ಕೊರೊನಾ ಲಸಿಕೆ ಸ್ವೀಕರಿಸಲಿರುವ ಪ್ರಧಾನಿ ನರೇಂದ್ರ ಮೋದಿ!
ನವದೆಹಲಿ: ಎಲ್ಲ ದೇಶಗಳಲ್ಲಿ ಮುಖ್ಯಸ್ಥರು ಕೊರೊನಾ ಲಸಿಕೆ ಸ್ವೀಕರಿಸಿ ಜನರಿಗೆ ಧೈರ್ಯ ತುಂಬಿದ್ದಾರೆ. ಆದರೆ ಭಾರತದಲ್ಲಿ ಪ್ರಧಾನಿ ಮೋದಿ ಸೇರಿದಂತೆ ಯಾವುದೇ ರಾಜ್ಯಗಳ ಮುಖ್ಯಮಂತ್ರಿಗಳು, ಮಂತ್ರಿಗಳು ಕೊರೊನಾ ಲಸಿಕೆ ಸ್ವೀಕರಿಸದೇ ದೂರ ಉಳಿದಿದ್ದಾರೆ ಎಂಬ ಆಕ್ರೋಶದ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಕೊರೊನಾ ಲಸಿಕೆ ಸ್ವೀಕರಿಸಲಿದ್ದಾರೆ ಎಂದು ವರದಿಯಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಎರಡನೇ ಹಂತದ ಕೊರೊನಾ ಲಸಿಕೆ ವಿತರಣೆ ಸಂದರ್ಭದಲ್ಲಿ ಲಸಿಕೆ ಪಡೆಯಲಿದ್ದಾರೆ. ಅವರ ಜೊತೆಗೆ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು ಕೂಡ ಕೊರೊನಾ ಲಸಿಕೆ ಪಡೆಯಲಿದ್ದಾರೆ ಎಂಬ ಮಾಹಿತಿ ಉನ್ನತ ಮೂಲಗಳಿಂದ ತಿಳಿದು ಬಂದಿದೆ.
ಜನವರಿ 16ರಂದು ಮೊದಲ ಹಂತದ ಕೊರೊನಾ ಲಸಿಗೆ ವಿತರಣೆ ಆರಂಭಿಸಿದ ನಂತರ ದೇಶದ ಜನರಲ್ಲಿ ಮನವಿ ಮಾಡಿದ್ದ ಪ್ರಧಾನಿ ಕೊರೊನಾ ಲಸಿಕೆಯನ್ನು ಕಡೆಗಣಿಸದಂತೆ ಮನವಿ ಮಾಡಿಕೊಂಡಿದ್ದರು. ಮೊದಲ ಹಂತದ ಕೊರೊನಾ ಲಸಿಕೆ ವಿತರಣೆಯಲ್ಲಿ ದೇಶಾದ್ಯಂತ 1,91,181 ಮಂದಿ ಕೊರೊನಾ ಲಸಿಕೆ ಸ್ವೀಕರಿಸಲಿದ್ದಾರೆ. ಎರಡನೇ ಹಂತದ ಲಸಿಕೆ ವಿತರಣೆ ಮುಗಿಯುವ ವೇಳೆ ದೇಶದ 30 ಕೋಟಿ ಜನರಿಗೆ ಲಸಿಕೆ ನೀಡಲು ಸರ್ಕಾರ ನಿರ್ಧರಿಸಿದೆ.