ಕೊರೊನಾ ಸೋಂಕಿತರ ಮನೆಯ ಮುಂದೆ ಬಾವುಟ - Mahanayaka
10:57 AM Saturday 21 - September 2024

ಕೊರೊನಾ ಸೋಂಕಿತರ ಮನೆಯ ಮುಂದೆ ಬಾವುಟ

covid 19
08/05/2021

ಮೈಸೂರು: ಕೊರೊನಾ ಸೋಂಕಿತರ ಮನೆಯ ಮುಂದೆ ಕೊವಿಡ್ 19 ಎಂದು ಕಪ್ಪು ಮತ್ತು ಕೆಂಪು ಬಣ್ಣದಲ್ಲಿ ಬರೆದ ಬಿಳಿ ಬಾವುಟವನ್ನು ಹಾಕಲಾಗುವುದು. ಈ ಬಾವುಟವನ್ನು ತೆಗೆದರೆ ಅವರ ವಿರುದ್ಧ ಎಫ್ ಐಆರ್ ದಾಖಲಾಗುತ್ತದಂತೆ ಇಂತಹದ್ದೊಂದು ಕ್ರಮ ಮೈಸೂರಿನಲ್ಲಿ ಜಾರಿಯಾಗಿದೆ ಎಂದು ತಿಳಿದು ಬಂದಿದೆ.

ಮನೆಯಲ್ಲಿ ಸೋಂಕಿತರಿದ್ದರೆ, ಮನೆಯವರು ತರಕಾರಿ, ದಿನಬಳಕೆ ವಸ್ತು ಖರೀದಿಗೆ ಹೊರಗಡೆ ಹೋಗುತ್ತಾರೆ. ಇದರಿಂದ ಪಕ್ಕದ ಮನೆಯವರಿಗೆ ಇದು ತಿಳಿಯುವುದಿಲ್ಲ. ಇದರಿಂದಾಗಿ ಕೊರೊನಾ ಹರಡುತ್ತಿದೆ ಎನ್ನುವ ವಾದವೇ ಈ ಕ್ರಮಗಳಿಗೆ ಕಾರಣವಾಗಿದೆ. ಸೋಂಕಿತರ ಮನೆ ಮುಂದೆ ಬಾವುಟ ಹಾಕಿದರೆ, ಪಕ್ಕದ ಮನೆಯವರಿಗೆ ಗೊತ್ತಾಗುತ್ತದೆ. ಹೀಗಾಗಿ ಸೋಂಕಿತರ ಮನೆಯ ಮುಂದೆ ವಾರ್ಡ್ ವಾರು ಟಾಸ್ಕ್ ಫೋರ್ಸ್ ಟೀಂ ಬಾವುಟ ಹಾಕಲಿದೆ. 14 ದಿನಗಳ ಬಳಿಕ ಸ್ವಯಂ ವಾರ್ಡ್ ವಾರು ಟಾಸ್ಕ್ ಫೋರ್ಸ್ ಟೀಮ್ ಬಂದು ಬಾವುಟ ತೆರವು ಮಾಡುತ್ತಾರಂತೆ!

ಈ ಕ್ರಮ ಎಷ್ಟೊಂದು ಸೂಕ್ತ ಎಂದು ತಿಳಿದು ಬಂದಿಲ್ಲ. ಕೊರೊನಾ ನಿಯಂತ್ರಣಕ್ಕೆ ಸಂಬಂಧಿಸಿದಂತೆ ರಾಜ್ಯದಲ್ಲಿ ಏನೇನೋ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಕೊರೊನಾ ಸೋಂಕಿತರ ಮನೆಯವರು ಹೊರಗೆ ಹೋಗಬಾರದು, ಹೋದರೆ ಇನ್ನೊಬ್ಬರಿಗೆ ಸೋಂಕು ಹರಡುತ್ತದೆ ಎನ್ನುವುದು ನಿಜ. ಆದರೆ ಮನೆಯೊಳಗೆ ಅವರು ಕುಳಿತಿದ್ದರೆ, ಅವರ ಅಗತ್ಯ ಸಾಮಗ್ರಿ ಯಾರು ತರುತ್ತಾರೆ? ಇದಕ್ಕೆ ಅಧಿಕಾರಿಗಳ ಬಳಿ ಏನು ಪರಿಹಾರ ಇದೆ ಎನ್ನುವುದು ತಿಳಿದು ಬಂದಿಲ್ಲ. ಸದ್ಯ ಮನೆಯೊಳಗೆ ಬಂಧಿಯಾಗಿ ಸೋಂಕಿತರು ಹಾಗೂ ಕುಟುಂಬಸ್ಥರು ಆಹಾರ ಅಗತ್ಯವಸ್ತುಗಳಿಗಾಗಿ ಪರದಾಡುವ ಪರಿಸ್ಥಿತಿ ಬಾರದಿದ್ದರೆ ಸಾಕು ಎನ್ನುವ ಮಾತುಗಳು ಸದ್ಯ ಕೇಳಿ ಬಂದಿದೆ.


Provided by

ಇತ್ತೀಚಿನ ಸುದ್ದಿ