಕಾರ ಬಂದಿದೆ. ಆದರೆ, ಚುನಾವಣೆ ಗೆದ್ದ ಬಳಿಕ ದಲಿತರಿಗೆ ಸರ್ಕಾರದಲ್ಲಿ ಮಹತ್ವದ ಪಾತ್ರವನ್ನು ನೀಡದೇ ಕೇವಲ ಇಬ್ಬರು ನಾಯಕರನ್ನು ದೆಹಲಿಗೆ ಕರೆಸಿ ಇವರಿಬ್ಬರಲ್ಲಿ ಒಬ್ಬರು ಅಂತಿಮ ಎಂಬಂತೆ ಕಾಂಗ್ರೆಸ್ ಹೈಕಮಾಂಡ್ ನಿರ್ಣಯ ಕೈಗೊಳ್ಳಲು ಮುಂದಾಗಿದೆ. ಡಾ.ಜಿ.ಪರಮೇಶ್ವರ್, ಸತೀಶ್ ಜಾರಕಿಹೊಳಿ, ಪ್ರಿಯಾಂಕ್ ಖರ್ಗೆಯಂತಹ ಸಿಎಂ ಸ್ಥಾನವನ್ನು ನಿಭಾಯಿಸುವ ಸಮರ್ಥ ಅಭ್ಯರ್ಥಿಗಳಿದ್ದರೂ, ಕೇವಲ ಇಬ್ಬರನ್ನು ಮಾತ್ರವೇ ಕರೆದು ಮಾತನಾಡಿಸಿರುವುದು ಆಕ್ರೋಶಕ್ಕೆ ಕಾರಣವಾಗಿದೆ.
ಚುನಾವಣೆ ಗೆದ್ದ ತಕ್ಷಣ ಎಲ್ಲವನ್ನೂ ಡಿ.ಕೆ.ಶಿವಕುಮಾರ್ ಅವರೇ ಮಾಡಿದರು ಎಂಬ ತಪ್ಪು ಭಾವನೆ ಸೃಷ್ಟಿಸಲಾಗಿದೆ. ಪ್ರತಿಯೊಬ್ಬ ನಾಯಕರ ಪರಿಶ್ರಮ ಹಾಗೂ ಒಗ್ಗಟ್ಟಿನ ಕೆಲಸ ಇಂದು ಕಾಂಗ್ರೆಸ್ ಗೆಲುವಿಗೆ ಕಾರಣವಾಗಿದೆ. ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯನವರನ್ನು ಮಾತ್ರವೇ ಸಿಎಂ ಹುದ್ದೆಗೆ ಪರಿಗಣಿಸಿದ ಕಾಂಗ್ರೆಸ್ ಹೈಕಮಾಂಡ್ ದೊಡ್ಡ ತಪ್ಪು ಮಾಡಿದೆ. ಕೇವಲ ಇಬ್ಬರನ್ನೇ ಕರೆದಿರುವ ಕಾರಣ ಸಿಎಂ ಸ್ಥಾನದ ಆಯ್ಕೆ ಇನ್ನಷ್ಟು ಜಟಿಲವಾಗಿದೆ. ಅಭ್ಯರ್ಥಿಗಳ ಸಂಖ್ಯೆ ಹೆಚ್ಚಾಗುತ್ತಿದ್ದರೆ, ಇಬ್ಬರು ನಾಯಕರು ಕೂಡ ತಮ್ಮ ಪಟ್ಟು ಸಡಿಸಲಿಸಿ, ಹೈಕಮಾಂಡ್ ನ ನಿರ್ಧಾರಕ್ಕೆ ಈ ಮೊದಲೇ ಒಪ್ಪಿಗೆ ಸೂಚಿಸುತ್ತಿದ್ದರು ಅನ್ನೋ ಮಾತುಗಳು ಇದೀಗ ಕೇಳಿ ಬಂದಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw