ಕೊರೊನಾದಿಂದ ಮೃತಪಟ್ಟ ತಂದೆಯ ಚಿತೆಗೆ ಹಾರಿದ ಪುತ್ರಿ

ಜೈಪುರ: ತಂದೆಯ ಸಾವನ್ನು ಸಹಿಸಲು ಸಾಧ್ಯವಾಗದ ಪುತ್ರಿಯೊಬ್ಬಳು ತಂದೆಯ ಚಿತೆಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಆಘಾತಕಾರಿ ಘಟನೆ ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ನಡೆದಿದ್ದು, ಕೊರೊನಾದಿಂದ ಮೃತಪಟ್ಟ ತಂದೆಯ ಅಂತ್ಯಸಂಸ್ಕಾರದ ಸಂದರ್ಭದಲ್ಲಿ ಪುತ್ರಿ ಈ ಕೃತ್ಯ ನಡೆಸಿದ್ದಾಳೆ.
73 ವರ್ಷ ವಯಸ್ಸಿನ ದಾಮೋದರದಾಸ್ ಅವರು ಮಂಗಳವಾರ ಬೆಳಗ್ಗೆ ಕೊರೊನಾ ಸೋಂಕಿನಿಂದ ಕೊನೆಯುಸಿರೆಳೆದಿದ್ದರು. ಹೀಗಾಗಿ ಆಸ್ಪತ್ರೆ ಸಿಬ್ಬಂದಿ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದರು.
ಮೃತದೇಹವನ್ನು ಅಂತ್ಯಕ್ರಿಯೆಗೆ ಕೊಂಡುಹೋಗುವ ವೇಳೆ ದಾಮೋದರದಾಸ್ ಅವರ ಕಿರಿಯ ಪುತ್ರಿ ಚಂದ್ರಕಲಾ ತಾನು ಕೂಡ ಸ್ಮಶಾನಕ್ಕೆ ಬರುವುದಾಗಿ ಪುತ್ರಿ ಪಟ್ಟು ಹಿಡಿದಿದ್ದಳು. ಆದರೆ ಕುಟುಂಬಸ್ಥರು ನಿರಾಕರಿಸಿದ್ದರು. ತಂದೆಯ ಸಾವನ್ನು ಬಹಳ ಮನಸ್ಸಿಗೆ ಹಚ್ಚಿಕೊಂಡಿದ್ದ ಆಕೆ ಯಾರು ಹೇಳಿದರೂ ಕೇಳದೇ ಸ್ಮಶಾನಕ್ಕೆ ಬಂದಿದ್ದಳು.
ಸ್ಮಶಾನಕ್ಕೆ ಹೋದ ಚಂದ್ರಕಲಾ ಉರಿಯುತ್ತಿದ್ದ ಚಿತೆಗೆ ಹಾರಿದ್ದಾಳೆ. ಈ ವೇಳೆ ಸ್ಥಳದಲ್ಲಿದ್ದ ಕುಟುಂಬಸ್ಥರು ಆಕೆಯನ್ನು ರಕ್ಷಿಸಿದ್ದಾರೆ. ಆದರೆ, ಅದಾಗಲೇ ಆಕೆ ಶೇ.70ರಷ್ಟು ಸುಟ್ಟ ಗಾಯಗಳಿಗೊಳಗಾಗಿದ್ದಳು. ಸದ್ಯ ಆಕೆಯ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾಳೆ.