ಸಾಂವಿಧಾನಿಕ ನೈತಿಕತೆಯೂ ರಾಜ್ಯಪಾಲರ ಕರ್ತವ್ಯವೂ
- ನಾ ದಿವಾಕರ
ರಾಜ್ಯಪಾಲರ ಕಚೇರಿಯು ಅಧಿಕಾರ ರಾಜಕಾರಣದ ವ್ಯಾಪ್ತಿಯಿಂದ ಹೊರಗಿರಬೇಕಾದ್ದು ಇಂದಿನ ತುರ್ತು
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ, ವಿಶೇಷವಾಗಿ ಸಂಸದೀಯ ಪ್ರಜಾಸತ್ತೆಯ ಆಡಳಿತದಲ್ಲಿ, ಯಾವುದೇ ರಾಜಕೀಯ ಪಕ್ಷದಲ್ಲಾದರೂ ಇರಬೇಕಾದ ಒಂದು ಎಚ್ಚರಿಕೆ ಎಂದರೆ, ಶಾಸನಸಭೆಯ ಅಧಿಕಾರ ಶಾಶ್ವತವಲ್ಲ ಎನ್ನುವುದು. ಕಾಲಕಾಲಕ್ಕೆ ನಡೆಯುವ ಚುನಾವಣೆಗಳಲ್ಲಿ ಮತದಾರರ ಆಯ್ಕೆಯ ಮೇರೆಗೆ ಅಧಿಕಾರ ವಹಿಸಿಕೊಳ್ಳುವ ಪಕ್ಷಗಳಿಗೆ ಅದೇ ಮತದಾರರು ತಮ್ಮನ್ನು ತಿರಸ್ಕರಿಸಲೂಬಹುದು ಎಂಬ ಎಚ್ಚರಿಕೆ ಇದ್ದೇ ಇರಬೇಕು. ಏಕೆಂದರೆ ಪ್ರಜಾಪ್ರಭುತ್ವವು ಜನಸಾಮಾನ್ಯರಿಗೆ ಸರ್ಕಾರಗಳನ್ನು ಪಲ್ಲಟಗೊಳಿಸುವ ಸಾಂವಿಧಾನಿಕ ಅಧಿಕಾರವನ್ನು ಕಲ್ಪಿಸುತ್ತದೆ. ಹೇಗಾದರೂ ಮಾಡಿ ಅಧಿಕಾರ ಗಳಿಸುವ ಅಥವಾ ಪಡೆದ ಅವಕಾಶವನ್ನು ಶತಾಯಗತಾಯ ಉಳಿಸಿಕೊಳ್ಳುವ ಹರಸಾಹಸಗಳ ಹೊರತಾಗಿಯೂ ಕಳೆದ ಮೂರು-ನಾಲ್ಕು ದಶಕಗಳಲ್ಲಿ ಸರ್ಕಾರಗಳು ನಿರ್ಗಮಿಸಿರುವುದನ್ನು ಕಾಣಬಹುದು. ಇನ್ನು ಐವತ್ತು ವರ್ಷಗಳ ಕಾಲ ತಾವೇ ಅಧಿಕಾರದಲ್ಲಿರುತ್ತೇವೆ ಎಂದು ಘೋಷಿಸಿದ್ದ ಬಿಜೆಪಿ ನಾಯಕರಿಗೆ 2024ರ ಚುನಾವಣೆಗಳು ಇದೇ ಸಂದೇಶವನ್ನು ನೀಡಿವೆ.
ಆದರೂ ಆಡಳಿತಾರೂಢ ಪಕ್ಷಗಳಲ್ಲಿ ಅಧಿಕಾರ ಶಾಶ್ವತತೆಯ ಒಂದು ಅಹಮಿಕೆ ಸಹಜವಾಗಿಯೇ ಇರುತ್ತದೆ. ತಾವು ನಂಬಿದ ತಳಮಟ್ಟದ ಕಾರ್ಯಕರ್ತರು ಹಾಗೂ ಅವರಿಂದ ಪ್ರಭಾವಿತರಾಗಿ ರಾಜಕೀಯ ಒಲವು ರೂಢಿಸಿಕೊಳ್ಳುವ ತಳಸಮಾಜದ ಜನತೆ ಸರ್ಕಾರಗಳ ಬೆಂಬಲಕ್ಕೆ ನಿಂತೇ ನಿಲ್ಲುತ್ತಾರೆ ಎಂಬ ದೃಢ-ಅಂಧ ವಿಶ್ವಾಸವೂ ಇರುತ್ತದೆ. ಪಕ್ಷಾತೀತವಾಗಿ ನೋಡುವುದಾರೆ ಭಾರತದ ಸಂಸದೀಯ ಪ್ರಜಾಸತ್ತೆಯಲ್ಲಿ ಎಲ್ಲ ಸರ್ಕಾರಗಳೂ ಈ ವಿಶ್ವಾಸವನ್ನು ಉಳಿಸಿಕೊಳ್ಳುವ ಉದ್ದೇಶದಿಂದಲೇ ಆಡಳಿತ ನೀತಿಗಳನ್ನೂ ರೂಪಿಸುತ್ತಾ ಬಂದಿವೆ. ಸಂವಿಧಾನಬದ್ಧತೆಯಿಂದ ತಳಸಮಾಜದ ಜನತೆಗೆ ಒದಗಿಸಬೇಕಾದ ಸವಲತ್ತು, ಸೌಕರ್ಯ, ಅನುಕೂಲ ಮತ್ತು ಅವಕಾಶಗಳನ್ನು ಸಹ ಪಕ್ಷಗಳ ತಾತ್ವಿಕ ನಿಲುವುಗಳಿಗೆ ಅನುಸಾರ ವಿಂಗಡಿಸಿ, ಕೆಳಗಿನಿಂದ ಮೇಲಿನವರೆಗೂ ಮತಬ್ಯಾಂಕುಗಳನ್ನು ಸೃಷ್ಟಿಸುವ ಒಂದು ಮಾದರಿಗೆ ಭಾರತ ಸಾಕ್ಷಿಯಾಗಿದೆ.
ಓಲೈಕೆ, ತುಷ್ಟೀಕರಣ ಇತ್ಯಾದಿ ಕ್ಲೀಷೆಗಳಿಂದಾಚೆಗೆ ನೋಡಿದಾಗಲೂ ನಮಗೆ ಗೋಚರಿಸುವ ಕಟು ವಾಸ್ತವ ಎಂದರೆ, ರಾಜಕೀಯ ಸಿದ್ಧಾಂತಗಳು ತಳಮಟ್ಟದ ಜನಸಾಮಾನ್ಯರ ಸಾರ್ವತ್ರಿಕ ಏಳಿಗೆ, ಅಭ್ಯುದಯಕ್ಕೆ ನೆರವಾಗುವುದಕ್ಕಿಂತಲೂ ಹೆಚ್ಚಾಗಿ, ಅದೇ ಸಿದ್ಧಾಂತವು ಸಾಮುದಾಯಿಕವಾಗಿ ಗುರುತಿಸುವ ಜಾತಿ, ಮತ, ಧರ್ಮ ಅಥವಾ ಭಾಷಿಕ ಗುಂಪುಗಳನ್ನು ಉದ್ದೇಶಿಸುವ ರೀತಿಯಲ್ಲಿ ನೀತಿ ನಿರೂಪಣೆಗಳನ್ನು ಮಾಡಲಾಗುತ್ತದೆ. ಈ ವರ್ಗೀಕರಣಗಳು ಭಾರತದ ಅಧಿಕಾರ ರಾಜಕಾರಣದ ವಿವಿಧ ಸ್ತರಗಳನ್ನು ಬಲಪಡಿಸುತ್ತಿವೆಯೇ ಹೊರತು, ಕಟ್ಟಕಡೆಯ ವ್ಯಕ್ತಿಯನ್ನೂ ತಲುಪುವಂತಹ ಪ್ರಜಾಪ್ರಭುತ್ವದ ಬೇರುಗಳನ್ನು ಗಟ್ಟಿಗೊಳಿಸಲು ನೆರವಾಗುತ್ತಿಲ್ಲ. ಇದರ ನೇರ ಫಲಾನುಭವಿಗಳು ಬೂರ್ಷ್ವಾ ರಾಜಕೀಯ ಪಕ್ಷಗಳೇ ಆಗಿವೆ. ಇಂದು ಭಾರತವನ್ನು ಕಾಡುತ್ತಿರುವ ಜಾತಿ ಕೇಂದ್ರಿತ ಅಥವಾ ಜಾತಿ ಪ್ರೇರಿತ ರಾಜಕಾರಣದ ಮೂಲವನ್ನೂ ಈ ಪ್ರವೃತ್ತಿಯಲ್ಲೇ ಗುರುತಿಸಬಹುದು.
ಸಾಂಸ್ಥಿಕ ನೆಲೆಯಲ್ಲಿ ಸಂವಿಧಾನದ ಉಲ್ಲಂಘನೆ
ಈ ಚೌಕಟ್ಟಿನಿಂದಾಚೆಗಿನ ರಾಜಕೀಯ ವಿದ್ಯಮಾನಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ಕೇಂದ್ರದಲ್ಲಿ ಅಧಿಕಾರ ವಹಿಸಿಕೊಳ್ಳುವ ಸರ್ಕಾರಗಳು ಇದೇ ತಾತ್ವಿಕ ನೆಲೆಯಲ್ಲೇ ನಿಂತು ಭಿನ್ನ ಧೋರಣೆಯ ರಾಜ್ಯ ಸರ್ಕಾರಗಳನ್ನು ಪಲ್ಲಟಗೊಳಿಸುವ ಪರಂಪರೆಯನ್ನೂ ಸಮಕಾಲೀನ ರಾಜಕಾರಣದಲ್ಲಿ ಗಮನಿಸಬಹುದು. ಕೇಂದ್ರ ಬಿಜೆಪಿ ಸರ್ಕಾರ ಆರಂಭಿಸಿದ “ ಡಬಲ್ ಇಂಜಿನ್ ಸರ್ಕಾರ ” ಎಂಬ ನಿರೂಪಣೆಯ ಹಿಂದೆ ಈ ತಾತ್ವಿಕ ನೆಲೆಯನ್ನು ಗುರುತಿಸಬಹುದು. ಅಂದರೆ ಕೇಂದ್ರ ಹಾಗೂ ರಾಜ್ಯದಲ್ಲಿ ಒಂದೇ ಪಕ್ಷದ ಆಳ್ವಿಕೆ ಇದ್ದರೆ ಅದು ಅಧಿಕಾರದ ಬಂಡಿಯನ್ನು ಹೆಚ್ಚು ಸಮರ್ಪಕವಾಗಿ ತಳೆದುಕೊಂಡುಹೋಗುತ್ತದೆ ಎಂಬ ಇಂಗಿತವನ್ನು ಈ ನುಡಿಗಟ್ಟಿನಲ್ಲಿ ಕಾಣಬಹುದು. ಹಾಗೊಮ್ಮೆ ಯಾವುದೇ ರಾಜ್ಯದ ಜನತೆ ಭಿನ್ನವಾಗಿ ಯೋಚಿಸಿ, ಪ್ರತ್ಯೇಕ ʼ ಇಂಜಿನ್ ʼ ಬಯಸಿದಾಗ , ಅಂತಹ ಸರ್ಕಾರಗಳನ್ನು ಹಳಿತಪ್ಪಿ ಬೀಳುವಂತೆ ಮಾಡುವ ಪ್ರಯತ್ನಗಳೂ ನಡೆಯುತ್ತಿರುತ್ತವೆ.
ಕಳೆದ ಹತ್ತು ವರ್ಷಗಳಲ್ಲಿ ಈ ʼ ಅಧಿಕಾರ ಪಲ್ಲಟ ʼ ಪ್ರಕ್ರಿಯೆಗೂ ಒಂದು ಹೊಸ ವಿಧಾನವನ್ನು ರೂಪಿಸಲಾಗಿದ್ದು, ಪಕ್ಷಾಂತರ ನಿಷೇಧ ಕಾಯ್ದೆಯನ್ನೇ ಅಪ್ರಸ್ತುತಗೊಳಿಸಲಾಗಿದೆ. ಮತದಾರರ ಅಥವಾ ಸಮಾಜದ ಸಾಂವಿಧಾನಿಕ ಆಯ್ಕೆ ಮತ್ತು ಸಂವಿಧಾನದತ್ತ ವಿವೇಚನೆಯನ್ನೂ ಧಿಕ್ಕರಿಸುವ ರೀತಿಯಲ್ಲಿ ಚುನಾಯಿತ ಸರ್ಕಾರಗಳನ್ನು ಪಲ್ಲಟಗೊಳಿಸಿ ಸಿಂಗಲ್ ಇಂಜಿನ್‌ಗಳನ್ನು ಡಬಲ್ ಇಂಜಿನ್‌ಗಳಾಗಿ ಪರಿವರ್ತಿಸುವ ಅವಿಷ್ಕಾರಕ್ಕೆ ವಿಧಿವಿಧಾನಗಳನ್ನು ರೂಪಿಸಲಾಗಿದೆ. ತತ್ವ, ಸಿದ್ಧಾಂತ ಮತ್ತಿತರ ತಾತ್ವಿಕ ಒಲವು-ನಿಲುವುಗಳನ್ನು ಬಟ್ಟೆ ಬದಲಿಸಿದಂತೆ ಬದಲಿಸುವ ರಾಜಕಾರಣಿಗಳಿಗೆ ಅಧಿಕಾರಪೀಠವೇ ಮುಖ್ಯವಾದಾಗ, ಮತದಾರರು ಕೇವಲ ಬಳಕೆದಾರರಾಗಿಬಿಡುತ್ತಾರೆ. ಒಂದು ಗೂಡಿನಿಂದ ಮತ್ತೊಂದು ಗೂಡಿಗೆ ಹಾರುವ ರಾಜಕೀಯ ಹಕ್ಕಿಗಳನ್ನು ಪ್ರಶ್ನಿಸುವ ಹಕ್ಕನ್ನೂ ಜನತೆ ಕಳೆದುಕೊಂಡಿದ್ದಾರೆ. ಏಕೆಂದರೆ ರಾಜಕೀಯ ನಾಯಕರು ತಳಸಮಾಜದ ವಿಶ್ವಾಸಾರ್ಹತೆಯನ್ನು ಎಂದೋ ಕಳೆದುಕೊಂಡಿದ್ದಾರೆ.
ಈ ಅಸಾಂವಿಧಾನಿಕ ರಾಜಕಾರಣದಲ್ಲಿ ರಾಜಕೀಯ ಪಕ್ಷಗಳು ಅನುಸರಿಸುವ ಅಡ್ಡದಾರಿಗಳನ್ನು ಸದಾ ಗಮನಿಸುವ ಮತ್ತು ಅಲ್ಲಿ ಸಂಭವಿಸುವ ಅಪ್ರಜಾಸತ್ತಾತ್ಮಕ ಚಟುವಟಿಕೆಗಳಿಗೆ ನಿರ್ಬಂಧ ಹೇರುವ ಸಲುವಾಗಿಯೇ ಭಾರತದ ಸಂವಿಧಾನವು ರಾಜ್ಯಪಾಲರ ಒಂದು ಕಚೇರಿಯನ್ನು ಕಲ್ಪಿಸಿದೆ. ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪಕ್ಷವೇ ರಾಜ್ಯಪಾಲರನ್ನು ನೇಮಿಸುವುದು ಸಾಮಾನ್ಯವಾದರೂ, ಈ ಹುದ್ದೆಗೆ ನೇಮಕವಾಗುವವರು ತಮ್ಮ ಅಧಿಕಾರಾವಧಿಯಲ್ಲಿ ಪೂರ್ವಾಶ್ರಮದ ಹಂಗು ತೊರೆದು, ಸ್ವತಂತ್ರರಾಗಿ ಸಂವಿಧಾನಕ್ಕೆ ಅನುಗುಣವಾಗಿ ಕಾರ್ಯನಿರ್ವಹಿಸಲು ಅಪೇಕ್ಷಿಸಲಾಗುತ್ತದೆ. Governors should be above power politicş , ಅಂದರೆ ರಾಜ್ಯಪಾಲರು ಅಧಿಕಾರ ರಾಜಕಾರಣದಿಂದ ಅಂತರ ಕಾಯ್ದುಕೊಂಡು, ಸಾಂವಿಧಾನಿಕ ನಿಯಗಳಿಗನುಗುಣವಾಗಿ ನಿಷ್ಪಕ್ಷಪಾತ ಮಾದರಿಯಲ್ಲಿ ನಡೆದುಕೊಳ್ಳಬೇಕಾಗುತ್ತದೆ.
ರಾಜ್ಯಪಾಲರ ಆದ್ಯತೆ–ಜವಾಬ್ದಾರಿಗಳು
ಈ ಸಾಂವಿಧಾನಿಕ ಆಶಯವನ್ನು ಪೂರೈಸಲೆಂದೇ ರಾಜ್ಯಪಾಲ ಹುದ್ದೆಗೆ ಸಕ್ರಿಯ ರಾಜಕಾರಣದಲ್ಲಿರುವ ಅಥವಾ ಚುನಾವಣಾ ರಾಜಕಾರಣದಿಂದ ದೂರ ಸರಿದಿರುವ ಮುತ್ಸದ್ದಿಗಳನ್ನು ನೇಮಿಸಲು ಅಪೇಕ್ಷಿಲಾಗುತ್ತದೆ. ಆದರೆ ಭಾರತದ ಪ್ರಜಾಪ್ರಭುತ್ವ ಈ ಮಾದರಿಯಿಂದ ಎಂದೋ ದೂರ ಸರಿದಿದೆ. ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪಕ್ಷಗಳು ತಮಗೆ ಅನುಕೂಲಕರವಾದ ವ್ಯಕ್ತಿಗಳನ್ನು ರಾಜ್ಯಪಾಲರನ್ನಾಗಿ ನೇಮಿಸುವುದಷ್ಟೇ ಅಲ್ಲದೆ ಆಡಳಿತಾರೂಢ ಪಕ್ಷಕ್ಕೆ ಅನುಕೂಲಕರವಾದ ರೀತಿಯಲ್ಲಿ ಕಾರ್ಯನಿರ್ವಹಿಸುವ ಒಂದು ಪರಂಪರೆಯನ್ನು ಹುಟ್ಟುಹಾಕಲಾಗಿದೆ. ಈ ಮಾದರಿಯ ಅಡಿಪಾಯ ಹಾಕಿದ್ದು ಕಾಂಗ್ರೆಸ್ ಪಕ್ಷವೇ ಎನ್ನುವುದು ಕಟು ಸತ್ಯ. ವಿರೋಧ ಪಕ್ಷಗಳ ಆಳ್ವಿಕೆಯ ರಾಜ್ಯಗಳಲ್ಲಿ ಸರ್ಕಾರಗಳನ್ನೇ ಪದಚ್ಯುತಗೊಳಿಸಲೂ ರಾಜ್ಯಪಾಲ ಕಚೇರಿಯನ್ನು ಬಳಸಿಕೊಂಡ ನಿದರ್ಶನಗಳಿವೆ. 1977ರಲ್ಲಿ ಅಧಿಕಾರಕ್ಕೆ ಬಂದ ತತ್ವಾಧಾರಿತ ಜನತಾಪಕ್ಷ ಸರ್ಕಾರವೂ, ಮೊರಾರ್ಜಿ ದೇಸಾಯಿ ಅವರ ನೇತೃತ್ವದಲ್ಲಿ ಇದೇ ಮಾದರಿ ಅನುಸರಿಸಿದ್ದನ್ನು ಸ್ಮರಿಸಬಹುದು. ಸಂವಿಧಾನ ವಿಧಿ 356 ಬಳಸದೆಯೇ ಸರ್ಕಾರಗಳನು ಉರುಳಿಸಲು ರಾಜ್ಯಪಾಲರ ಕಚೇರಿಯನ್ನು ಬಳಸಿಕೊಳ್ಳುವ ಹೊಸ ವಿಧಾನವನ್ನು ಭಾರತದ ರಾಜಕಾರಣ ಕಂಡುಕೊಂಡಿದೆ.
ಮಹಾರಾಷ್ಟ್ರ, ಮಧ್ಯಪ್ರದೇಶ, ಗೋವಾ ಮುಂತಾದ ರಾಜ್ಯಗಳಲ್ಲಿ ಈ ಪ್ರಯೋಗ ಯಶಸ್ವಿಯೂ ಆಗಿದ್ದು, ಇದೀಗ ಕರ್ನಾಟಕ ಪ್ರಯೋಗಶಾಲೆಯಾಗಿ ಪರಿಣಮಿಸುತ್ತಿದೆ. ಇಲ್ಲಿ ನಮಗೆ ಡಾ. ಬಿ.ಆರ್. ಅಂಬೇಡ್ಕರ್ ಅವರ ಮಾತುಗಳು ಮುಖ್ಯವಾಗುತ್ತವೆ. 1948ರ ನವಂಬರ್ 4ರಂದು ಸಂವಿಧಾನ ಕರಡುಪ್ರತಿಯನ್ನು ಸಂವಿಧಾನ ರಚನಾ ಸಭೆಯ ಮುಂದೆ ಮಂಡಿಸುವಾಗ ಡಾ. ಅಂಬೇಡ್ಕರ್ “ಸಾಂವಿಧಾನಿಕ ನೈತಿಕತೆಯನ್ನು ಭಾರತೀಯ ಸಮಾಜದಲ್ಲಿ ವ್ಯಾಪಕವಾಗಿ ಹರಡಬೇಕಿದೆ” ಎಂದು ಹೇಳುತ್ತಲೇ “ಇದು ಪ್ರಜಾಪ್ರಭುತ್ವವನ್ನು ಬೇರೂರುವಂತೆ ಮಾಡಲು ನೆರವಾಗುತ್ತದೆ ಏಕೆಂದರೆ ಭಾರತೀಯ ಸಮಾಜ ಮೂಲತಃ ಅಪ್ರಜಾಸತ್ತಾತ್ಮಕವಾಗಿದ್ದು ಪ್ರಜಾಪ್ರಭುತ್ವ ಎನ್ನುವುದು ಮೇಲ್ಪದರ ಮಾತ್ರ “ ಎಂದು ಹೇಳುತ್ತಾರೆ.
ಪ್ರಸ್ತುತ ಸಂದರ್ಭದಲ್ಲಿ ವಿರೋಧ ಪಕ್ಷಗಳ ಆಳ್ವಿಕೆ ಇರುವ ಕೇರಳ, ಕರ್ನಾಟಕ, ಮಹಾರಾಷ್ಟ್ರ, ಪಂಜಾಬ್, ಪಶ್ಚಿಮಬಂಗಾಲ ಹಾಗೂ ತಮಿಳುನಾಡು ರಾಜ್ಯಗಳಲ್ಲಿ ರಾಜ್ಯಪಾಲ ಕಚೇರಿಯ ಕಾರ್ಯವೈಖರಿಯನ್ನು ಗಮನಿಸಿದಾಗ ಅಂಬೇಡ್ಕರ್ ಅವರ ಈ ಮಾತುಗಳು ಮುಖ್ಯವಾಗುತ್ತವೆ. ಸರ್ಕಾರಗಳು ಮಂಡಿಸಿದ ಮಸೂದೆಗಳನ್ನು ತಡೆಹಿಡಿಯುವುದು, ವಿಳಂಬ ಮಾಡುವುದು ಅಥವಾ ತಿರಸ್ಕರಿಸುವುದು ಸಾಮಾನ್ಯವಾಗಿದ್ದು, ಸಾಂವಿಧಾನಿಕ ನಿಯಮಗಳನ್ನು ಉಲ್ಲಂಘಿಸುವ ರೀತಿಯಲ್ಲಿ ವಿರೋಧ ಪಕ್ಷಗಳಿಗೆ ನೆರವಾಗುವ ಒಂದು ಲಕ್ಷಣವನ್ನೂ ಕಾಣುತ್ತಿದ್ದೇವೆ. ಈ ಬೆಳವಣಿಗೆಗಳ ಬಗ್ಗೆ ಸುಪ್ರೀಂಕೋರ್ಟ್ ಮುಖ್ಯನ್ಯಾಯಾಧೀಶ ಡಿ.ವೈ. ಚಂದ್ರಚೂಡ್ ಅವರೂ ಸಹ ತಮ್ಮ ಆತಂಕಗಳನ್ನು ವ್ಯಕ್ತಪಡಿಸಿದ್ದಾರೆ. ರಾಜ್ಯಪಾಲರು ಸಾಂವಿಧಾನಿಕತೆಯ ಸಂರಕ್ಷಕರು ಎಂದೇ ಸಂವಿಧಾನ ಹೇಳುವುದನ್ನು ಇಲ್ಲಿ ಗಮನಿಸಬೇಕಿದೆ.
ಹಗರಣಗಳ ನಡುವೆ ಸಾಂವಿಧಾನಿಕ ಜವಾಬ್ದಾರಿ
ಕರ್ನಾಟಕದಲ್ಲಿ ನಡೆಯುತ್ತಿರುವ ರಾಜಕೀಯ ಪ್ರಹಸನಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ, ರಾಜ್ಯಪಾಲರು ನಿಷ್ಪಕ್ಷಪಾತವಾಗಿ ನಡೆದುಕೊಳ್ಳುತ್ತಿಲ್ಲ ಎಂದು ಮೇಲ್ನೋಟಕ್ಕೇ ಗೋಚರಿಸುತ್ತದೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ವಿರುದ್ಧ ಖಾಸಗಿ ದೂರನ್ನು ಆಧರಿಸಿ , ತರಾತುರಿಯಲ್ಲಿ ಪರಿಶೀಲನೆ ಮಾಡಿ ಅತಿಶೀಘ್ರಗತಿಯಲ್ಲಿ ತನಿಖೆಗೆ ಅನುಮತಿ ನೀಡಿರುವ ರಾಜ್ಯಪಾಲರು, ಹಿಂದಿನ ಸರ್ಕಾರದ ಸಚಿವರಾದ ಶಶಿಕಲಾ ಜೊಲ್ಲೆ, ಜನಾರ್ಧನರೆಡ್ಡಿ, ಮುರುಗೇಶ್ ನಿರಾಣಿ ಮತ್ತು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ ಅವರ ಮೇಲಿನ ದೂರುಗಳನ್ನು ಈವರೆಗೂ ಪರಿಶೀಲಿಸದೆ ಇರುವುದು ಅನುಮಾನಗಳನ್ನು ಹುಟ್ಟಿಸುತ್ತದೆ. ಈ ನಾಯಕರ ವಿರುದ್ಧ ಲೋಕಾಯುಕ್ತದಿಂದಲೇ ದೂರುಸಲ್ಲಿಸಲಾಗಿದ್ದರೂ ರಾಜ್ಯಪಾಲ ಕಚೇರಿ ಯಾವುದೇ ಕ್ರಮ ಕೈಗೊಳ್ಳದಿರುವುದು ಸಾಂವಿಧಾನಿಕ ನೈತಿಕತೆಯ ಪ್ರಶ್ನೆಯನ್ನು ಮುನ್ನಲೆಗೆ ತರುತ್ತದೆ. ವಿರೋಧ ಪಕ್ಷಗಳಿಗೆ ಸರ್ಕಾರವನ್ನು ಉರುಳಿಸಲು ನೆರವಾಗುವಂತೆ ಕ್ರಮ ಜರುಗಿಸುವುದೇ ಅಸಾಂವಿಧಾನಿಕವಾಗಿ ಕಾಣುತ್ತದೆ. ಈ ನಡುವೆ ರಾಜ್ಯಪಾಲರನ್ನು ಗೋಬ್ಯಾಕ್ ಎನ್ನುವುದು, ವಜಾಗೊಳಿಸಿ ಎಂದು ಆಗ್ರಹಿಸುವುದು ರಾಜಕೀಯ ಬೇಡಿಕೆಗಳಾಗಿದ್ದು ಇದರಿಂದ ಮೂಲ ಸಮಸ್ಯೆ ಬಗೆಹರಿಯುವುದಿಲ್ಲ.
ಗಮನಿಸಲೇಬೇಕಾದ ಮತ್ತೊಂದು ಬೆಳವಣಿಗೆ ಎಂದರೆ , ರಾಜ್ಯಪಾಲರು ದಲಿತ ಸಮುದಾಯಕ್ಕೆ ಸೇರಿದವರು ಎಂಬ ಕಾರಣಕ್ಕೆ ಅವರ ವಿರುದ್ಧ ಕಾಂಗ್ರೆಸ್ ಹೋರಾಡುತ್ತಿದೆ ಎಂದು ಬಿಜೆಪಿ ನಾಯಕರು ಹೇಳಿರುವುದು. ಅಂದರೆ ಗೌರವಯುತ ರಾಜ್ಯಪಾಲ ಹುದ್ದೆ ಮತ್ತು ಕಚೇರಿಗೂ ಜಾತಿ ಲೇಪನ ಅಂಟಿಸುವ ಕ್ಷುಲ್ಲಕ ರಾಜಕಾರಣಕ್ಕೆ ಚಾಲನೆ ನೀಡಲಾಗಿದೆ. ಈ ಬೆಳವಣಿಗೆಯನ್ನು ಗಂಭೀರವಾಗಿ ಪರಾಮರ್ಶಿಸಬೇಕಿದೆ. ರಾಜ್ಯಪಾಲರು ಒಬ್ಬ ವ್ಯಕ್ತಿಯಾದರೂ, ಆ ಕಚೇರಿ ಒಂದು ಸಾಂವಿಧಾನಿಕ ಸಂಸ್ಥೆ, ಅದನ್ನು ನಿರ್ವಹಿಸುವ ರಾಜ್ಯಪಾಲ ಆ ಸಂಸ್ಥೆಯ ಸಂರಕ್ಷಕರು. ಅವರನ್ನೂ ಜಾತಿಯ ಮಸೂರದಿಂದ ನೋಡುವುದು ಅಕ್ಷಮ್ಯವಷ್ಟೇ ಅಲ್ಲ ಅಸಾಂವಿಧಾನಿಕವೂ ಹೌದು. ರಾಜ್ಯಪಾಲರ ತಪ್ಪು ನಡೆ ಅಥವಾ ತೀರ್ಮಾನಗಳನ್ನು ಸಂವಿಧಾನದ ಚೌಕಟ್ಟಿನೊಳಗೇ ನಿಷ್ಕರ್ಷೆ ಮಾಡಬೇಕೇ ಹೊರತು, ವ್ಯಕ್ತಿಗತ ಜಾತಿ ಅಥವಾ ಧರ್ಮದ ನೆಲೆಯಲ್ಲಿ ಅಲ್ಲ.
ದುರದೃಷ್ಟವಶಾತ್ ಅಧಿಕಾರ ರಾಜಕಾರಣ ನಮ್ಮ ರಾಜಕೀಯ ನಾಯಕರಲ್ಲಿ ಈ ಸಂಯಮ–ಸೌಜನ್ಯ–ವ್ಯವಧಾನವನ್ನು ಕಸಿದುಕೊಂಡಿದೆ. ಜಾತಿಯ ಕಾರಣಕ್ಕಾಗಿಯೇ ರಾಜ್ಯಪಾಲ ಹುದ್ದೆಯಲ್ಲಿರುವವರು ಕೆಲವು ಮಾಜಿ ಸಚಿವರ ವಿರುದ್ಧ ಕ್ರಮ ಕೈಗೊಳ್ಳಲು ಹಿಂಜರಿಯುತ್ತಿದ್ದಾರೆ, ಅದೇ ಕಾರಣಕ್ಕಾಗಿಯೇ ಸಿದ್ಧರಾಮಯ್ಯ ವಿರುದ್ಧ ತನಿಖೆಗೆ ಅನುಮತಿ ನೀಡಿದ್ದಾರೆ ಎಂಬ ಆರೋಪವೂ ಕೇಳಿಬರುತ್ತಿದೆ. ಬಲಾಢ್ಯ ಮತ್ತು ಹಿಂದುಳಿದ ಜಾತಿಗಳ ನಡುವಿನ ಸಂಘರ್ಷ ಚುನಾವಣಾ ರಾಜಕೀಯ ಅಂಗಳದಲ್ಲಿ ಅಥವಾ ಶಾಸನಸಭೆಯ ಸದನದಲ್ಲಿ ಇರುವುದು ವಾಸ್ತವವೇ ಆದರೂ, ಇದು ರಾಜ್ಯಪಾಲ ಕಚೇರಿಯಂತಹ ಸಾಂವಿಧಾನಿಕ ಸಂಸ್ಥೆಗೂ ಹರಡಿದೆ ಎಂದರೆ ಇದು ಯೋಚಿಸಬೇಕಾದ ವಿಚಾರ. ತಮ್ಮ ಪ್ರಜಾವಾಣಿ ಲೇಖನದಲ್ಲಿ ಎ. ನಾರಾಯಣ (ಅನುರಣನ, 21 ಆಗಸ್ಟ್ 24- ಪ್ರವಾ) ಅವರು ಹೇಳಿರುವಂತೆ ಇಂತಹ ಪ್ರವೃತ್ತಿಯೇ ಸಂವಿಧಾನ ವಿರೋಧಿಯಾಗುತ್ತದೆ.
ಮುಡಾ ಹಗರಣವಾಗಲೀ, ವಾಲ್ಮೀಕಿ-ಬಳ್ಳಾರಿ-ಗಣಿಗಾರಿಕೆ ಮುಂತಾದ ಯಾವುದೇ ಹಗರಣವಾಗಲೀ ಎಲ್ಲವೂ ಸಹ ಆಡಳಿತ ವ್ಯವಸ್ಥೆಯ ಭ್ರಷ್ಟಾಚಾರವನ್ನು ಎತ್ತಿ ತೋರುವ ಪ್ರಕರಣಗಳು. ಬಂಡವಾಳಶಾಹಿ ಆಳ್ವಿಕೆಯಲ್ಲಿ ಸಹಜ ಮಾರುಕಟ್ಟೆ ಪ್ರವೃತ್ತಿಯಾಗಿ ಕಾಣಬಹುದಾದ ಹಣಕಾಸು ಭ್ರಷ್ಟಾಚಾರ, ರಿಯಲ್ ಎಸ್ಟೇಟ್-ಗಣಿ ಹಗರಣ ಅಥವಾ ಮತ್ತಾವುದೇ ಭೂ ಹಗರಣಗಳು ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ತಳಮಟ್ಟದಿಂದಲೇ ಶಿಥಿಲಗೊಳಿಸುತ್ತವೆ. ಭ್ರಷ್ಟಾಚಾರಕ್ಕೆ ಅಥವಾ ಭ್ರಷ್ಟರಿಗೆ ಜಾತಿ-ಮತ ಇದಾವುದೂ ಗಣನೆಗೆ ಬರುವುದಿಲ್ಲ. ಅಲ್ಲಿ ಹಣ ಸಂಪಾದನೆಯ ವಾಮ ಮಾರ್ಗಗಳು, ಅಡ್ಡದಾರಿಗಳು ಮತ್ತು ಅಕ್ರಮಗಳು ಮುಖ್ಯವಾಗುತ್ತವೆ. ಒಂದು ಜಾತಿಯ ಕಾರಣಕ್ಕಾಗಿ ಭ್ರಷ್ಟಾಚಾರವನ್ನು ಸಮರ್ಥಿಸುವುದಾಗಲೀ, ಅದರ ವಿರುದ್ಧ ಹೋರಾಡುವುದಾಗಲೀ ಪ್ರಜಾತಂತ್ರ ವಿರೋಧಿ ನಡೆ ಎನಿಸಿಕೊಳ್ಳುತ್ತದೆ. ಈ ಅಪ್ರಜಾಸತ್ತಾತ್ಮಕ ನಡೆಗೆ ಸಾಂವಿಧಾನಿಕತೆಯ ಸಂರಕ್ಷಕ ಎಂದೇ ಪರಿಗಣಿಸಲ್ಪಡುವ ರಾಜ್ಯಪಾಲ ಕಚೇರಿ ಬಳಕೆಯಾಗಕೂಡದು.
ರಾಜ್ಯಪಾಲ ಕಚೇರಿಯ ಪಾವಿತ್ರ್ಯತೆ
ರಾಜ್ಯಪಾಲ ಕಚೇರಿಯನ್ನು ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪಕ್ಷಗಳು ದುರುಪಯೋಗ ಮಾಡಿಕೊಳ್ಳುವುದು ಹೊಸ ವಿದ್ಯಮಾನವೇನಲ್ಲ. 1950ರ ನೆಹರೂ ಕಾಲದಿಂದಲೂ ಇದು ಜಾರಿಯಲ್ಲಿದೆ. ಬಹುಮತ ಸರ್ಕಾರಗಳಲ್ಲಿರುವಂತೆಯೇ ಎನ್‌ಡಿಎ, ಯುಪಿಎ ಮೊದಲಾದ ಸಮ್ಮಿಶ್ರ ಸರ್ಕಾರಗಳೂ ಇದೇ ಹಾದಿಯಲ್ಲಿ ಕ್ರಮಿಸಿವೆ, ಕ್ರಮಿಸುತ್ತಿವೆ. ಈ ವಿಷಯದಲ್ಲಿ ಮುಖ್ಯವಾಹಿನಿಯ ಎಲ್ಲ ರಾಜಕೀಯ ಪಕ್ಷಗಳೂ ಅಪರಾಧಿ ಸ್ಥಾನದಲ್ಲಿ ನಿಲ್ಲುತ್ತವೆ. ರಾಜ್ಯಪಾಲರ ಕಚೇರಿ ಮತ್ತು ಆಡಳಿತಾರೂಢ ಸರ್ಕಾರದ ನಡುವೆ ಸಂಘರ್ಷ ಹೆಚ್ಚಾಗುವುದರಿಂದ ಸಾರ್ವಜನಿಕ ಆಳ್ವಿಕೆ ಕುಂಠಿತವಾಗುತ್ತದೆ, ರಾಜ್ಯ ಸರ್ಕಾರ ಮತ್ತು ರಾಜ್ಯಪಾಲ ಕಚೇರಿಯ ನಡುವೆ ಇರಬೇಕಾದ ಸೌಹಾರ್ದ ಸಂಬಂಧ ಹದಗೆಡುತ್ತದೆ, ಚುನಾಯಿತ ಸರ್ಕಾರಗಳನ್ನು ಅಸ್ಥಿರಗೊಳಿಸಿದಂತಾಗುತ್ತದೆ ಎಲ್ಲಕ್ಕಿಂತಲೂ ಮಿಗಿಲಾಗಿ ಕೇಂದ್ರ-ರಾಜ್ಯ ಸಂಬಂಧಗಳನ್ನು ಹಾಳುಮಾಡುತ್ತದೆ. ಇದು ಒಕ್ಕೂಟ ವ್ಯವಸ್ಥೆಯ ಅಡಿಪಾಯವನ್ನೇ ಶಿಥಿಲಗೊಳಿಸುತ್ತದೆ.
ಚುನಾಯಿತ ಸರ್ಕಾರಗಳು ಮಾತ್ರವೇ ಅಲ್ಲದೆ, ಸಂವಿಧಾನವನ್ನು ಒಪ್ಪುವ ಎಲ್ಲ ರಾಜಕೀಯ ಪಕ್ಷಗಳಲ್ಲೂ ಈ ಪ್ರಜ್ಞೆ ಜಾಗೃತವಾಗಿರಬೇಕು. “ಸಾಂವಿಧಾನಿಕತೆಯ ಸಂರಕ್ಷಕ ” ಕೇಂದ್ರವಾದ ರಾಜ್ಯಪಾಲ ಕಚೇರಿಯನ್ನು ನಿರ್ವಹಿಸುವವರಲ್ಲೂ ಈ ಅರಿವು ಇರಬೇಕು. ಇದು ಇಲ್ಲವಾದಾಗ ಸಾಂವಿಧಾನಿಕ ಬಿಕ್ಕಟ್ಟುಗಳು ಉದ್ಭವಿಸುತ್ತವೆ. ಕರ್ನಾಟಕದ ಹಾಲಿ ರಾಜ್ಯಪಾಲರ ನಡೆ ಮತ್ತು ಅದರಿಂದ ಸೃಷ್ಟಿಯಾಗಿರುವ ವಿವಾದಗಳು ಇಂತಹ ಬಿಕ್ಕಟ್ಟುಗಳಿಗೆ ಇಂಧನ ಒದಗಿಸುತ್ತವೆ. ಅಧಿಕಾರ ಪಡೆಯಲು ಚುನಾಯಿತ ಬಹುಮತದ ಸರ್ಕಾರವನ್ನೂ ಪದಚ್ಯುತಗೊಳಿಸುವ ರಾಜಕೀಯ ಪಕ್ಷಗಳ ದುರಾಕಾಂಕ್ಷೆ ಇಂತಹ ಸಮಸ್ಯೆಗಳಿಗೆ ಮತ್ತಷ್ಟು ಉತ್ತೇಜನ ನೀಡುತ್ತದೆ. ಕರ್ನಾಟಕದ ರಾಜ್ಯಪಾಲರ ವಿರುದ್ಧ ವ್ಯಕ್ತವಾಗುತ್ತಿರುವ ರಾಜಕೀಯ-ಸಾರ್ವಜನಿಕ ವಿರೋಧಗಳ ಸಂದರ್ಭದಲ್ಲೇ, ರಾಜ್ಯದ ಪ್ರಜ್ಞಾವಂತ ಜನತೆ ಈ ಸಾಂವಿಧಾನಿಕ ನೈತಿಕತೆಯ ಬಗ್ಗೆ ಗಂಭೀರ ಆಲೋಚನೆ ಮಾಡಬೇಕಿದೆ.
ರಾಜಕೀಯ ಪಕ್ಷಗಳು, ಅಧಿಕಾರ ಕೇಂದ್ರಗಳು ಸಾಂಸ್ಥಿಕ ನೆಲೆಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಬಲವಾಗಿ ಪ್ರತಿಪಾದಿಸಿದ ಸಾಂವಿಧಾನಿಕ ನೈತಿಕತೆಯ ಬಗ್ಗೆ ಹೆಚ್ಚಿನ ಗಮನ ನೀಡುವ ಮೂಲಕ, ಅಸಾಂವಿಧಾನಿಕ ರಾಜಕೀಯ ನಡೆಗಳನ್ನು ನಿಗ್ರಹಿಸುವ ತುರ್ತು ಎದುರಾಗಿದೆ. ಏಕೆಂದರೆ ಪ್ರಜಾಪ್ರಭುತ್ವದಲ್ಲಿ ಅಧಿಕಾರ ಶಾಶ್ವತವಲ್ಲ. ಇಂದು ಆಡಳಿತ ಪಕ್ಷ ನಾಳಿನ ವಿರೋಧ ಪಕ್ಷವಾಗುತ್ತದೆ. ಆದರೆ ಶಾಶ್ವತವಾಗಿ ಉಳಿಯುವುದು ಸಂವಿಧಾನ ಮತ್ತು ಅದರ ಚೌಕಟ್ಟಿನಲ್ಲಿ ಸ್ಥಾಪನೆಯಾಗಿರುವ ಸಂಸ್ಥೆಗಳು. ಮುಖ್ಯವಾಹಿನಿಯ ರಾಜಕೀಯ ಪಕ್ಷಗಳಲ್ಲಿ ಈ ಎಚ್ಚರ ಇರಬೇಕಾಗಿದೆ. ಸಂವಿಧಾನ ರಕ್ಷಣೆ ಎಂದರೆ ಗ್ರಾಂಥಿಕ ಪ್ರಕ್ರಿಯೆ ಅಲ್ಲ. ಅದೊಂದು ಸಾಂಸ್ಥಿಕ ಮೌಲ್ಯ. ಈ ಮೌಲ್ಯವನ್ನು ಉಳಿಸಿ, ಬೆಳೆಸಿ, ರಕ್ಷಿಸಬೇಕಿರುವುದು ನಾಗರಿಕರ ಕರ್ತವ್ಯ, ಆದ್ಯತೆ ಮತ್ತು ಜವಾಬ್ದಾರಿ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: