ಕರೋನ ವೈರಸ್ ಗೆ  ರಾಜಕೀಯ ಲೇಪನ ಬೇಡ - Mahanayaka
6:14 PM Wednesday 5 - February 2025

ಕರೋನ ವೈರಸ್ ಗೆ  ರಾಜಕೀಯ ಲೇಪನ ಬೇಡ

dammapriya
22/12/2023

  •    ದಮ್ಮಪ್ರಿಯ , ಬೆಂಗಳೂರು

ಭಾರತೀಯ ಬಹುಸಂಖ್ಯಾತ ಜನರಿಗೆ ಮತ್ತೊಮ್ಮೆ ಆಘಾತಕಾರಿಯಾಗುವಂತೆ ಕಾಣುತ್ತಿದೆ. ಜನರು ಈಗಾಗಲೇ  ಹಲವಾರು ತೊಂದರೆಗಳಿಂದ ತತ್ತರಿಸಿಹೋಗಿದ್ದಾರೆ.  2019 ರ COVID ಮಹಾಮಾರಿಯಿಂದ ಸಾಮಾನ್ಯ ಜನರ ಬದುಕು  ಸಾಮಾಜಿಕ ಮತ್ತು ಆರ್ಥಿಕ ದುಸ್ಥಿತಿಗೆ ತಲುಪಿದೆ.  ಅದರಿಂದ ಹೊರಬರುವಲ್ಲಿ ಇಂದಿಗೂ ಜನರು ಶ್ರಮಿಸುತ್ತಲೇ ಹಿಡಿ ಶಾಪ ಹಾಕುತ್ತಾ, ಇಂತಹ ವ್ಯವಸ್ಥೆ ಯಾರಿಗೂ ಬರಬಾರದು ಎನ್ನುವುದು ಪತಿಯೊಬ್ಬ ಭಾರತೀಯ ಪ್ರಜೆಯ ಮಾನಸಿಕ ವೇದನೆಯಾಗಿದೆ.  ದುಡಿಯುವ ಯುವಕರು ಮತ್ತೆ ಉದ್ಯೋಗ ಕಳೆದುಕೊಂಡು ಬೀದಿಪಾಲಾಗುತ್ತೇವೇನೋ  ಎನ್ನುವ ಆತಂಕ ನಿರ್ಮಾಣವಾಗಿದೆ.  ಸಣ್ಣ ಪುಟ್ಟ ಉದ್ದಿಮೆದಾರರು ಕೈಚೆಲ್ಲಿ ಕೂರುವಂತಾಗಿದೆ.

ಮತ್ತೊಮ್ಮೆ ಇಂತಹ ಮಹಾಮಾರಿ ಒಕ್ಕರಿಸಿಕೊಂಡರೆ ಸಾಮಾನ್ಯ ಜನರ ಬದುಕು ಒಕ್ಕಲೆಬ್ಬಿಸಿದಂತಾಗುತ್ತದೆ. ಕಳೆದ 2019 ರ ಕರೋನ ಮಹಾಮಾರಿ ಸಾವಿರಾರು  ಜನರ ಬದುಕನ್ನು ಕಿತ್ತುಕೊಂಡಿದೆ.  ಅದೆಷ್ಟೋ ಜನರು ಅನಾರೋಗ್ಯದಿಂದ ನರಳಿ ಸತ್ತರೆ,  ಅವರ ಕುಟುಂಬಗಳು ಇಂದಿಗೂ  ಮಾನಸಿಕವಾಗಿ  ನರಳಿ ಯಾತನೆ ಪಡುವಂತಹ ಸ್ಥಿತಿ ಬಂದೊದಗಿದೆ.  ಈ ಕರೋನ ಮಹಾಮಾರಿ ಮತ್ತೊಮ್ಮೆ ಕೇರಳ ರಾಜ್ಯದಲ್ಲಿ ಬಂದೊದಗಿದ್ದು ಕರ್ನಾಟಕ ಮತ್ತು ಇತರೆ ದಕ್ಷಿಣ ಭಾರತದಲ್ಲಿ ಮತ್ತೊಮ್ಮೆ ತಂಡವವಾಡುವಂತಹ ಎಲ್ಲಾ ಲಕ್ಷಣಗಳು ನಮ್ಮ ಮುಂದೆ ಕಾಣುತ್ತಿವೆ ಎನ್ನುವಷ್ಟರ ಮಟ್ಟಿಗೆ ಜನರು ಚಡಪಡಿಸುತ್ತಿದ್ದಾರೆ.

ಕರೋನ ಮತ್ತೊಮ್ಮೆ ದಕ್ಷಿಣ ಭಾರತವನ್ನು ಆವರಿಸುತ್ತಿದೆ ಎನ್ನುವುದು ಸತ್ಯವೆನಿಸಿದ ಮೇಲೆ ದಯವಿಟ್ಟು ಯಾರೂ ಅದಕ್ಕೆ ರಾಜಕೀಯ ಲೇಪನ ಬಳಿದು ತಮ್ಮ ತಮ್ಮ ಬೇಳೆಕಾಳು ಬೇಯಿಸಿಕೊಳ್ಳಬಾರದು ಎನ್ನುವುದನ್ನು ಎಲ್ಲರೂ ಅರಿಯಬೇಕಿದೆ.  2019 ರ ಚುನಾವಣೆಗೂ ಮುನ್ನ ಕರೋನ ಎಂಬುದು ರಾಜಕೀಯ ರೂಪಾಂತರ ಪಡೆದು ಇಡೀ ದೇಶವನ್ನೇ ಆವರಿಸಿಕೊಂಡಿತು. ಸಾಮಾನ್ಯ ಜನರು ನಮ್ಮನ್ನು ಅಳುವ ರಾಜಕೀಯ ನಾಯಕರುಗಳಿಗೆ ತುಂಬಾ ಅಶ್ಲೀಲ ಪದಗಳಿಂದ ಪ್ರಶ್ನಿಸಿದ ಹೇಳಿಕೆಗಳು ಉಂಟು.  ಹಾಗಾಗಿ ದೇಶದ ಆರ್ಥಿಕ ಪರಿಸ್ಥಿತಿಗೆ ದಕ್ಕೆಯಾಗದಂತೆ,  ದುಡಿಯುವ ಕೈಗಳಿಂದ ಉದ್ಯೋಗ ಜಾರಿಹೋಗದಂತೆ,  ರೈತರ ಬೆಳೆಗಳಿಗೆ ಮಾರುಕಟ್ಟೆ ಸ್ಥಗಿತವಾಗದಂತೆ ತುಂಬಾ ಜಾಗರೂಕತೆವಹಿಸೋಣ,  ದೇಶದ ಏಳಿಗೆಗಾಗಿ ಎಲ್ಲರೂ ಪಕ್ಷಬೇಧ ಮರೆತು ದುಡಿಯಬೇಕಾದ ಅನಿವಾರ್ಯತೆ ಮತ್ತೊಮ್ಮೆ ಎದುರಾಗಬಹುದು,ಅದಕ್ಕಾಗಿ ಸಿದ್ಧರಾಗೋಣ.

ಕರೋನ ಮಹಾಮಾರಿ  ಎನ್ನುವುದು ಭಯಂಕರ  ವೈರಸ್ ಅಲ್ಲವೆಂದು ಸಾಬೀತು ಪಡಿಸೋಣ,  ದೇಶದಲ್ಲಿ ಅಪೌಷ್ಠಿಕತೆಯಿಂದ ದಿನನಿತ್ಯ ಸುಮಾರು  485 ಕ್ಕೂ ಹೆಚ್ಚು ಹಸುಗೂಸುಗಳು ನರಳಿ ಸಾಯುತ್ತಿರುವಾಗ,  ಹೆಣ್ಣು ಮಕ್ಕಳು ತಾಯಿಯ ಗರ್ಭದಲ್ಲಿಯೇ  ಭ್ರೂಣಹತ್ಯೆ ಎನ್ನುವ ಅಮಾನವೀಯ ಪಟ್ಟಿಯಲ್ಲಿ ಸೇರ್ಪಡೆಯಾಗುತ್ತಿರುವಾಗ, ಧರ್ಮ ಜಾತಿ, ಎನ್ನುವ ಕೋಮುಗಲಭೆಯಲ್ಲಿ  ಸಾವಿರಾರು ಜನರ ಹತ್ಯೆ ನಡೆಯುತ್ತಿರುವಾಗ ಕರೋನ ಎನ್ನುವ ವೈರಸ್ ನಮ್ಮನ್ನು ಅದಕ್ಕಿಂತಲೂ ಹೆಚ್ಚಾಗಿ ಕಾಡಲು ಸಾಧ್ಯವೇ ಇಲ್ಲಾ ಎನ್ನುವ ಧೈರ್ಯದಿಂದ ಬದುಕೋಣ.  ಜಾತಿ ಧರ್ಮದ ನೆರಳಲ್ಲಿ ನಡೆಯುವ ಹಿಕ್ಕಮತ್ತಿನ ರಾಜಕಾರಣದ ಮುಂದೆ ಕರೋನ ಯಾವ ಲೆಕ್ಕ ಎನ್ನುವುದು  ಕೆಲವರಿಗೆ ಅರ್ಥಮಾಡಿಸೋಣ.

2019 ರಲ್ಲಿ ಕರೋನ,  ಚುನಾವಣೆಗೂ ಮುನ್ನ  ಪುಲ್ವಾಮಾ ದಾಳಿ ,  ಅದಕ್ಕೂ ಮುನ್ನಾ,  ಧರ್ಮ ರಾಜಕಾರಣ, ಈ ಬಾರಿ ಚುನಾವಣೆಗೂ ಮುನ್ನಾ  ಮತ್ತೊಮ್ಮೆ ಕರೋನ,  ಪಾರ್ಲಿಮೆಂಟ್ ಭವನದ ಮೇಲೆ 20 ವರ್ಷಗಳ ಹಿಂದೆ ದಾಳಿ ನಡೆದಂತೆ ,  ಮತ್ತೆ  ಅಭದ್ರತೆಯ ನೆರಳಲ್ಲಿ  ಯುವಕರ ರೋಚಕ ಪ್ರವೇಶ ಯಾರ ಕುಮ್ಮಕ್ಕಿನಿಂದ ನಡೆಯಿತು.? ನಮ್ಮ ಸಂವಿಧಾನವನ್ನು ಎಷ್ಟು ವಿರೂಪಗೊಳಿಸಲು ಸಾಧ್ಯವೋ ಅಷ್ಟೆಲ್ಲಾ  ಯತ್ನಗಳು ಸತತವಾಗಿ ನಡೆಯುತ್ತಲೇ ಇವೆ ಎನ್ನಬಹುದು.   ಇತ್ತೀಚೆಗೆ ನಡೆದ  ಪಂಚರಾಜ್ಯಗಳ ಚುನಾವಣೆಯ ಫಲಿತಾಂಶವು ಸಹ  ಕರೋನ ಎನ್ನುವ ಮಹಾಮಾರಿಯನ್ನು ಕೈಬೀಸಿ ಕರೆದಂತಿದೆ  ಎನಿಸುತ್ತಿದೆ.  ಮತ್ತೊಮ್ಮೆ ಅಧಿಕಾರವನ್ನು ಹಿಡಿಯಲೇ ಬೇಕು ಎಂದು ಹೊರಟ  ಕೇಂದ್ರ ಸರ್ಕಾರ, ದಕ್ಷಿಣ ಭಾರತದಲ್ಲಿ  ಕೈಚೆಲ್ಲಿ ಕೂರುವಂತಾಯಿತು. ಅದಕ್ಕಾಗಿ   ದಕ್ಷಿಣ ಭಾರತದಲ್ಲಿ ಒಂದು ಸಣ್ಣ ಸಮಸ್ಯೆ ಕಾಣಿಸಿದರು ಅದನ್ನು  ದೊಡ್ಡದನ್ನಾಗಿ  ರೂಪಾಂತರಿಸಿ  ಸುದ್ಧಿ ಹಬ್ಬಿಸುವ ಕೆಲಸಕ್ಕೆ ಕೈ ಹಾಕಿದೆ.  ಶಬರಿಮಲೆಯಲ್ಲಿ ಭಕ್ತಾಧಿಗಳಿಗೆ ಸರಿಯಾದ ವ್ಯವಸ್ಥೆ ಇಲ್ಲವೆನ್ನುವುದೇ  ದೊಡ್ಡ  ಗೊಂದಲ ಸೃಷ್ಟಿಸಿದಂತಾಗಿದೆ.  ಆದರೆ  ಸಾವಿರಾರು ಜನರು  ಗಂಗಾನದಿಯ ದಡದಲ್ಲಿ ಕೊಳೆತು ನಾರುತ್ತಿರುವುದನ್ನು  ಯಾರಿಗೂ ಹೇಳದಾಗಿದೆ.

ಈಗೆ ಜನರನ್ನು ಚುನಾವಣೆಯ ನೆಪದಲ್ಲಿ ದಿಕ್ಕು ತಪ್ಪಿಸಿ ಮತ್ತೊಮ್ಮೆ ಅಧಿಕಾರ ಹಿಡಿಯಲು ಹೊರಟಿರುವ ಸರ್ಕಾರಗಳಿಗೆ ತಾವು ಮಾಡಿರುವ ಸಾಧನೆ ಮತ್ತು  ಮುಂದಿನ ಗುರಿ ಹೇಳಿಕೊಳ್ಳದಾಗಿದೆ.  ಎಷ್ಟು ನಿರುದ್ಯೋಗಿಗಳಿಗೆ ಉದ್ಯೋಗ ನೀಡಲಾಯಿತು ? ರೂ. 500/ 1000/- ಮುಖ ಬೆಲೆಯ ನೋಟಿನ ರದ್ಧತಿಯಿಂದ ಎಷ್ಟು ಕಪ್ಪು ಹಣವನ್ನು ಹೊರ ತೆಗೆಯಲಾಯಿತು.?  ರೈಲ್ವೆ ಉದ್ದಿಮೆಯನ್ನು ಖಾಸಗಿಯವರ ಕೈಗೊಪ್ಪಿಸಿದ ಮೇಲೆ  ಎಷ್ಟು ಲಾಭ ಭಾರತದ ಖಜಾನೆಗೆ ಬಂದು ಸೇರಿತು ? ಬಂದರು ವಿಮಾನ ಯಾನ ಎಲ್ಲವನ್ನು ಖಾಸಗೀಯವರಿಗೆ ನೀಡಿದ ಮೇಲೆ ಭಾರತ ಆರ್ಥಿಕ ಅಭಿವೃದ್ಧಿಯಲ್ಲಿ ಎಷ್ಟನೇ ಸ್ಥಾನದ್ಲಲಿದೆ ? ಕಳೆದ 10 ವರ್ಷಗಳ ಆಳ್ವಿಕೆಯಲ್ಲಿ  ರೈತರ ಸಾಲವನ್ನು ಎಷ್ಟು  ಮನ್ನಾ ಮಾಡಲಾಯಿತು ? ಕಾರ್ಪೊರೇಟ್ ಕಂಪನಿಗಳ ಸಾಲ ಕಳೆದ 10 ವರ್ಷಗಳಲ್ಲಿ ಸುಮಾರು 15.50 ಲಕ್ಷ ಕೋಟಿಗೂ ಹೆಚ್ಚಾಗಿ ರೈಟಪ್  ಮಾಡಿದ ಹಾಗೆ ಸಾಮಾನ್ಯ ಜನರ ಸಾಲವನ್ನ ಎಷ್ಟು ಮನ್ನಾ ಮಾಡಲಾಗಿದೆ.  ದೇಶದ ಲಾಭದಾಯಕ ಬ್ಯಾಂಕುಗಳನ್ನು ವಿಲೀನ ಮಾಡಿ ಜಗತ್ತಿನಲ್ಲಿ ದೇಶದ ಬ್ಯಾಂಕುಗಳು ವಹಿವಾಟು ನಡೆಸಬೇಕು ಎಂದದ್ದಾಯಿತು, ಎಷ್ಟು ರಾಷ್ಟ್ರಗಳಲ್ಲಿ ಎಷ್ಟೆಷ್ಟು ವಹಿವಾಟು ಜರುಗುತ್ತಿದೆ ಅದರಿಂದ ದೇಶ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಎಷ್ಟನೇ ಸ್ಥಾನದಲ್ಲಿದೆ ? 2019 ರ ಚುನಾವಣೆಗೂ ಮುನ್ನಾ ಸುಮಾರು 1ಲಕ್ಷದ 71 ಸಾವಿರ ಕೋಟಿ ತುರ್ತು  ಹಣವನ್ನು ಯಾವುದಕ್ಕೆ ಖರ್ಚು ಮಾಡಲಾಯಿತು ? ಇದುವರೆವಿಗೂ RBI ಗೆ ಲೆಕ್ಕ ನೀಡದ್ದಾಗಿದೆ.  36000 BSNL ಟವರ್ ಗಳನ್ನು JIO ಆಗಿ ಪರಿವರ್ತಿಸಿ, BSNL ನೌಕರರ ಬಾಯಿಗೆ ಮಣ್ಣು ಹಾಕಿದ್ದಾಯಿತು. ಹಾಗಾದರೆ ಜಿಯೋ ಕಂಪನಿಯವರು ಸರ್ಕಾರಕ್ಕೆ ನೀಡಿದ ಲಾಭವೆಷ್ಟು ? ಮತ್ತೆ ಯಾಕೆ ಕಾರ್ಪೊರೇಟ್ ಕಂಪನಿಗಳಿಗೆ 10.6 ಲಕ್ಷ ಕೋಟಿ ಹಣವನ್ನು ರಿಟನ್ ಅಪ್ ಮಾಡಲಾಗಿದೆ. ?

Covid 19 ಸಂದರ್ಭದಲ್ಲಿ ನಿಮ್ಮ ಬ್ಯಾಂಕ್ ಸಾಲ ಕಟ್ಟಬೇಡಿ ಎನ್ನುವ  ಗೊಂದಲದ ಘೋಷಣೆ, ಪ್ರತಿಯೊಬ್ಬ ನಾಗರೀಕ ಪ್ರಜೆಯು CIBIL ಎನ್ನುವ ವೈರಸ್ ನಲ್ಲಿ ಸಿಲುಕಿ ನರಳುವಂತಾಗಿದೆ. ಯಾವ ಬ್ಯಾಂಕುಗಳಿಗೆ ಹೋದರು CIBIL ಸ್ಕೋರ್ ಇಲ್ಲಾ ನಿಮಗೆ ಬ್ಯಾಂಕ್ ಸೌಲಭ್ಯವಿಲ್ಲಾ ಎಂದು ಹೇಳುತ್ತಾ ಇವತ್ತಿಗೂ ಸಾಮಾನ್ಯ ಜನರನ್ನು ಬಾಧಿಸುತ್ತಿದೆ. ಇದರಿಂದಾಗಿ  ಜನಸಾಮಾನ್ಯರ ಕೆಳವರ್ಗಗಳ ಆರ್ಥಿಕತೆಯ ಸೊಂಟವನ್ನು ಮುರಿದಂತಾಗಿದೆ.  ಇದೇನಾ ನಿಮ್ಮ ಅಭಿವೃದ್ಧಿಯ ಕೆಲಸಗಳು ?. ಇಂತಹ  ಮಹತ್ ಕಾರ್ಯಗಳನ್ನು ಹೇಳಿಕೊಳ್ಳಲಾಗದೆ ಮತ್ತೊಮ್ಮೆ 2024 ರ ಚುನಾವಣೆಯ ರೂಪಾಂತರವಾಗಿ ಕರೋನ ಎನ್ನುವ ವೈರಸ್ಸನ್ನು ಎಲ್ಲರ ತಲೆಯಲ್ಲೂ ತುಂಬಲಾಗುತ್ತಿದೆಯೇ ?

ಇದುವರೆವಿಗೂ  ಎಲ್ಲರ ಬದುಕನ್ನು ಗೊಂದಲಮಯಗೊಳಿಸಿದ್ದಾಯಿತು,ಎಲ್ಲದಕ್ಕೂ ರಾಜಕೀಯ ಲೇಪನ ಮಾಡಬೇಡಿ.  ನಿಮಗೆ ಸಾಧ್ಯವಾದರೆ ಅಭಿವೃದ್ಧಿ ಮಾಡಿ.  ಇಲ್ಲವಾದಲ್ಲಿ ನೀವು ಏನು ಮಾಡದಿದ್ದರೂ ಪರವಾಗಿಲ್ಲ,  ಬಹುಸಂಖ್ಯಾತ ಜನಸಾಮಾನ್ಯರ ಬದುಕಿನ ಜೊತೆಯಲ್ಲಿ ಚಲ್ಲಾಟವಾಡಬೇಡಿ.

ಇತ್ತೀಚಿನ ಸುದ್ದಿ