ಕೊರೊನಾ ದೇವಿಗೆ ಕಟ್ಟಿದ ದೇವಸ್ಥಾನ ಐದೇ ದಿನದಲ್ಲಿ ನೆಲಸಮ | ಅಷ್ಟಕ್ಕೂ ಅಲ್ಲಿ ನಡೆದದ್ದೇನು ಗೊತ್ತಾ?
ಉತ್ತರಪ್ರದೇಶ: ಜನರ ಭಯವೇ ಕೆಲವರಿಗೆ ಬ್ಯುಸಿನೆಸ್…! ಇದು ಸಾಮಾನ್ಯವಾಗಿ ಜನರು ಮಾತನಾಡಿಕೊಳ್ಳುವ ವಿಚಾರ. ಆದರೆ ಕೊರೊನಾ ಕಾಲದಲ್ಲಿ ಕೊರೊನಾ ದೇವಿ ಎಂದೆಲ್ಲ ಪೂಜೆ ಮಾಡಿಸಿ ಹಣ ಪೀಕುವವರಿಗೇನೂ ಕಡಿಮೆ ಇಲ್ಲ. ಇಲ್ಲೊಬ್ಬ ಕೊರೊನಾ ಮಾತಾ ಹೆಸರಿನಲ್ಲಿ ದೇವಸ್ಥಾನ ಕಟ್ಟಿ ಜಮೀನನ್ನು ಕಬಳಿಸಲು ಮುಂದಾಗಿರುವ ಘಟನೆ ವರದಿಯಾಗಿದೆ.
ಲೋಕೇಶ್ ಕುಮಾರ್ ಶ್ರೀವಾಸ್ತವ್ ಎಂಬಾತ ಸ್ಥಳೀಯ ಜನರನ್ನು ಕೊರೊನಾದ ಬಗ್ಗೆ ಹೆದರಿಸಿ, ಕೊರೊನಾ ಮುಕ್ತವಾಗಬೇಕಾದರೆ ಕೊರೊನಾ ಮಾತಾಗೆ ದೇವಸ್ಥಾನ ಕಟ್ಟಬೇಕು ಎಂದು ನಂಬಿಸಿ ಎಲ್ಲರಿಂದ ಹಣ ವಸೂಲಿ ಮಾಡಿ ಕಟ್ಟೆಯಂತಹ ಒಂದು ದೇವಸ್ಥಾನ ನಿರ್ಮಿಸಿ, ಅದರಲ್ಲಿ ಒಂದು ಮೂರ್ತಿಯನ್ನು ಮಾಡಿಸಿ, ಸ್ಥಳೀಯ ಜನರನ್ನು ಆ ಮೂರ್ತಿಗೆ ಪೂಜೆ ಮಾಡುತ್ತಿರಿ ಎಂದು ಹೇಳಿದ್ದಾನೆ.
ಆದರೆ ಈ ದೇವಸ್ಥಾನವನ್ನು ಕಟ್ಟಿ 5 ದಿನಗಳೊಳಗೆ ದೇವಸ್ಥಾನವನ್ನು ಧ್ವಂಸ ಮಾಡಲಾಗಿದೆ. ಈ ದೇವಸ್ಥಾನವನ್ನು ಪೊಲೀಸರೇ ಧ್ವಂಸ ಮಾಡಿದ್ದಾರೆ ಎನ್ನುವ ಆರೋಪ ಆರಂಭದಲ್ಲಿ ಕೇಳಿ ಬಂದಿತ್ತು. ಆದರೆ, ಪೊಲೀಸರು ಈ ಘಟನೆಯ ಬಗ್ಗೆ ಸಾರ್ವಜನಿಕರಿಗೆ ಸ್ಪಷ್ಟನೆ ನೀಡಿದ್ದಾರೆ.
ನೋಯ್ಡಾದಲ್ಲಿ ನೆಲೆಸಿರುವ ಲೋಕೇಶ್ ಕುಮಾರ್ ಶ್ರೀವಾಸ್ತವ್ ಈ ದೇಗುಲ ಕಟ್ಟಿದ ಜಾಗವನ್ನು ನಾಗೇಶ್ ಕುಮಾರ್ ಶ್ರೀವಾಸ್ತವ ಮತ್ತು ಜೈಪ್ರಕಾಶ್ ಶ್ರಿವಾಸ್ತವರೊಂದಿಗೆ ಜಂಟಿಯಾಗಿ ಮಾಲೀಕತ್ವ ಹೊಂದಿದ್ದ. ಆದರೆ ಲೋಕೇಶ್ ಕುಮಾರ್ ಶ್ರೀವಾಸ್ತವ್ ಈ ಜಾಗವನ್ನು ತನ್ನ ಹೆಸರಿಗೆ ಮಾಡಿಸಿಕೊಳ್ಳಬೇಕು ಎನ್ನುವ ಕಾರಣಕ್ಕೆ ಇಲ್ಲಿ ಕೊರೊನಾ ಮಾತಾ ದೇವಸ್ಥಾನವನ್ನು ಕಟ್ಟಿಸಿ ಸ್ಥಳೀಯರಿಂದ ಪೂಜೆ ಮಾಡಿಸಿದ್ದು, ಆ ಬಳಿಕ ಈ ಸ್ಥಳದಿಂದ ತೆರಳಿದ್ದಾನೆ. ಈತನ ಉದ್ದೇಶ ಅರಿತ, ಇದೇ ತಂಡದ ಇನ್ನಿಬ್ಬರಲ್ಲಿ ಒಬ್ಬರು ದೇವಸ್ಥಾನವನ್ನು ಉರುಳಿಸಿದ್ದಾರೆ.
ಜನರ ನಂಬಿಕೆ ಇಂತಹವರಿಗೆಲ್ಲ, ಬ್ಯುಸಿನೆಸ್… ಮೋಸ ಹೋಗುವವರು ಇರುವವರೆಗೆ ಮೋಸ ಮಾಡುವವರು ಕೂಡ ಇದ್ದೇ ಇರುತ್ತಾರೆ. ವಿಶ್ವಾದ್ಯಂತ ಜನರ ಪ್ರಾಣವನ್ನು ನುಂಗಿ ನೀರು ಕುಡಿದಿರುವ ಕೊರೊನಾವನ್ನು ದೇವರು ಎಂದು ಪೂಜಿಸುವ ಮೂಢರಿಗೆ ಏನನ್ನ ಬೇಕೋ ಗೊತ್ತಿಲ್ಲ, ರೋಗಗಳನ್ನು ಕೂಡ ದೇವರು ಎಂದು ಪೂಜಿಸಲು ಆರಂಭಿಸಿದರೆ, ಮುಂದೊಂದು ದಿನ ಈ ರೋಗಗಳಿಗೆ ನೀಡುತ್ತಿರುವ ಮದ್ದನ್ನು ನಿಷೇಧ ಮಾಡಬೇಕು, ಇದು ನಮ್ಮ ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ಉಂಟು ಮಾಡುತ್ತಿದೆ ಎಂದು ವೈದ್ಯರ ಮೇಲೆ ದಾಳಿ ಮಾಡುವ ಅನಾಗರಿಕರು ಕೂಡ ಹುಟ್ಟಿಕೊಳ್ಳಬಹುದು.