ಅತ್ಯಾಚಾರ ಯತ್ನಕ್ಕೊಳಗಾಗಿದ್ದ ಕೊವಿಡ್ ಸೋಂಕಿತೆ ಚಿಕಿತ್ಸೆ ಫಲಿಸದೇ ಸಾವು
ಕಲಬುರ್ಗಿ: ನಗರದ ಜಿಮ್ಸ್ ಆಸ್ಪತ್ರೆಯಲ್ಲಿ ಕಳೆದ ವಾರ ಅತ್ಯಾಚಾರ ಯತ್ನಕ್ಕೊಳಾಗಿದ್ದ ಕೊವಿಡ್ ಸೋಂಕಿತೆ ಬುಧವಾರ ಸಂಜೆ ಮೃತಪಟ್ಟಿದ್ದು, ಶ್ವಾಸಕೋಶದ ತೀವ್ರ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ಕಲಬುರಗಿ ನಗರದ ನಿವಾಸಿಯಾಗಿದ್ದ ಮಹಿಳೆ ಕೋವಿಡ್ ಸೋಂಕಿನ ಕಾರಣ ಜೂನ್ 6ರಂದು ಜಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಆಸ್ಪತ್ರೆಗೆ ದಾಖಲಾದ ಮರುದಿನವೇ ರಾತ್ರಿ 12 ಗಂಟೆಗೆ ಖಾಸಗಿ ಆಂಬುಲೆನ್ಸ್ ಚಾಲಕ ಪಿಂಟು ಎಂಬಾತ ಅತ್ಯಾಚಾರಕ್ಕೆ ಯತ್ನಿಸಿದ್ದು, ಈ ವೇಳೆ ಎಚ್ಚರಗೊಂಡಿದ್ದ ಅವರು ಕಿರುಚಿದ್ದರು. ಈ ವೇಳೆ ಆತ ಪರಾರಿಯಾಗಿದ್ದು, ಆರೋಪಿಯನ್ನು ಬಳಿಕ ಬ್ರಹ್ಮಪುರ ಪೊಲೀಸರು ಬಂಧಿಸಿದ್ದರು.
ಕೋವಿಡ್ ಸೋಂಕಿನ ಕಾರಣ ಮಹಿಳೆಯ ಶಾಸಕೋಶಗಳು ಸಾಕಷ್ಟು ಹಾನಿಯಾಗಿದ್ದವು. ಹೀಗಾಗಿ ವೆಂಟಿಲೇಟರ್ ನಲ್ಲಿದ್ದರು. ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದಿದ್ದಾರೆ. ಅತ್ಯಾಚಾರ ಯತ್ನ ಆರೋಪ ಪ್ರಕರಣ ಇದ್ದರಿಂದ ಅಗತ್ಯ ವೈದ್ಯಕೀಯ ಪರೀಕ್ಷೆಗಳು ಮತ್ತು ಕೋವಿಡ್ ನಿಯಮಾವಳಿ ಪ್ರಕಾರ ಮರಣೋತ್ತರ ಪರೀಕ್ಷೆ ಕೂಡ ಮಾಡಲಾಗುವುದು ಆಸ್ಪತ್ರೆ ತಿಳಿಸಿದೆ ಎಂದು ವರದಿಯಾಗಿದೆ.