ಕೊವಿಡ್ ವ್ಯಾಕ್ಸಿನ್ ಪಡೆದ ವ್ಯಕ್ತಿಯ ದೇಹಕ್ಕೆ ಅಂಟಿಕೊಳ್ಳುತ್ತಿವೆ ಕಬ್ಬಿಣದ ವಸ್ತುಗಳು | ಜಿಲ್ಲಾಧಿಕಾರಿ ನೀಡಿದ ಸ್ಪಷ್ಟನೆ ಏನು ಗೊತ್ತಾ?
ಉಡುಪಿ: ಕೊವಿಡ್ ವ್ಯಾಕ್ಸಿನ್ ಪಡೆದ ಪರಿಣಾಮ ದೇಹದಲ್ಲಿ ಅಯಸ್ಕಾಂತೀಯ ಶಕ್ತಿಯಿಂದ ದೇಹಕ್ಕೆ ಕಬ್ಬಿಣದ ವಸ್ತುಗಳು ಅಂಟಿಕೊಳ್ಳುತ್ತಿವೆ ಎಂಬ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಉಡುಪಿಯ ಆಡಿಟೋರಿಯಂ ಬಳಿ ಇರುವ ರಾಘವೇಂದ್ರ ಶೇಟ್ ಎಂಬವರ ದೇಹದಲ್ಲಿ ಇಂತಹದ್ದೊಂದು ಸಮಸ್ಯೆ ಕಾರಣಿಸಿಕೊಂಡಿದೆ ಎಂದು ವರದಿಯಾಗಿದೆ.
ಪುಣೆಯ ವ್ಯಕ್ತಿಯೊಬ್ಬರು, ಕೊವಿಡ್ ಲಸಿಕೆ ಪಡೆದ ಬಳಿಕ ತನ್ನ ದೇಹಕ್ಕೆ ಕಬ್ಬಿಣದ ವಸ್ತುಗಳು ಅಂಟಿಕೊಳ್ಳುತ್ತಿವೆ ಎನ್ನುವ ವಿಡಿಯೋವನ್ನು ಹಂಚಿಕೊಂಡಿದ್ದರು. ಈ ವಿಡಿಯೋವನ್ನು ನೋಡಿ, ತಮ್ಮ ಮೈಗೂ ಕಬ್ಬಿಣದ ವಸ್ತುಗಳು ಅಂಟಿಕೊಳ್ಳುತ್ತಿದೆಯೇ ಎಂದು ನೋಡಿದ್ದು, ಈ ವೇಳೆ ಸೌಟು, ನಾಣ್ಯ ಮೊದಲಾದ ವಸ್ತುಗಳನ್ನು ದೇಹದ ಬಳಿಗೆ ತಂದಾಗ ಅದು ದೇಹಕ್ಕೆ ಅಂಟಿಕೊಳ್ಳುತ್ತಿದೆ ಎಂದು ಅವರು ಹೇಳಿದ್ದಾರೆ. ಈ ಸಂಬಂಧ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಈ ವಿಡಿಯೋ ವೈರಲ್ ಆದ ಬಗ್ಗೆ ಪ್ರತಿಕ್ರಿಯಿಸಿರುವ ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್, ಲಸಿಕೆ ಪಡೆದುಕೊಂಡ ಕಾರಣ ಇಂತಹ ಅಯಸ್ಕಾಂತೀಯ ಶಕ್ತಿ ದೇಹದಲ್ಲಿ ಬರುತ್ತದೆ ಎಂಬುವುದು ಸುಳ್ಳು ವಿಚಾರ. ರಾಘವೇಂದ್ರ ಅವರನ್ನು ಜಿಲ್ಲಾ ಆರೋಗ್ಯಾಧಿಕಾರಿಗಳು ತಪಾಸಣೆಗೆ ಬರಲು ಹೇಳಿದ್ದಾರೆ. ರಾಘವೇಂದ್ರ ಅವರು ಎಪ್ರಿಲ್ 28 ರಂದು ಮೊದಲ ಡೋಸ್ ವ್ಯಾಕ್ಸೀನ್ ಪಡೆದುಕೊಂಡಿದ್ದು ವ್ಯಾಕ್ಸೀನ್ ಪಡೆದುಕೊಂಡು ಒಂದು ತಿಂಗಳಿಗೂ ಅಧಿಕ ಸಮಯ ಆಗಿದೆ. ಅವರಿಗೆ ಮಧುಮೇಹ, ಬಿಪಿ ಕಾಯಿಲೆ ಕೂಡಾ ಇದೆ. ಅವರನ್ನು ತಪಾಸಣೆಗೆ ಒಳಪಡಿಸಲಾಗಿದೆ. ಸಾರ್ವಜನಿಕರು ವದಂತಿಗಳನ್ನು ನಂಬದೆ ಭಯಪಡದೆ ವ್ಯಾಕ್ಸಿನ್ ಪಡೆದುಕೊಳ್ಳಬೇಕು ಎಂದು ಅವರು ಮನವಿ ಮಾಡಿದ್ದಾರೆ.