ಕಾರ್ಕಳ ಕಾಂಗ್ರೆಸ್ ಕಾರ್ಯಕರ್ತನ ಮೇಲೆ ಎಸ್ಸೈಯಿಂದ ದೌರ್ಜನ್ಯ ಆರೋಪ | ಸಿದ್ದರಾಮಯ್ಯ ಆಕ್ರೋಶ
ಬೆಂಗಳೂರು: ಕಾರ್ಕಳದ ಕಾಂಗ್ರೆಸ್ ಕಾರ್ಯಕರ್ತ ರಾಧಾಕೃಷ್ಣ ನಾಯಕ್ ಮೇಲೆ ನಡೆದ ಪೊಲೀಸ್ ದೌರ್ಜನ್ಯ ಖಂಡನೀಯ. ಇವರ ಅನಾರೋಗ್ಯವನ್ನೂ ಲೆಕ್ಕಿಸದೆ, ಹಳೆ ಸುಳ್ಳು ಕೇಸ್ ಆಧರಿಸಿ, ಪೊಲೀಸರು ದೌರ್ಜನ್ಯ ನಡೆಸಿದ್ದಾರೆ. ಈ ಬಗ್ಗೆ ಉಡುಪಿ ಪೊಲೀಸ್ ವರಿಷ್ಠಾಧಿಕಾರಿಗಳು ತನಿಖೆ ನಡೆಸಿ ನೊಂದ ಯುವಕನಿಗೆ ನ್ಯಾಯ ಒದಗಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ಹಳೆಯ ಸುಳ್ಳು ಕೇಸ್ ನ್ನು ಆಧರಿಸಿ ಪೊಲೀಸರು ಕಾಂಗ್ರೆಸ್ ಕಾರ್ಯಕರ್ತ ರಾಧಾಕೃಷ್ಣ ನಾಯಕ್ ಮೇಲೆ ದೌರ್ಜನ್ಯ ನಡೆಸಿದ್ದಾರೆ ಎನ್ನವ ಆರೋಪ ಕೇಳಿ ಬಂದಿರುವ ನಡುವೆಯೇ ಸಿದ್ದರಾಮಯ್ಯ ಈ ಟ್ವೀಟ್ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ರಾಧಾಕೃಷ್ಣ ನಾಯಕ್ ಅವರು ಫೇಸ್ ಬುಕ್ ಪುಟದಲ್ಲಿ ಕಳೆದ ಒಂದು ವರ್ಷದ ಹಿಂದೆ ಯೋಧರ ವಿರುದ್ಧ ಕೇಂದ್ರ, ರಾಜ್ಯ ಸರ್ಕಾರದ ವಿರುದ್ದ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದು ಇದರ ಕುರಿತು ಕೆಲವರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಆದರೆ ತಮ್ಮ ಹೆಸರಿನ ಫೇಕ್ ಐಡಿ ಮೂಲಕ ಕಿಡಿಗೇಡಿಗಳು ಮಾಡಿದ ಪೋಸ್ಟ್ ಇದಾಗಿದೆ ಎಂದು ಹಾಗೂ ಇದರ ವಿರುದ್ದ ಕ್ರಮ ಕೈಗೊಳ್ಳುವಂತೆ ಉತ್ತರ ಗಂಗಮ್ಮ ನ ಗುಡಿ ಪೊಲೀಸ್ ಠಾಣೆಯಲ್ಲಿ 2020ರ ಆಗಸ್ಟ್ ನಲ್ಲಿ ರಾಧಾಕೃಷ್ಣ ಅವರು ದೂರು ನೀಡಿದ್ದರು ಎಂದು ಹೇಳಲಾಗಿದೆ.
ಇದೇ ವಿಚಾರವಾಗಿ ಇದೀಗ ಕಾರ್ಕಳ ಠಾಣೆಗೆ ವಿಚಾರಣೆಗೆ ಬಂದಿದ್ದ ರಾಧಕೃಷ್ಟ ಅವರಿಗೆ ಎಸ್ಸೈ ಮಧು ಅವರು ಎದೆಗೆ ಕಾಲಿನಿಂದ ಒದ್ದು ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಲಾಗಿದ್ದು, ರಾಧಾಕೃಷ್ಣ ಅವರು ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.