ಯಾವುದೇ ಕ್ಷಣದಲ್ಲಿ ನಿಗಮ ಮಂಡಳಿ ನೇಮಕಾತಿ ಪಟ್ಟಿ ಬಿಡುಗಡೆಯಾಗಬಹುದು: ಡಿ.ಕೆ.ಶಿವಕುಮಾರ್

18/01/2024
ಬೆಂಗಳೂರು: ನಿಗಮ ಮಂಡಳಿ ನೇಮಕಾತಿ ಪಟ್ಟಿ ಈಗಾಗಲೇ ತಯಾರಾಗಿದೆ. ಯಾವುದೇ ಕ್ಷಣದಲ್ಲಿ ನಿಗಮ ಮಂಡಳಿ ಪಟ್ಟಿ ಪ್ರಕಟವಾಗಬಹುದು ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಈ ಬಗ್ಗೆ ಮಾತನಾಡಿದ ಅವರು, ಈ ಸೆಕೆಂಡ್ ನಲ್ಲೇ ನಿಗಮ ಮಂಡಳಿ ನೇಮಕಾತಿ ಪಟ್ಟಿ ಬಿಡುಗಡೆ ಆಗಬಹುದು. ನಿನ್ನೆಯೂ ಹೇಳಿದ್ದೆ, ಇವತ್ತೂ ಅದನ್ನೇ ಹೇಳುತ್ತಿದ್ದೇನೆ. ಯಾವುದೇ ಕ್ಷಣದಲ್ಲಾದರೂ ಪಟ್ಟಿ ಬಿಡುಗಡೆ ಆಗಬಹುದು ಎಂದು ತಿಳಿಸಿದ್ದಾರೆ.
ನಿಗಮ ಮಂಡಳಿ ನೇಮಕಾತಿ ಪಟ್ಟಿಯಲ್ಲಿ 36 ಶಾಸಕರು, 39 ಕಾರ್ಯಕರ್ತರ ಹೆಸರನ್ನು ಪ್ರಕಟಿಸಲಾಗುವುದು ಎಂದು ಇದೇ ವೇಳೆ ಡಿಕೆಶಿ ತಿಳಿಸಿದರು.
ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆಗೆ ಸಚಿವರ ನಿರಾಕರಣೆ ವಿಚಾರವಾಗಿ ಪ್ರತಿಕ್ರಿಯಿಸಿ, ಪಕ್ಷದ ಹೈಕಮಾಂಡ್ ಹೇಳುವುದನ್ನು ನಾನು ಕೇಳಬೇಕು, ಸಚಿವರು ಕೇಳಬೇಕಾಗುತ್ತದೆ. ಪಕ್ಷ ಹೇಳಿದಂತೆ ಎಲ್ಲರೂ ಕೇಳಬೇಕು ಎಂದು ಪರೋಕ್ಷವಾಗಿ ಸಚಿವರು ಕೂಡ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಬೇಕಾಗುತ್ತದೆ ಎಂದು ತಿಳಿಸಿದರು.