ಚುನಾವಣೆಗೂ ಮೊದಲೇ ಸೋಲೊಪ್ಪಿಕೊಂಡ ಕಾಂಗ್ರೆಸ್ ಪಕ್ಷ: ಅಶ್ವತ್ಥನಾರಾಯಣ್
ಬೆಂಗಳೂರು: ಕರ್ನಾಟಕದ ಅಸೆಂಬ್ಲಿ ಚುನಾವಣೆಯ ಕಾವು ದಿನೇದಿನೇ ಏರುತ್ತಿರುವ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷವು ತನ್ನ ಸೋಲನ್ನು ಚುಬಾವಣೆ ಎದುರಿಸುವ ಮೊದಲೇ ಒಪ್ಪಿಕೊಂಡತ್ತದೆ ಎಂದು ಬಿಜಿಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವತ್ಥನಾರಾಯಣ್ ರವರು ತಿಳಿಸಿದ್ದಾರೆ.
ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರ ಹೇಳಿಕೆಯನ್ನು ಗಮನಿಸಿದಾಗ ಇದು ಸ್ಪಷ್ಟವಾಗುತ್ತಿದೆ ಎಂದಿರುವ ಅವರು ಕಾಂಗ್ರೆಸ್ ಮುಖಂಡರ ಮೇಲೆ ಐಟಿ, ಇಡಿ ದಾಳಿ ನಡೆಯಲಿದೆ ಎಂಬ ಸುರ್ಜೇವಾಲ ಹೇಳಿಕೆ ಅವರ ಹತಾಶ ಮನೋಭಾವದ ಸ್ಪಷ್ಟ ಪ್ರತೀಕ ಎಂದು ತಿಳಿಸಿದ್ದಾರೆ.
ದೇಶದ ವಿವಿಧ ಕಡೆ ಪ್ರತಿ ಚುನಾವಣೆ ನಡೆದ ಸಂದರ್ಭದಲ್ಲಿ ಕಾಂಗ್ರೆಸ್ ತನ್ನ ಸೋಲಿಗೆ ಒಂದಲ್ಲ ಒಂದು ಕಾರಣ ಹುಡುಕುತ್ತದೆ. ಒಮ್ಮೆ ಇವಿಎಂ ಸರಿ ಇಲ್ಲ ಎನ್ನುವುದು, ಚುನಾವಣೆ ಆಯೋಗ ಸರಿ ಇಲ್ಲ ಎನ್ನುವುದು, ಭಾರತದ ಅನೇಕ ಸ್ವಾಯತ್ತ ಸಂಸ್ಥೆಗಳು ಸರಿ ಇಲ್ಲ ಎನ್ನುವ ಕುಂಟು ನೆಪ ಹುಡುಕುವ ಕೆಲಸ ಮಾಡುತ್ತಿದೆ ಎಂದು ಟೀಕಿಸಿದ್ದಾರೆ.
ಸುರ್ಜೇವಾಲಾ ಮತ್ತು ಮುಖಂಡ ಸಿದ್ದರಾಮಯ್ಯನವರ ಹೇಳಿಕೆ ಪ್ರಸ್ತುತ ಚರ್ಚೆಯ ವಿಷಯ. ಅವರ ಹೇಳಿಕೆ ಗಮನಿಸಿದಾಗ ಅವರ ಸೋಲಿನ ಮನಸ್ಥಿತಿ, ದಿಗಿಲು, ಭಯ ಅರ್ಥವಾಗುತ್ತದೆ. ಕೇಂದ್ರವು ವಿವಿಧ ಏಜೆನ್ಸಿಗಳನ್ನು ಬಳಸಿಕೊಳ್ಳುತ್ತಿದೆ ಎಂಬ ಅವರ ಟೀಕೆಯು ಕಾಂಗ್ರೆಸ್ ಈ ಹಿಂದಿನ ದಿನಗಳಲ್ಲಿ ದೇಶವನ್ನು ಆಳುತ್ತದ್ದ ಸಂದರ್ಭದಲ್ಲಿ ಮಾಡುತ್ತಿದ್ದ ಕುತಂತ್ರವನ್ನು ಅನಾವರಣಗೊಳಿಸಿದೆ ಎಂದು ಅವರು ತಿಳಿಸಿದ್ದಾರೆ.
ಕಾಂಗ್ರೆಸ್ಸಿಗೆ ಅದರ ಸ್ಥಾನ ಅರಿವಾಗಿದೆ. ರಾಜ್ಯದ ಜನರ ಅತ್ಯಂತ ದೊಡ್ಡ ಪ್ರಮಾಣದ ಜನಬೆಂಬಲ ಬಿಜೆಪಿಗೆ ವ್ಯಕ್ತವಾಗುತ್ತಿದೆ. ಆದರಣೀಯ ನರೇಂದ್ರ ಮೋದಿ, ಅಮೀತ್ಶಾ, ಜೆ.ಪಿ ನಡ್ಡಾ ಅವರು ಪ್ರವಾಸದ ನಂತರವಂತೂ ಕರ್ನಾಟಕದ ಜನರು ದೊಡ್ಡ ಪ್ರಮಾಣದಲ್ಲಿ ಬಿಜೆಪಿಗೆ ಬೆಂಬಲ ಕೊಡುವುದು ಕಾಣುತ್ತಿದೆ. ವಿಜಯ ಸಂಕಲ್ಪ ಯಾತ್ರೆಯ ಮೂಲಕ ರಾಜ್ಯದೆಲ್ಲೆಡೆ ಪ್ರವಾಸ ಮಾಡಿದಾಗ ಲಕ್ಷಾಂತರ ಜನರು ಬೆಂಬಲ ಸೂಚಿಸಿ ಪಾಲ್ಗೊಂಡಿದ್ದಾರೆ. ಹೊಸದಾಗಿ ಸೇರ್ಪಡೆಯಾದ 12 ಲಕ್ಷಕ್ಕೂ ಹೆಚ್ಚು ಯುವ ಮತದಾರರು ಬಿಜೆಪಿಯನ್ನು ಅಭಿವೃದ್ಧಿಗಾಗಿ ಬೆಂಬಲಿಸುವ ಸ್ಪಷ್ಟ ಸೂಚನೆ ಇದೆ ಎಂದು ಅವರು ತಮ್ಮ ಹೇಳಿಕೆಯಲ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಅಧಿಕಾರ ದಾಹಕ್ಕಾಗಿ ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯನವರ ನಡುವೆ ನಡೆಯುತ್ತಿರುವ ನಿಲ್ಲದ ಕದನವು ಸೋಲಿಗೆ ಕಾರಣವಾಗಲಿದೆ. ಕಾಂಗ್ರೆಸ್ ಪಕ್ಷವು ಕುತಂತ್ರ, ಹತಾಶ ಮತ್ತು ಅನೈತಿಕ ರಾಜಕಾರಣವನ್ನು ಕಾಣುತ್ತಿದೆ. ಬೇರೆಲ್ಲ ರಾಜ್ಯಗಳಲ್ಲಿ ಕಾಂಗ್ರೆಸ್ ಮುಕ್ತ ರಾಜಕೀಯವನ್ನು ಜನತೆ ಮಾಡಿದ ಹಾಗೆಯೇ ಕರ್ನಾಟಕದ ಜನತೆಯೂ ಬಹಳ ಪ್ರಬುದ್ಧರಿದ್ದಾರೆ. ಮಹಾತ್ಮ ಗಾಂಧಿಯವರು ಹೇಳಿದ ಹಾಗೆ ಕಾಂಗ್ರೆಸ್ ವಿಸರ್ಜಿಸುವ ಕಾರ್ಯ ಕರ್ನಾಟಕದಿಂದ ಆಗುವ ಸಾಧ್ಯತೆ ಹೆಚ್ಚಾಗಿದೆ ಎಂದು ಅಶ್ವತ್ಥನಾರಾಯಣ್ ಅವರು ತಿಳಿಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw