ಕೊರೊನಾಮ್ಮ ಎಂಬ ಸುಳ್ಳು ಹೇಳುತ್ತಿರುವವರ ಮೇಲೆ ಕ್ರಿಮಿನಲ್ ಕೇಸ್ ಜಡಿಯಿರಿ | ವ್ಯಾಪಕ ಆಕ್ರೋಶ
ಬೆಂಗಳೂರು: ದೇಶದಲ್ಲಿ ಕೊರೊನಾ ವೈರಸ್ ನಿಂದಾಗಿ ಜನರು ಸಾಯುತ್ತಿದ್ದರೆ, ಇನ್ನೊಂದೆಡೆಯಲ್ಲಿ ಕೊರೊನಾವನ್ನು ದೇವರನ್ನಾಗಿ ಮಾಡುವ ಹುಚ್ಚಾಟಗಳು ನಡೆಯುತ್ತಿದೆ. ಕೊರೊನಾಮ್ಮನಿಂದಾಗಿ ಕೊರೊನಾ ಬಂದಿದೆ ಎಂಬ ಸುಳ್ಳು ವದಂತಿಗಳನ್ನು ಹಬ್ಬಿಸುತ್ತಿದ್ದಾರೆ. ಕೊರೊನಾ ವಿರುದ್ಧ ಸುಳ್ಳು ಸುದ್ದಿ ಹಬ್ಬಿಸುವವರ ಮೇಲೆ ರಾಜ್ಯ ಸರ್ಕಾರ ಕ್ರಿಮಿನಲ್ ಕೇಸ್ ದಾಖಲಿಸಬೇಕು ಎಂದು ವ್ಯಾಪಕ ಆಕ್ರೋಶ ಕೇಳಿ ಬಂದಿದೆ.
ಬ್ರಹ್ಮಾಂಡ ಗುರೂಜಿ ಎಂದು ಸಾರ್ವಜನಿಕವಾಗಿ ಗುರುತಿಸಿಕೊಂಡಿರುವ ಸ್ವಾಮೀಜಿಯೋರ್ವರು, ಕೊರೊನಾಮ್ಮನನ್ನು ಪೂಜೆ ಮಾಡಬೇಕು ಎಂದು ಹೇಳಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇಂತಹ ಸುಳ್ಳು ಮಾಹಿತಿಗಳನ್ನು ಹರಿದಾಡಿ ಜನರನ್ನು ತಪ್ಪು ದಾರಿಗೆ ಎಳೆಯುತ್ತಿರುವ ಸ್ವಾಮೀಜಿಗಳ ವಿರುದ್ಧ ರಾಜ್ಯ ಸರ್ಕಾರ ಕ್ರಿಮಿನಲ್ ಮೊಕದ್ದಮೆ ಹೂಡಿ ಕಠಿಣ ಶಿಕ್ಷೆ ನೀಡಬೇಕು. ಜನರು ತಮ್ಮ ಕುಟುಂಬಸ್ಥರನ್ನು ಕಳೆದುಕೊಂಡು ನೋವಿನಲ್ಲಿರುವ ಸಂದರ್ಭದಲ್ಲಿ ಕೆಲವರು ತಮ್ಮ ಹೊಟ್ಟೆ ಹೊರೆಯಲು ಸೋಮಾರಿಗಳಂತೆ ಸುಳ್ಳುಗಳನ್ನು ಹೇಳುತ್ತಾ, ಜನ ಸಾಮಾನ್ಯರ ಜೀವನದ ಜೊತೆಗೆ ಚೆಲ್ಲಾಟವಾಡುತ್ತಿರುವುದು ನಿಜಕ್ಕೂ ಖಂಡನೀಯವಾಗಿದೆ ಎಂದು ನೊಂದ ಜನರು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಕೊರೊನಾ ಸಂಬಂಧ ಯಾರೇ ಸುಳ್ಳು ಸುದ್ದಿಗಳನ್ನು ಹಬ್ಬಿಸಿದರೂ ಕ್ರಮಕೈಗೊಳ್ಳುತ್ತೇವೆ ಎಂದು ಸರ್ಕಾರ ಹೇಳುತ್ತಿದೆ. ಆದರೆ, ಕೆಲವರು ಬಾಯಿಗೆ ಬಂದಂತೆ ಕೊರೊನಾದ ಬಗ್ಗೆ ಹೇಳಿಕೆ ನೀಡಿದರೂ ಸರ್ಕಾರ ಕ್ಯಾರೇ ಅನ್ನುತ್ತಿಲ್ಲ. ಒಂದು ಸಾಂಕ್ರಾಮಿಕ ರೋಗವನ್ನು ದೇವರು ಎನ್ನುವ ಭಾವನೆಯನ್ನು ಜನರ ಮನಸ್ಸಿನಲ್ಲಿ ಬಿತ್ತುವುದರಿಂದ ಇನ್ನಿಲ್ಲದ ಸಮಸ್ಯೆಗಳು ಸೃಷ್ಟಿಯಾಗಲಿದೆ. ಕೊರೊನಾದಿಂದ ಆದಾಯ ಕಳೆದುಕೊಂಡ ಕೆಲವು ಸ್ವಾಮೀಜಿಗಳ ಗೆಟಪ್ ನಲ್ಲಿರುವವರು ಒಂದೇ ಬಾರಿಗೆ ಹಣ ಮಾಡಲು ಕೊರೊನಾಮ್ಮ ಎನ್ನುವ ನಾಟಕವನ್ನಾಡುತ್ತಿದ್ದಾರೆ ಸರ್ಕಾರ ತಕ್ಷಣವೇ ಇಂತಹವರ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.