ಕೊವಿಡ್ ಸೋಂಕಿತ ಮಹಿಳೆಯ ಮೇಲೆ ಮಧ್ಯ ರಾತ್ರಿ ಅತ್ಯಾಚಾರಕ್ಕೆ ಯತ್ನ | ಆಂಬುಲೆನ್ಸ್ ಚಾಲಕ ಅರೆಸ್ಟ್
09/06/2021
ಕಲಬುರ್ಗಿ: ಕೊವಿಡ್ ಸೋಂಕಿತ ಮಹಿಳಾ ರೋಗಿಯ ಮೇಲೆ ಆಂಬುಲೆನ್ಸ್ ಚಾಲಕ ಅತ್ಯಾಚಾರಕ್ಕೆ ಯತ್ನಿಸಿರುವ ಘಟನೆ ನಗರದ ಜಿಮ್ಸ್ ಆಸ್ಪತ್ರೆಯಲ್ಲಿ ನಡೆದಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಜಿಮ್ಸ್ ಆಸ್ಪತ್ರೆಯಲ್ಲಿರುವ ಜಯದೇವ ಹೃದ್ರೋಗ ವಿಭಾಗದ ವಾರ್ಡ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 25 ವರ್ಷ ವಯಸ್ಸಿನ ಮಹಿಳೆಯ ಮೇಲೆ ಆಂಬುಲೆನ್ಸ್ ಚಾಲಕ ಪಿಂಟು ಎಂಬಾತ ಮಧ್ಯರಾತ್ರಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ ಎಂದು ವರದಿಯಾಗಿದೆ.
ಮಂಗಳವಾರ ರಾತ್ರಿ 12 ಗಂಟೆ ಸುಮಾರಿಗೆ ಮಹಿಳೆ ಮಲಗಿದ್ದ ವೇಳೆ ಮಹಿಳೆಗೆ ಅಳವಡಿಸಲಾಗಿದ್ದ ವೈದ್ಯಕೀಯ ಸಲಕರಣೆಗಳನ್ನು ತೆಗೆದು ಅತ್ಯಾಚಾರಕ್ಕೆ ಮುಂದಾಗಿದ್ದಾನೆ. ಇದರಿಂದ ಎಚ್ಚರಗೊಂಡ ಮಹಿಳೆ ಕಿರುಚಿದ್ದು, ಈ ವೇಳೆ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ.
ಮಹಿಳೆ ಕಿರುಚಿದ್ದರಿಂದ ವಾರ್ಡ್ ನಲ್ಲಿದ್ದ ಇತರ ರೋಗಿಗಳು ಎಚ್ಚರಗೊಂಡಿದ್ದಾರೆ. ತಕ್ಷಣವೇ ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಪೊಲೀಸರು ಮಾಹಿತಿ ಪಡೆದುಕೊಂಡು ಆರೋಪಿಯನ್ನು ಪತ್ತೆ ಹಚ್ಚಿ ವಶಕ್ಕೆ ಪಡೆದಿದ್ದಾರೆ.