“ಕೋವಿಡ್ ನಿಯಮಗಳನ್ನು ಪಾಲಿಸಿ ಬೀಡಿ ಕಾರ್ಮಿಕರಿಗೆ ಕೆಲಸ ನೀಡಿ”
![beedi workers](https://www.mahanayaka.in/wp-content/uploads/2021/05/beedi-1.jpg)
ಕರ್ನಾಟಕ ರಾಜ್ಯದಲ್ಲಿ ಸುಮಾರು ಮೂರು ಲಕ್ಷಕ್ಕೂ ಹೆಚ್ಚು ಬೀಡಿ ಕಾರ್ಮಿಕರಿದ್ದಾರೆ. ಕೊರೊನಾ ಒಂದನೇ ಅಲೆಯ ಸಂದರ್ಭದಲ್ಲಿ ಸರ್ಕಾರದ ಅವೈಜ್ಞಾನಿಕ ಲಾಕ್ ಡೌನ್ ನಿಂದಾಗಿ ಬೀಡಿ ಕಾರ್ಮಿಕರು ತಿಂಗಳುಗಟ್ಟಲೆ ಕೆಲಸವಿಲ್ಲದೆ ಉಪವಾಸ ಬೀಳುವಂತಾಗಿದೆ. ಇದೀಗ ಸ್ವಲ್ಪ ಚೇತರಿಕೆಯಾಗುವ ಸಂದರ್ಭದಲ್ಲಿ ಎರಡನೇ ಅಲೆಯು ಅವರನ್ನು ಅಪ್ಪಳಿಸಿ ಗಾಯದ ಮೇಲೆ ಬರೆ ಎಳೆದಂತಾಗಿದೆ.
ದ.ಕ ಮತ್ತು ಉಡುಪಿ ಜಿಲ್ಲೆಯ ಲಕ್ಷಾಂತರ ಬಡ ಕಾರ್ಮಿಕರು ಬೀಡಿ ಕೈಗಾರಿಕೆಯನ್ನೇ ನಂಬಿ ತಮ್ಮ ಜೀವನವನ್ನು ನಡೆಸುತ್ತಿದ್ದಾರೆ. ಬೀಡಿ ಕೈಗಾರಿಕೆ ಇಲ್ಲಿಯ ಜನರ ಜೀವನಾಡಿ ಎಂದು ಹೇಳಿದರೆ ತಪ್ಪಾಗಲಾರದು. ಇಲ್ಲಿಯ ಜನ ಆರ್ಥಿಕವಾಗಿ, ಶೈಕ್ಷಣಿಕವಾಗಿ ಮುಂದೆ ಬರಲು ಬೀಡಿ ಕೈಗಾರಿಕೆಯ ಕೊಡುಗೆ ಅಪಾರವಾದುದು. ನಮ್ಮ ಸರ್ಕಾರಗಳಿಗೆ ತೆರಿಗೆ ರೂಪದಲ್ಲಿ ಸಾವಿರಾರು ಕೋಟಿ ರೂಪಾಯಿ ಬೀಡಿ ಮಾಲಿಕರು ಸಂದಾಯ ಮಾಡುತ್ತಿದ್ದಾರೆ. ಈ ಕೈಗಾರಿಕೆಯ ಶೇಕಡಾ ತೊಂಬತ್ತು ಮಂದಿ ಮಹಿಳೆಯರು. ಇವರ ಒಂದು ದಿನದ ಸಂಪಾದನೆ ಸಾವಿರ ಬೀಡಿ ಕಟ್ಟಿದರೆ 215.22. ಇಷ್ಟು ಸಂಪಾದನೆ ಮಾಡಬೇಕಾದರೆ ಹನ್ನೆರಡು ಗಂಟೆ ದುಡಿಯಬೇಕು. ಬಂದ ಹಣದಿಂದ ಅವರ ಕುಟುಂಬವನ್ನು ಸಾಕಬೇಕಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಬೀಡಿ ಕೆಲಸವನ್ನೇ ನಂಬಿ ಬದುಕುವ ಸಾವಿರಾರು ಕುಟುಂಬಗಳಿವೆ. ಕೊರೊನಾ ಎರಡನೇ ಅಲೆಯು ಬೀಡಿ ಕಾರ್ಮಿಕರ ಬದುಕನ್ನೇ ನಾಶ ಮಾಡಿದೆ. ಈ ಸಂದರ್ಭದಲ್ಲಿ ಅವರ ರಕ್ಷಣೆಗೆ ನಮ್ಮ ಸರ್ಕಾರಗಳು, ಜನಪ್ರತಿನಿಧಿಗಳು ಗಂಭೀರ ಚಿಂತನೆಯನ್ನು ಮಾಡಬೇಕಾಗಿದೆ. ಬೀಡಿ ಕಾರ್ಮಿಕರ ಕ್ಷೇಮ ನಿಧಿಯಲ್ಲಿ ಸಾವಿರಾರು ಕೋಟಿ ಹಣವಿದ್ದರೂ ಪ್ರತೀ ಕಾರ್ಮಿಕರಿಗೆ ಕನಿಷ್ಠ ಆರು ಸಾವಿರ ರೂಪಾಯಿಯನ್ನಾದರೂ ಕೊಡಿ ಎಂದು ಕೇಂದ್ರ ಸರಕಾರವನ್ನು ಕೇಳಿದರೆ ಯಾವುದೇ ಉತ್ತರವಿಲ್ಲ. ರಾಜ್ಯ ಮತ್ತು ಕೇಂದ್ರ ಸರ್ಕಾರದ ಕೋವಿಡ್ ಪರಿಹಾರದ ಪ್ಯಾಕೇಜ್‍ನಲ್ಲಿ ಬೀಡಿ ಕಾರ್ಮಿಕರಿಗೆ ಯಾವುದೇ ಸೌಲಭ್ಯವಿಲ್ಲ. ಶ್ರೀಮಂತ ವರ್ಗಕ್ಕೆ ಮಾತ್ರ ಸರ್ಕಾರ ರಿಯಾಯಿತಿಯನ್ನು ಘೋಷಿಸಿದೆ. ಸಿಐಟಿಯು ಸಂಘಟನೆಗಳ ನೇತೃತ್ವದಲ್ಲಿ ಹಲವಾರು ಹೋರಾಟಗಳನ್ನು ನಡೆಸಿ ಸರ್ಕಾರದ ಗಮನಕ್ಕೆ ತಂದರೂ ಪ್ರಯೋಜನವಿಲ್ಲ. ಕೇರಳ ಸರ್ಕಾರವು ಪ್ರತೀ ಕಾರ್ಮಿಕರಿಗೆ ಮೂರು ಸಾವಿರ ರೂಪಾಯಿಯಂತೆ ಪರಿಹಾರ ಧನವನ್ನು ನೀಡಿರುವುದು ಸ್ವಾಗತಾರ್ಹವಾಗಿದೆ.
ಕೋವಿಡ್‍ನಂತಹ ಸಾಂಕ್ರಾಮಿಕ ರೋಗವನ್ನು ಎದುರಿಸಬೇಕಾದರೆ ಆಳುವ ಸರ್ಕಾರಗಳು ಜನರ ಕಷ್ಟಕ್ಕೆ ಸ್ಪಂದಿಸಬೇಕಾಗಿದೆ. ಇಲ್ಲವಾದರೆ ಕಾರ್ಮಿಕರು ಕುಟುಂಬ ಸಮೇತ ಬೀದಿಗೆ ಬರುವ ದಿನ ದೂರವಿಲ್ಲ. ಆದುದರಿಂದ ಸರ್ಕಾರ ಕೂಡಲೇ ಎಚ್ಚೆತ್ತು ಪ್ರತೀ ಬೀಡಿ ಕಾರ್ಮಿಕರಿಗೆ ಕನಿಷ್ಠ ಹತ್ತು ಸಾವಿರ ರೂಪಾಯಿಗಳಂತೆ ಆರ್ಥಿಕ ಸಹಾಯ ನೀಡಬೇಕು.
ಕೋವಿಡ್ ನಿಯಮವನ್ನು ಪಾಲಿಸಿ ಬೀಡಿ ಕಾರ್ಮಿಕರಿಗೆ ಕೂಡಲೇ ಕೆಲಸದ ವ್ಯವಸ್ಥೆ ಮಾಡಬೇಕು. ಎಲ್ಲಾ ಕಾರ್ಮಿಕರಿಗೆ ತಿಂಗಳಿಗೆ ಹತ್ತು ಕೆಜಿಯಂತೆ ಉಚಿತ ಆಹಾರ ಧಾನ್ಯ ನೀಡಬೇಕು. ಬೀಡಿ ಕಾರ್ಮಿಕರು ಕೋವಿಡ್‍ಗೆ ತುತ್ತಾದಲ್ಲಿ ಅವರಿಗೆ ಧರ್ಮಾತ ವೈದ್ಯಕೀಯ ಸೌಲಭ್ಯ ನೀಡಬೇಕು. ಬೀಡಿ ಕಾರ್ಮಿಕರ ಕ್ಷೇಮ ನಿಧಿಯಲ್ಲಿ ಇರುವ ಸಾವಿರಾರು ಕೋಟಿ ರೂಪಾಯಿಗಳನ್ನು ಅವರ ಕಲ್ಯಾಣಕ್ಕಾಗಿ ಉಪಯೋಗಿಸಬೇಕು.
-ಜೆ. ಬಾಲಕೃಷ್ಣ ಶೆಟ್ಟಿ, ಪ್ರಧಾನ ಕಾರ್ಯದರ್ಶಿ, ಸೌತ್ ಕೆನರಾ ಬೀಡಿ ವರ್ಕರ್ಸ್ ಫೆಡರೇಶನ್ ಸಿಐಟಿಯು