ಚಿಕ್ಕಮಗಳೂರು ಜಿಲ್ಲೆಯಲ್ಲಿ ನಿರಂತರ ಮಳೆ ಹಿನ್ನೆಲೆ ಹೈಅಲರ್ಟ್: ಅಲ್ಲಲ್ಲಿ ರಸ್ತೆಗೆ ಬೀಳುತ್ತಿರುವ ಬೃಹತ್ ಮರಗಳು!
ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯಲ್ಲಿ ನಿರಂತರ ಮಳೆಯಾಗುತ್ತಿದ್ದು, ಹವಾಮಾನ ಇಲಾಖೆಯ ಮುನ್ಸೂಚನೆ ಹಿನ್ನೆಲೆ ಜಿಲ್ಲಾಡಳಿತವು ಹೈ ಅಲರ್ಟ್ ಘೋಷಿಸಿದೆ.
ಜಿಲ್ಲೆಯಲ್ಲಿ ಜುಲೈ 5, 6, 7ರಂದು ಮೂರು ದಿನಗಳ ಕಾಲ ಜಿಲ್ಲೆಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಜಿಲ್ಲೆಯಲ್ಲಿ 115 ರಿಂದ 204 ಮಿ.ಮೀ. ಮಳೆ ಸಾಧ್ಯತೆ ಇದೆ. ಹೀಗಾಗಿ ಸಾರ್ವಜನಿಕರು, ಪ್ರವಾಸಿಗರು ನದಿಗಳಿಗೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.
ಯಾರೂ ಕೂಡ ವಿದ್ಯುತ್ ಕಂಬ, ಮರಗಳ ಬಳಿ ನಿಲ್ಲದಂತೆ ಸೂಚನೆ ನೀಡಲಾಗಿದೆ. ಮಕ್ಕಳು ನದಿ, ಕೆರೆ, ತಗ್ಗು ಪ್ರದೇಶಗಳ ಬಳಿ ಹೋಗದಂತೆ ಪೋಷಕರು, ಶಾಲಾ ಮುಖ್ಯಸ್ಥರು ಕ್ರಮ ವಹಿಸಬೇಕು. ಹಿರಿಯರು ಕೂಡ ಇಂತಹ ಪ್ರದೇಶಗಳಿಗೆ ಹೋಗದಂತೆ ಸೂಚಿಸಲಾಗಿದೆ.
ಮಳೆ ಗಾಳಿ ಅಬ್ಬರಕ್ಕೆ ಉರುಳಿದ ಟಿಪ್ಪರ್:
ಮಳೆಯಿಂದ ಚಾಲಕನ ನಿಯಂತ್ರಣ ತಪ್ಪಿದ ಟಿಪ್ಪರ್ ವೊಂದು ರಸ್ತೆಗುರುಳಿದೆ. ಎಂ.ಸ್ಯಾಂಡ್ ಮರಳು ಸಾಗಿಸುತ್ತಿದ್ದ ಟಿಪ್ಪರ್ ಲಾರಿ ಅಪಘಾತಕ್ಕೀಡಾದ ಲಾರಿಯಾಗಿದೆ. ಘಟನೆಯಲ್ಲಿ ಟಿಪ್ಪರ್ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕಳಸ ತಾಲೂಕಿನ ಕಲ್ಮಕ್ಕಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ನಿರಂತರವಾಗಿರೋ ಸಾಧಾರಣ ಮಳೆಯಿಂದಾಗಿ ವಾಹನಗಳು ನಿಯಂತ್ರಣ ತಪ್ಪುತ್ತಿದ್ದು, ವಾಹನ ಚಾಲಕರು ಎಚ್ಚರಿಕೆಯಿಂದ ವಾಹನ ಚಲಾಯಿಸಬೇಕಿದೆ.
ರಸ್ತೆಗೆ ಉರುಳಿಬಿದ್ದ ಬೃಹತ್ ಗಾತ್ರದ ಬೀಟೆ ಮರ:
ಕಾಫಿನಾಡ ಮಲೆನಾಡು ಭಾಗದಲ್ಲಿ ಭಾರೀ ಗಾಳಿ-ಮಳೆ ಹಿನ್ನೆಲೆ ಬೃಹತ್ ಗಾತ್ರದ ಬೀಟೆ ಮರವೊಂದು ರಸ್ತೆಗೆ ಉರುಳಿ ಬಿದ್ದಿದೆ. ಇದರ ಪರಿಣಾಮ ಎರಡು ಗಂಟೆಗಳ ಕಾಲ ರಸ್ತೆ ಸಂಪರ್ಕ ಸಂಪೂರ್ಣ ಬಂದ್ ಆಗಿತ್ತು.
ಕಳಸ ತಾಲೂಕಿನ ಚನ್ನಹಡ್ಲು ಗ್ರಾಮದಲ್ಲಿ ಈ ಘಟನೆ ನಡೆದಿದೆ. ರಸ್ತೆ ಸಂಪರ್ಕ ಕಡಿತಗೊಂಡಿದ್ದರಿಂದ ಮರ ವನ್ನು ಗ್ರಾಮಸ್ಥರೇ ತೆರವುಗೊಳಿಸಿದ್ದಾರೆ.
ಗಾಳಿ-ಮಳೆಗೆ ರಸ್ತೆಗೆ ಅಡ್ಡಲಾಗಿ ಬಿದ್ದ ಬೃಹತ್ ಮರ:
ಮಲೆನಾಡು ಭಾಗದಲ್ಲಿ ಬಾರಿ ಗಾಳಿಯೊಂದಿಗೆ ಧಾರಾಕಾರ ಮಳೆಯಾಗುತ್ತಿದ್ದು, ಮಳೆಯ ಪರಿಣಾಮ ಬೃಹತ್ ಮರವೊಂದು ರಸ್ತೆಗೆ ಅಡ್ಡಲಾಗಿ ಬಿದ್ದ ಘಟನೆ ಕಳಸ ತಾಲೂಕಿನ ಹಿರೇಬೈಲು ಗ್ರಾಮದ ಬಳಿ ನಡೆದಿದೆ.
ಹಿರೇಬೈಲು ಗ್ರಾಮದಿಂದ ಬಾಳೆಹೊಳೆಗೆ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದ್ದು, ಈ ಭಾಗದಲ್ಲಿ ಮಧ್ಯಾಹ್ನದಿಂದ ಮಳೆ ಚುರುಕುಗೊಂಡಿತ್ತು. ಮರ ರಸ್ತೆ ಬಿದ್ದ ಪರಿಣಾಮ ವಾಹನ ಚಾಲಕರು ಪರದಾಡಿದ್ದು, ಇದೀಗ ಮರ ತೆರವು ಕಾರ್ಯಚರಣೆಗೆ ಸ್ಥಳೀಯರೇ ಮುಂದಾಗಿದ್ದು, ಮಳೆಯಲ್ಲೇ ಮರ ತೆರವು ಕಾರ್ಯ ಮಾಡುತ್ತಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw