ಮಂಗಳೂರಿನಲ್ಲಿ ಕೋವಿಡ್ ಲಸಿಕೆಗಾಗಿ ಆಸ್ಪತ್ರೆ ಮುಂದೆ ಮುಗಿಬಿದ್ದ ಜನರು

29/04/2021
ಮಂಗಳೂರು: ಮಿತಿಮೀರಿದ ಕೊರೊನಾ ಪ್ರಕರಣಗಳು, ಸಾಲುಸಾಲು ಸಾವುಗಳ ನಡುವೆಯೇ ಮಂಗಳೂರು ನಗರದ ವೆನ್ಲಾಕ್ ಆಸ್ಪತ್ರೆಯಲ್ಲಿ ಕೊವಿಡ್ ಲಸಿಕೆ ಪಡೆಯಲು ಜನರು ಮುಗಿಬಿದ್ದ ಘಟನೆ ಗುರುವಾರ ನಡೆದಿದೆ.
ವೆನ್ಲಾಕ್ ಆಸ್ಪತ್ರೆಯ ಆಯುಷ್ ಬ್ಲಾಕ್ ಮುಂದೆ 200ಕ್ಕೂ ಅಧಿಕ ಜನರು ಗುಂಪು ಸೇರಿದ್ದು, ಆದರೆ ಕೊವಿಡ್ ಲಸಿಕೆ ದೊರೆಯದೇ ವಾಪಸ್ ಆಗಿದ್ದಾರೆ. ಕೋವಿಶೀಲ್ಡ್ ನ 2ನೇ ಡೋಸ್ ಹಾಕಲು ಬಂದವರಿಗೆ ಮಾತ್ರ ಟೋಕಲ್ ವಿತರಿಸಲಾಗುತ್ತಿದೆ. ಜಿಲ್ಲಾಧಿಕಾರಿ ಬಂದ ಬಳಿಕ ಮೊದಲ ಡೋಸ್ ನೀಡುತ್ತೇವೆ ಎಂದು ಆಸ್ಪತ್ರೆ ಸಿಬ್ಬಂದಿ ಹೇಳಿದ್ದಾರೆ. ಇದರಿಂದಾಗಿ ಸ್ಥಳದಲ್ಲಿ ಗದ್ದಲ ಸೃಷ್ಟಿಯಾಗಿದೆ.
ಕೊರೊನಾದಿಂದ ದೊಡ್ಡಮಟ್ಟದಲ್ಲಿ ಜನರು ಸಾವಿಗೀಡಾಗುತ್ತಿರುವ ನಡುವೆಯೇ ಜನರು ಲಸಿಕೆಗಾಗಿ ಆಸ್ಪತ್ರೆಯ ಬಳಿಗೆ ಹೋದರೂ ಲಸಿಕೆ ಕೂಡ ಸಿಗುತ್ತಿಲ್ಲ. ಇವರು ಯಾವ ರೀತಿಯ ಕೊರೊನಾ ನಿಯಂತ್ರಣ ಮಾಡುತ್ತಿದ್ದಾರೆ. ಲಸಿಕೆ ಇಲ್ಲದ ಕಾರಣ ಬೇರೆ ಕಾರಣಗಳನ್ನು ನೀಡುತ್ತಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.