ಗಂಗಾವತಿ ಸರ್ಕಾರಿ ಆಸ್ಪತ್ರೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ: ಹಣ ಕೊಡದೇ ಚಿಕಿತ್ಸೆ ಸಿಗಲ್ಲ!
ಗಂಗಾವತಿ: ಬಡ ಜನರಿಗೆ ಅನುಕೂಲವಾಗಬೇಕಾದ ಸರ್ಕಾರಿ ಆಸ್ಪತ್ರೆಗಳಲ್ಲಿಯೂ ಜನರು ಹಣ ಕೊಟ್ಟು ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದು, ಆಸ್ಪತ್ರೆಗೆ ಬರುವ ಮುಗ್ದ ಜನರಿಂದ ನರ್ಸ್ ಗಳು ಮತ್ತು ಸಿಜಾರಿನ್ ಮಾಡುವಂತಹ ಡಾಕ್ಟರ್ ಗಳು ಹಣ ಪಡೆಯುತ್ತಿರುವ ಗಂಭೀರ ಆರೋಪ ಕೇಳಿ ಬಂದಿದೆ.
ಗಂಗಾವತಿ ತಾಲೂಕಿನ ಸರಕಾರಿ ಸಾರ್ವಜನಿಕ ಆಸ್ಪತ್ರೆಗೆ ಪ್ರತಿನಿತ್ಯ ಶಸ್ತ್ರ ಚಿಕಿತ್ಸೆ ಪಡೆಯಲು, ಹೆರಿಗೆ ಚಿಕಿತ್ಸೆಗೆ ಮತ್ತು ಸಣ್ಣಪುಟ್ಟ ಕಾಯಿಲೆಗಳಿಗೆ ಚಿಕಿತ್ಸೆ ಪಡೆಯಲು ಗಂಗಾವತಿ ಸುತ್ತಮುತ್ತ ಇರುವಂತಹ ಹಳ್ಳಿಗಳಿಂದ ಮತ್ತು ಗಂಗಾವತಿ ಪಟ್ಟಣದಲ್ಲಿ ವಾಸ ಮಾಡುವಂತಹ ಜನರು ಆಸ್ಪತ್ರೆಗೆ ಆಗಮಿಸುತ್ತಿದ್ದಾರೆ. ಆದರೆ ಇಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಗಂಗಾವತಿ ತಾಲೂಕು ದಲಿತ ಮಹಾಸಭಾದ ಮುಖಂಡರಾದ ಚನ್ನಬಸವ ಮಾನ್ವಿ, ಸಿ.ಎಚ್.ಹಂಚಿನಾಳ ಗಂಗಾವತಿ , ರಗಡಪ್ಪ ಹೊಸಳ್ಳಿ ಬಸವರಾಜ ಹಾಗೂ ಸಾರ್ವಜನಿಕರು ಆರೋಪಿಸಿದ್ದಾರೆ.
ಈ ಸರ್ಕಾರ ಆಸ್ಪತ್ರೆಯಲ್ಲಿ ಕೆಲಸ ಮಾಡುವಂತಹ ನರ್ಸ್ ಗಳು ಮತ್ತು ಸಿಜಾರಿನ್ ಮಾಡುವಂತಹ ಡಾಕ್ಟರ್ ಗಳು ಸೇರಿಕೊಂಡು ಒಬ್ಬ ಗರ್ಭಿಣಿ ಮಹಿಳಾ ಕಡೆಯಿಂದ ಸುಮಾರು 8000 ರಿಂದ 10,000 ವರೆಗೆ ಹಣ ವಸೂಲಿ ಮಾಡುತ್ತಾರೆ. ಇದಲ್ಲದೆ ವಾರ್ಡುಗಳಲ್ಲಿ ಕೆಲಸ ಮಾಡುವಂತಹ ನರ್ಸುಗಳು ಮತ್ತು ಇಂಜೆಕ್ಷನ್ ಮಾಡುವಂತಹ ನರ್ಸ್ ಗಳು ಒಂದು ಮಗುವಿಗೆ ತಾಯಿ ಕಡೆಯಿಂದ ಮಗುವಿಗೆ ಎಂಎಂ ಇಂಜೆಕ್ಷನ್ ಮಾಡಲಿಕ್ಕೆ 50 ರೂಪಾಯಿ ಯಿಂದ ರೂ.100 ವರೆಗೆ ಹಣ ವಸಲಿ ಮಾಡುತ್ತಾರೆ ಎಂದು ಆರೋಪಿಸಲಾಗಿದೆ.
ಗರ್ಭೀಣಿಯರಿಗೆ ಸಿಸೇರಿಯನ್ ಮಾಡಲು ಬರುವವರ ಬಳಿ ಹಣಕೊಟ್ಟರೆ ಶಸ್ತ್ರ ಚಿಕಿತ್ಸೆ ಮಾಡಿಸುತ್ತೇವೆ. ಇಲ್ಲವಾದರೆ, ನೀವು ಕೊಪ್ಪಳ ಜಿಲ್ಲಾಸ್ಪತ್ರೆಗೆ ಹೋಗಿ ಎಂದು ಸಿಬ್ಬಂದಿ ಹೇಳುತ್ತಿದ್ದಾರೆ. ಸಿಬ್ಬಂದಿಯ ಬಗ್ಗೆ ವೈದ್ಯಾಧಿಕಾರಿ ಈಶ್ವರ ಸೌಡಿ ಅವರ ಬಳಿ ದೂರು ನೀಡಲು ಹೋದಾಗ, ಈ ವಿಚಾರ ನನಗೆ ಸಂಬಂಧಿಸಿದ್ದಲ್ಲ ಎಂಬ ಹಾರಿಕೆಯ ಉತ್ತರ ನೀಡುತ್ತಾರೆ ಎಂದು ಆರೋಪಿಸಲಾಗಿದೆ.
ಇಲ್ಲಿಗೆ ಬರುವ ರೋಗಿಗಳು ತಮ್ಮ ಪ್ರತಿಯೊಂದು ಕೆಲಸಕ್ಕೂ ಬಡವರಿಂದ ಹಣ ಪೀಕುತ್ತಿದ್ದಾರೆ. ಡಾ.ಈಶ್ವರ ಸವಡಿ ಅವರು ಇದಕ್ಕೆಲ್ಲ ಬೆಂಬಲವಾಗಿ ನಿಂತಿದ್ದಾರೆಂಬ ಅನುಮಾನ ವ್ಯಕ್ತವಾಗಿದೆ. ಈ ಸಂಬಂಧ ಸಿಬ್ಬಂದಿ ಹಾಗೂ ವೈದ್ಯಾಧಿಕಾರಿ ಡಾ.ಈಶ್ವರ ಸವಡಿ ವಿರುದ್ಧ ತಕ್ಷಣವೇ ಕಾನೂನು ಕ್ರಮಕೈಗೊಳ್ಳಬೇಕು ಎಂದು ದಲಿತ ಮಹಾಸಭಾ ಒತ್ತಾಯಿಸಿದೆ.
ಆಸ್ಪತ್ರೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ವಿಡಿಯೋಗಳು, ಸಂಬಂಧಿತ ಸಾರ್ವಜನಿಕರ ಹೇಳಿಕೆಗಳ ವಿಡಿಯೋ ಲಭ್ಯವಾಗಿದೆ.
ವಿಡಿಯೋ ನೋಡಿ: