ಡಾ.ಅಂಬೇಡ್ಕರರನ್ನು ಅವಮಾನಿಸುವ ಕಾಂಗ್ರೆಸ್ ಪಕ್ಷದಿಂದ ಗೂಂಡಾ ರಾಜ್ಯ ನಿರ್ಮಾಣ: ನಳಿನ್ ಕುಮಾರ್ ಕಟೀಲ್
ಬೆಂಗಳೂರು: ಸಂವಿಧಾನಶಿಲ್ಪಿ, ಬಾಬಾಸಾಹೇಬ ಡಾ.ಅಂಬೇಡ್ಕರರನ್ನು ಅವಮಾನಿಸುವ ಕಾಂಗ್ರೆಸ್ ಪಕ್ಷದಿಂದ ಗೂಂಡಾ ರಾಜ್ಯ ನಿರ್ಮಾಣವಾಗುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಆಕ್ಷೇಪಿಸಿದರು.
ಹೊಸಕೋಟೆಯಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಕರ್ನಾಟಕದಲ್ಲಿ ಚುನಾವಣೆ ಫಲಿತಾಂಶ ಬಂದ ಬಳಿಕ, ಕಾಂಗ್ರೆಸ್ ಬಹುಮತ ಪಡೆದ ನಂತರ ಕರ್ನಾಟಕವು ಗೂಂಡಾರಾಜ್ಯವಾಗಿ ಪರಿವರ್ತನೆ ಆಗುತ್ತಿದೆ. ಕಾಂಗ್ರೆಸ್ ಕಾರ್ಯಕರ್ತರು ಗಲಭೆ, ಹಲ್ಲೆ, ಹತ್ಯೆ, ದೊಂಬಿಗೆ ಕಾರಣವಾಗುತ್ತಿದ್ದಾರೆ. ಬೇರೆ ಬೇರೆ ಜಿಲ್ಲೆಗಳಲ್ಲಿ ಇಂಥ ಘಟನೆಗಳು ನಡೆದಿವೆ. ಹೊಸಕೋಟೆಯ ಶೆಟ್ಟಿಹಳ್ಳಿ ಗ್ರಾಮದಲ್ಲಿ ನಮ್ಮ ಕಾರ್ಯಕರ್ತ ಕೃಷ್ಣಪ್ಪ ಅವರ ಮನೆಗೆ ನುಗ್ಗಿ ಅವರ ಮಗ, ಕೃಷ್ಣಪ್ಪ, ಅವರ ಪತ್ನಿಗೆ ಹಲ್ಲೆ ಮಾಡಿದ್ದಾರೆ. ಕೃಷ್ಣಪ್ಪರ ಹತ್ಯೆ ಆಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ವಿಜಯೋತ್ಸವದ ಹೆಸರಿನಲ್ಲಿ ಬಂದು ಕೃಷ್ಣಪ್ಪರ ಮನೆ ಮುಂದೆ ಪಟಾಕಿ ಸಿಡಿಸಿದ್ದರು. ದೂರದಲ್ಲಿ ಪಟಾಕಿ ಸಿಡಿಸಲು ಹೇಳಿದ್ದು, ಕೃಷ್ಣಪ್ಪರ ಹತ್ಯೆ ಮಾಡಿದ್ದಾರೆ. ಅವರ ಮಗ, ಕೃಷ್ಣಪ್ಪರ ಪತ್ನಿಯ ಮೇಲೂ ಹಲ್ಲೆ ಮಾಡಿದ್ದಾರೆ. ಗಂಭೀರ ಗಾಯಗಳಾಗಿವೆ. ಇಡೀ ಘಟನೆಯನ್ನು ಖಂಡಿಸುವುದಾಗಿ ತಿಳಿಸಿದರು.
ಅಂಬೇಡ್ಕರರ ವಿಗ್ರಹಕ್ಕೆ ಬೆಂಕಿ: ಕಾಂಗ್ರೆಸ್ ದೇಶದ ಕ್ಷಮೆ ಕೇಳಬೇಕು
ಕಾಂಗ್ರೆಸ್ ಪಕ್ಷಕ್ಕೆ ಡಾ. ಅಂಬೇಡ್ಕರ್ ಅವರ ಬಗ್ಗೆ ಗೌರವವಿಲ್ಲ ಎಂಬುದು ದೇಶಕ್ಕೇ ಗೊತ್ತಿದೆ ಎಂದು ನಳಿನ್ ಕುಮಾರ್ ಕಟೀಲ್ ಅವರು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು. ರಾಜಕೀಯ ದ್ವೇಷ ಹತ್ತಾರು ಇರಬಹುದು; ಬಾಬಾಸಾಹೇಬರಂಥ ಶ್ರೇಷ್ಠ ಸಾಧಕರು ಮತ್ತು ಮಹಾನ್ ನಾಯಕ ವಿಗ್ರಹಕ್ಕೆ ಬೆಂಕಿ ಹಚ್ಚಿದ್ದಾರೆ ಎಂದರೆ ಅದು ಕಾಂಗ್ರೆಸ್ ಪಕ್ಷದ ಮಾನಸಿಕತೆಯನ್ನು ತಿಳಿಸುತ್ತದೆ ಎಂದು ನುಡಿದರು.
ದಲಿತರು, ಅಂಬೇಡ್ಕರರಿಗೆ ಅವಮಾನ ಮಾಡಿದ ಪಕ್ಷ ಕಾಂಗ್ರೆಸ್. ಈ ಘಟನೆಗೆ ಸಂಬಂಧಿಸಿ ದೇಶದ ಮುಂದೆ ಕ್ಷಮೆ ಯಾಚಿಸಬೇಕು. ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಡಿ.ಕೆ.ಶಿವಕುಮಾರ್ ಈ ಘಟನೆ ಕುರಿತು ಏನು ಹೇಳುತ್ತಾರೆ? ಅಂಬೇಡ್ಕರ್ ಅವರ ವಿಗ್ರಹಕ್ಕೆ ನಮಸ್ಕರಿಸುವ ಮಲ್ಲಿಕಾರ್ಜುನ ಖರ್ಗೆಯವರು ಇದಕ್ಕೆ ಏನು ವಿವರಣೆ ನೀಡುತ್ತಾರೆ ಎಂದು ಪ್ರಶ್ನೆಗಳನ್ನು ಮುಂದಿಟ್ಟರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ರಾಜ್ಯದಲ್ಲಿ ದೊಂಬಿ, ಗಲಭೆಗಳು ಹೆಚ್ಚಾಗಿವೆ. ರಾಜ್ಯ ಯಾವ ಕಡೆ ಹೋಗುತ್ತಿದೆ ಎಂಬುದಕ್ಕೆ ಸ್ಪಷ್ಟ ಸಂದೇಶ ಇದಾಗಿದೆ. ಕಾಂಗ್ರೆಸ್ ಕಾರ್ಯಕರ್ತರು ದ್ವೇಷದಿಂದ ಹೀಗೆ ಮಾಡಿದ್ದಾರೆ. ನಾಯಕರು ಹೇಗೆ ಇರುತ್ತಾರೋ, ಕಾರ್ಯಕರ್ತರೂ ಹಾಗೇ ಇರುತ್ತಾರೆ. ಕಾಂಗ್ರೆಸ್ ಪಕ್ಷದ ‘ಗೂಂಡಾಗಿರಿ ಗ್ಯಾರಂಟಿ’ ಪ್ರಾರಂಭವಾಗಿದೆ ಎಂದು ಹೇಳಿದರು.
ಕೃಷ್ಣಪ್ಪರ ಮನೆಗೆ ನಮ್ಮ ತಂಡ ಭೇಟಿ ಕೊಟ್ಟಿದ್ದು, ಕಾರ್ಯಕರ್ತರಿಗೆ ವಿಶ್ವಾಸ ತುಂಬಿದ್ದೇವೆ. ಕಾರ್ಯಕರ್ತರ ಜೊತೆ ನಾವಿರುತ್ತೇವೆ. ಇಂಥ ಗೂಂಡಾಗಿರಿಗೆ ಹೆದರುವುದಿಲ್ಲ ಎಂದ ಅವರು, ಇನ್ನು ಮುಂದೆ ಇಂಥ ಘಟನೆಗಳು ನಡೆದರೆ, ಕಾನೂನು ಸುವ್ಯವಸ್ಥೆ ದುರ್ಬಲವಾದರೆ ಅದಕ್ಕೆ ಕಾಂಗ್ರೆಸ್ ಪಕ್ಷವೇ ಹೊಣೆ ಎಂದು ಎಚ್ಚರಿಸಿದರು.
ಕಟ್ಟುನಿಟ್ಟಿನ ಕ್ರಮಕ್ಕೆ ಆಗ್ರಹ:
ಪೊಲೀಸರು ನ್ಯಾಯದ ಪರ ಇರಬೇಕು. ಬೇರೆ ಬೇರೆ ಕಡೆ ಪಾಕಿಸ್ತಾನ ಜಿಂದಾಬಾದ್ ಹಾಕುತ್ತಿದ್ದಾರೆ. ಕಾಂಗ್ರೆಸ್ ಪಾಕಿಸ್ತಾನ ನಿರ್ಮಿಸುತ್ತಿದೆಯೇ? ಕರ್ನಾಟಕವನ್ನು ಗೂಂಡಾಗಿರಿ ರಾಜ್ಯ ಮಾಡುತ್ತಿದೆಯೇ? ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಪೊಲೀಸರು ಕಾಂಗ್ರೆಸ್ ಬಟ್ಟೆ ಹಾಕಿದ್ದಾರಾ ಎಂದು ನಳಿನ್‍ಕುಮಾರ್ ಕಟೀಲ್ ಅವರು ಪ್ರಶ್ನೆಯನ್ನು ಮುಂದಿಟ್ಟರು.
ಘಟನೆಗೆ ಕಾರಣಕರ್ತರನ್ನು ತಕ್ಷಣ ಬಂಧಿಸಬೇಕು. ಘಟನೆಯ ಹಿಂದೆ ಇರುವವರನ್ನೂ ಬಂಧಿಸಬೇಕು. ದೊಡ್ಡ ನಾಯಕ, ದೊಡ್ಡ ಕಾರ್ಯಕರ್ತರಾದರೂ ಬಂಧಿಸಬೇಕು ಎಂದು ಒತ್ತಾಯಿಸಿದರು.
ಸಂತ್ರಸ್ತರ ಮನೆಗಳಿಗೆ ಪರಿಹಾರ ಕೊಡಬೇಕು ಎಂದ ಅವರು, ಯಾದಗಿರಿಯಲ್ಲೂ ಇಂಥ ಘಟನೆ ಆಗಿದೆ. ಅದನ್ನು ಖಂಡಿಸುತ್ತೇನೆ ಎಂದು ತಿಳಿಸಿದರು. ಪೊಲೀಸರು ಕಾನೂನು- ಸುವ್ಯವಸ್ಥೆ ಕಾಪಾಡಬೇಕು ಎಂದು ತಿಳಿಸಿದರು.
ಇಂಥ ದುರ್ಘಟನೆಗಳು ಮುಂದುವರಿದರೆ ನಾವು ಸಾಮೂಹಿಕ ಹೋರಾಟ ಮಾಡುತ್ತೇವೆ. ಪಾರ್ಟಿ ಯಾವತ್ತೂ ಕೈಕಟ್ಟಿ ಕುಳಿತುಕೊಳ್ಳುವುದಿಲ್ಲ. ಹಿಂದೆಯೂ ಕಾಂಗ್ರೆಸ್ ಹೀಗೆ ಮಾಡಿದಾಗ ಅದಕ್ಕೆ ಉತ್ತರ ಕೊಟ್ಟಿದ್ದೇವೆ. ಇಂಥ ಘಟನೆಗಳು ಆಗದಂತೆ ಪೊಲೀಸರು ಎಚ್ಚರಿಕೆ ವಹಿಸಬೇಕು ಎಂದ ಅವರು, ಪೊಲೀಸರು ಕಾಂಗ್ರೆಸ್ ಕಾರ್ಯಕರ್ತರಾಗಿ ಬದಲಾಗಿದ್ದಾರಾ? ಪೊಲೀಸರು ಏನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.
ರಾಜ್ಯವನ್ನು ಗೂಂಡಾ ಸಾಮ್ರಾಜ್ಯ ಮಾಡುತ್ತಿದ್ದಾರೆ. ಕೆಲವೆಡೆ ತಾಲಿಬಾನ್‍ಗಳು ಎದ್ದು ನಿಂತಿದ್ದಾರೆ. ಈ ರಾಜ್ಯ ಯಾವ ದಿಕ್ಕಿಗೆ ಹೋಗುತ್ತಿದೆ ಎಂಬುದು ಸ್ಪಷ್ಟವಾಗಿದೆ. ಕಾಂಗ್ರೆಸ್ ಮಾನಸಿಕತೆ ಗೊತ್ತಾಗುತ್ತಿದೆ. ಇದನ್ನು ಬಿಜೆಪಿ ಸಹಿಸುವುದಿಲ್ಲ. ಕಾಂಗ್ರೆಸ್ ಪಕ್ಷ ಎಚ್ಚರಿಕೆಯಿಂದ ಇರಬೇಕು ಎಂದು ಕಿವಿಮಾತು ಹೇಳಿದರು.
ಕಾಂಗ್ರೆಸ್ ನಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಕಿತ್ತಾಟ ನಡೆಯುತ್ತಿದೆ. ಸಿಎಂ ಸ್ಥಾನಕ್ಕಾಗಿ ಹೋರಾಟ ಒಂದೆಡೆ ನಡೆದಿದೆ. ಅವರನ್ನು ಸಮಾಧಾನ ಮಾಡುವ ಕಾರ್ಯ ಮುಂದುವರೆದಿದೆ. ಈ ನಡುವೆ ರಾಜ್ಯವು ಅರಾಜಕತೆಯತ್ತ ಸಾಗುತ್ತಿದೆ. ಗಲಭೆ, ಗಲಾಟೆ, ಕರೆಂಟ್ ಗ್ಯಾರಂಟಿ ಉಚಿತ ಸಂಬಂಧ ಗೊಂದಲ ಮುಂದುವರಿದಿದೆ. ಕಾಂಗ್ರೆಸ್ ಪಕ್ಷಕ್ಕೆ ಜನಹಿತ ಬೇಕಿಲ್ಲ ಎಂದು ತಿಳಿಸಿದರು.
ಸುಳ್ಳು ಹೇಳಿ ಅಧಿಕಾರಕ್ಕೆ ಬಂದಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರದ ಹಿತ ಮಾತ್ರ ಬೇಕಿದೆ. ಅರಾಜಕತೆ, ಸುಳ್ಳು ಭರವಸೆ ಈಡೇರಿಸುವ ಸಮಸ್ಯೆ ಕಾಡುತ್ತಿದೆ. ಅರಾಜಕ ಪರಿಸ್ಥಿತಿ ನಿಯಂತ್ರಿಸದೆ ದೆಹಲಿಯಲ್ಲಿ ಕುರ್ಚಿಗಾಗಿ ಗುದ್ದಾಟ ಮಾಡುತ್ತಿದ್ದಾರೆ. ಜನರು ಇದನ್ನು ಗಮನಿಸುತ್ತಿದ್ದಾರೆ. ನಾವು ಕೂಡ ಗಮನಿಸುತ್ತಿದ್ದೇವೆ. ಆದರೆ, ನಮ್ಮ ಕಾರ್ಯಕರ್ತರು ಮತ್ತು ರಾಜ್ಯದ ಜನರ ಮೇಲೆ ಇಂಥ ಘಟನೆಗಳಾದರೆ ಬಿಜೆಪಿ ಅದರ ವಿರುದ್ಧ ಹೋರಾಟ ಮಾಡಲಿದೆ ಎಂದು ಎಚ್ಚರಿಕೆ ನೀಡಿದರು.
ರಾಜ್ಯದ ಮಾಜಿ ಸಚಿವರಾದ ಕೆ.ಎಸ್. ಈಶ್ವರಪ್ಪ, ಎಂ.ಟಿ.ಬಿ. ನಾಗರಾಜ್, ಭೈರತಿ ಬಸವರಾಜ್, ಡಾ.ಸಿ.ಎನ್. ಅಶ್ವತ್ಥನಾರಾಯಣ್, ಪಕ್ಷದ ರಾಜ್ಯ ಕಾರ್ಯದರ್ಶಿ ಮತ್ತು ವಿಧಾನಪರಿಷತ್ ಸದಸ್ಯ ಕೇಶವ್ ಪ್ರಸಾದ್ ಮತ್ತಿತರರು ಇದ್ದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw