ಕೊರೊನಾ ಸೋಂಕಿಗೆ ಬಲಿಯಾದ ತಂದೆ –ತಾಯಿ | ಇಬ್ಬರು ಮಕ್ಕಳು ಅನಾಥ
30/05/2021
ಮೈಸೂರು: ಕೊರೊನಾ ಸೋಂಕಿಗೆ 10 ದಿನಗಳ ಅಂತರದಲ್ಲಿ ಅಪ್ಪ-ಅಮ್ಮ ಬಲಿಯಾಗಿದ್ದು, ಇದರಿಂದಾಗಿ ಇಬ್ಬರು ಮಕ್ಕಳು ಅನಾಥರಾಗಿರುವ ಘಟನೆ ನಡೆದಿದೆ.
ಮೈಸೂರು ವಿವಿ ಗುತ್ತಿಗೆ ನೌಕರ ಪ್ರಸನ್ನ ಹಾಗೂ ಪತ್ನಿ ಸುಷ್ಮಾ ಕೊರೊನಾದಿಂದ ಮೃತಪಟ್ಟಿದ್ದಾರೆ. ಪತಿಗೆ ಕೊರೊನಾ ದೃಢಪಟ್ಟಿದ್ದರಿಂದ ಮೈಸೂರಿನ ಗಂಗೋತ್ರಿ ಬಡಾವಣೆ ಮನೆಯಲ್ಲಿ ಪ್ರಸನ್ನ ಕ್ವಾರಂಟೈನ್ ಆಗಿದ್ದರು.
ಪತಿಯನ್ನು ನೋಡಿಕೊಳ್ಳುತ್ತಿದ್ದ ಪತ್ನಿಗೂ ಕೊರೊನಾ ಸೋಂಕು ಹರಡಿದ್ದು, ಮೊದಲು ಪತ್ನಿ ಸುಷ್ಮಾ ಅವರು ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ಇದಾದ ಬೆನ್ನಲ್ಲೇ ಮೇ 28ರಂದು ಪತಿ ಪ್ರಸನ್ನ ಅವರು ಆಸ್ಪತ್ರೆಗೆ ದಾಖಲಾಗಿದ್ದು, ಅವರು ಕೂಡ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ತಂದೆ-ತಾಯಿ ಕೊರೊನಾಕ್ಕೆ ಬಲಿಯಾಗಿರುವುದರಿಂದಾಗಿ 18 ವರ್ಷ ವಯಸ್ಸಿನ ಹರ್ಷ ಹಾಗೂ 16 ವರ್ಷದ ನಯನ ತಮ್ಮ ಪೋಷಕರನ್ನು ಕಳೆದುಕೊಂಡಿದ್ದಾರೆ. ಇನ್ನೂ ಮಕ್ಕಳು ತಮ್ಮ ತಾಯಿಯ ತವರಿನಲ್ಲಿದ್ದುದರಿಂದಾಗಿ ಕೊರೊನಾ ಸೋಂಕಿನಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.