ಕೊವಿಡ್ ನಿಯಂತ್ರಣ ಸಭೆಯಲ್ಲಿ ನಿಯಂತ್ರಣ ಕಳೆದುಕೊಂಡ ಸದಸ್ಯರು! - Mahanayaka
7:17 PM Thursday 12 - December 2024

ಕೊವಿಡ್ ನಿಯಂತ್ರಣ ಸಭೆಯಲ್ಲಿ ನಿಯಂತ್ರಣ ಕಳೆದುಕೊಂಡ ಸದಸ್ಯರು!

bantwal purasabha
29/05/2021

ಬಂಟ್ವಾಳ: ಕೊವಿಡ್ ನಿಯಂತ್ರಣ ತುರ್ತು ಸಭೆಯಲ್ಲಿ ಸದಸ್ಯರೇ ನಿಯಂತ್ರಣ ತಪ್ಪಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪುರಸಭೆಯ ಸಭಾಂಗಣದಲ್ಲಿ ನಡೆದಿದೆ.

ಕೊವಿಡ್ ನಿಯಂತ್ರಣ ಹಿನ್ನೆಲೆಯಲ್ಲಿ ವಾರ್ ರೂಮ್ ನಿರ್ಮಿಸುವ ವಿಚಾರವಾಗಿ ಬಂಟ್ವಾಳ ಪುರಸಭಾ ಅಧ್ಯಕ್ಷ ಮಹಮ್ಮದ್ ಶರೀಫ್ ಅಧ್ಯಕ್ಷತೆಯಲ್ಲಿ ತುರ್ತು ಸಭೆ ಕರೆಯಲಾಗಿತ್ತು. ಪುರಸಭಾಧ್ಯಕ್ಷರು ವಿಷಯ ಪ್ರಸ್ತಾಪಿಸುತ್ತಿದ್ದಂತೆಯೇ ಮಧ್ಯಪ್ರವೇಶಿಸಿದ ಎಸ್ ಡಿಪಿಐ ಸದಸ್ಯ ಮುನೀಶ್ ಅಲಿ, ಪುರಸಭಾ ವ್ಯಾಪ್ತಿಯ ಯಾವುದೇ ಮಾಹಿತಿಗಳು ನಮಗೆ ದೊರಕುತ್ತಿಲ್ಲ ಎಂದು ಆರೋಪಿಸಿದರು.

ವಿಪಕ್ಷ ಸದಸ್ಯ ಗೋವಿಂದ ಪ್ರಭು ಮಾತನಾಡಿ, ಪುರಸಭೆಯಲ್ಲಿ ಯಾರಾದರೂ ಮೃತಪಟ್ಟರೆ, ಕೋವಿಡ್ ಸೋಂಕಿಗೆ ಒಳಗಾದರೆ ಏನು ಮಾಡಬೇಕು ಎಂಬುದರ ಕುರಿತು ಅಧಿಕಾರಿಗಳು ಸ್ಪಷ್ಟವಾಗಿ ತಿಳಿಸಬೇಕು. ಮೈಕ್ರೋ ಕಂಟೈನ್ಮೆಂಟ್ ವಲಯ ಎಂದು ಗುರುತಿಸುವಲ್ಲಿ ಇಬ್ಬಗೆ ನೀತಿ ಅನುಸರಿಸಲಾಗುತ್ತದೆ ಎಂಬ ಅನುಮಾನ ವ್ಯಕ್ತಪಡಿಸಿದರು. ಬಂಟ್ವಾಳ ಪುರಸಭೆ ವ್ಯಾಪ್ತಿಯಲ್ಲಿ ಗರಿಷ್ಠ ಪ್ರಕರಣಗಳು ಬರುತ್ತಿವೆ. ಯಾರೂ ಇದರ ಕುರಿತು ಗಮನಹರಿಸಿಲ್ಲ ಎಂದರು.

ಕೊರೊನಾ ಲಸಿಕೆ ವಿಚಾರವಾಗಿ ಚರ್ಚೆ ನಡೆಯುತ್ತಿದ್ದ ವೇಳೆ ಆಡಳಿತ ಪಕ್ಷದ ಸದಸ್ಯ ಸಿದ್ದೀಕ್ ಗುಡ್ಡಯಂಗಡಿ, “ಸರ್ಕಾರ ಸತ್ತಿದೆ” ಎಂಬ ಪದ ಪ್ರಯೋಗ ಮಾಡಿರುವುದು ಬಿಜೆಪಿ ಸದಸ್ಯರನ್ನು ಕೆರಳಿಸಿತ್ತು, ಬಿಜೆಪಿ ಸದಸ್ಯ ಹರಿಪ್ರಸಾದ್, ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದಾಗ ಸದಸ್ಯರ ನಡುವೆ ಆರೋಪ ಪ್ರತ್ಯಾರೋಪ ಬೆಳೆದು, ಅಸಂವಿಧಾನಿಕ ಪದಗಳು ಬಳಕೆಯಾದವು.

ಈ ವೇಳೆ ಈ ಇಬ್ಬರು ಸದಸ್ಯರ ನಡುವೆ ತೀವ್ರ ಜತಾಪಟಿ ನಡೆದಿದ್ದು, ಹೋಯ್ ಕೈ ನಡೆದ ಬಳಿಕ ಹೊರಗೆ ಬಾ ನಿನ್ನನ್ನು ನೋಡಿಕೊಳ್ಳುತ್ತೇನೆ ಎಂದು ಬೆದರಿಕೆ ಹಾಕುವ ಮಟ್ಟಕ್ಕೆ ಜಟಾಪಡಿ ನಡೆಯಿತು. ಈ ವೇಳೆ ಅಧ್ಯಕ್ಷರು, ತಹಶೀಲ್ದಾರ್, ಮುಖ್ಯಾಧಿಕಾರಿಗಳು ಸದಸ್ಯರನ್ನು ಸಮಾಧಾನ ಪಡಿಸಲು ಯತ್ನಿಸಿದರೂ ಸಾಧ್ಯವಾಗಲಿಲ್ಲ.

ಇದೇ ಸಂದರ್ಭದಲ್ಲಿ ಮಾತನಾಡಿದ ಆಡಳಿತ ಪಕ್ಷದ ಸದಸ್ಯ ಜನಾರ್ದನ ಚೆಂಡ್ತಿಮಾರ್, ಸಾವು ನೋವಿನ ಸಂದಿಗ್ದ ಪರಿಸ್ಥಿತಿಯಲ್ಲಿ ಈ ರೀತಿಯಾಗಿ ಪರಸ್ಪರ ಆರೋಪಗಳನ್ನು ಮಾಡಿಕೊಂಡು ಕಚ್ಚಾಡುವುದು ಸರಿಯಲ್ಲ ಎಂದು ಇಬ್ಬರು ಸದಸ್ಯರನ್ನೂ ಸಮಾಧಾನಪಡಿಸಿದರು.

ಇನ್ನೂ ತಹಶೀಲ್ದಾರ್ ರಶ್ಮಿ ಎಸ್.ಆರ್.ಮಾತನಾಡಿ, ಕೊರೊನಾ ಇನ್ನೂ ಕಡಿಮೆಯಾಗಿಲ್ಲ, ಮುಂದೇನು ಮಾಡಬೇಕು ಎನ್ನುವುದನ್ನು ಚರ್ಚಿಸಲು ನಾವಿಲ್ಲಿಗೆ ಬಂದಿದ್ದೇವೆ. ಅಧಿಕಾರಿಗಳಷ್ಟೇ ಜವಾಬ್ದಾರಿ ಜನಪ್ರತಿನಿಧಿಗಳಿಗೂ ಇದೆ ಎಂದು ನೆನಪಿಸಿದರು.

ಸಭೆಯಲ್ಲಿ ಸದಸ್ಯರಾದ ಎ.ಗೋವಿಂದ ಪ್ರಭು, ಮುನೀಶ್ ಆಲಿ, ಸಿದ್ದೀಕ್ ಗುಡ್ಡೆಯಂಗಡಿ, ಜೀನತ್ ಫಿರೋಜ್, ಹರಿಪ್ರಸಾದ್, ಗಂಗಾಧರ್ ಮೊದಲಾದವರು ವಿವಿಧ ವಿಚಾರಗಳ ಕುರಿತು ಚರ್ಚಿಸಿದರು. ಪುರಸಭೆ ಉಪಾಧ್ಯಕ್ಷೆ ಜೆಸಿಂತಾ ಡಿಸೋಜ, ನೋಡಲ್ ಅಧಿಕಾರಿ ಬಿಇಒ ಜ್ಞಾನೇಶ್, ಆರೋಗ್ಯ ನಿರೀಕ್ಷಕ ಜಯಶಂಕರ್ ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ