ಗುಡ್ಡ ಕುಸಿಯುತ್ತಿದ್ದಂತೆಯೇ ಮನೆಯವರನ್ನು ಎಚ್ಚರಿಸಿ ಪ್ರಾಣ ಉಳಿಸಿದ ಹಸು!
ಚಾಮರಾಜನಗರ: ವಯನಾಡ್(Wayanad) ನಲ್ಲಿ ನಡೆದ ಭೂಕುಸಿತದಲ್ಲಿ ಮೃತಪಟ್ಟವರ ಸಂಖ್ಯೆ ಕ್ಷಣ ಕ್ಷಣಕ್ಕೂ ಏರಿಕೆಯಾಗುತ್ತಿದೆ. ಈ ನಡುವೆ ಮೃತಪಟ್ಟವರ ಕಥೆ ಹೇಳಲು ಅವರಿರ್ಯಾರೂ ಜೀವಂತವಿಲ್ಲ. ಆದರೆ ಈ ಮಹಾ ದುರಂತದಿಂದ ಸ್ವಲ್ಪದರಲ್ಲೇ ಪಾರಾದವರದ್ದು ಒಬ್ಬೊಬ್ಬರದ್ದು ಒಂದೊಂದು ರೀತಿಯ ಸಂಕಷ್ಟದ ಕಥೆಯಾಗಿದೆ. ಇಲ್ಲೊಂದು ಕುಟುಂಬವನ್ನು ಹಸುವೊಂದು ಅಪಾಯದಿಂದ ಪಾರು ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ಚಾಮರಾಜನಗರದ ಉಪ್ಪಾರ ಬೀದಿಯ ಕೃಷ್ಣ ಲಕ್ಷ್ಮಮ್ಮ ದಂಪತಿ ಹಾಗು ಮಗಳು ಪ್ರವಿದಾ ಮೇಪ್ಪಾಡಿಯಲ್ಲಿ ಸೆಟ್ಲ್ ಆಗಿದ್ದರು. ಮೇಪ್ಪಾಡಿಯಿಂದ 4 ಕಿ.ಮೀ.ದೂರದ ಚೂರಲ್’ಮಲಾದ ವಿನೋದ್ ನನ್ನು ಪ್ರವೀದಾ ಮದುವೆಯಾಗಿದ್ದರು. ಆದರೆ ಕೆಲವೇ ದಿನಗಳ ಹಿಂದೆ ಪವೀದಾ ಹೆರಿಗೆಗೆಂದು ಮೇಪಾಡಿಯಲ್ಲಿರುವ ತಾಯಿ ಮನೆಗೆ ಬಂದಿದ್ದರು. ಹೀಗಾಗಿ ಪತಿ ವಿನೋದ್ ಹಾಗೂ ಕುಟುಂಬಸ್ಥರು ಚೂರಲ್’ಮಲಾದಲ್ಲೇ ಇದ್ದರು.
ಈ ದುರಂತ ಸಂಭವಿಸಿದ ದಿನ ಮಧ್ಯರಾತ್ರಿ ವೇಳೆ ವಿನೋದ್ ಅವರ ಮನೆಯ ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ ಹಸು ಜೋರಾಗಿ ಕಿರುಚಿಕೊಳ್ಳಲು ಆರಂಭಿಸಿತ್ತು. ಹಸುವಿನ ಅರಚಾಟ ಕೇಳಿ ವಿನೋದ್ ಕೊಟ್ಟಿಗೆಗೆ ತೆರಳಿ ನೋಡಿದ ವೇಳೆ ಕೊಟ್ಟಿಗೆಯಲ್ಲಿ ನೀರು ವೇಗವಾಗಿ ಬಂದು ಸೇರಿಕೊಳ್ಳುತ್ತಿರುವ ದೃಶ್ಯ ಕಂಡು ಬಂದಿದೆ.
ಅಪಾಯದ ಮುನ್ಸೂಚನೆ ಸಿಕ್ಕಿದ ಕೂಡಲೇ ವಿನೋದ್ ತನ್ನ ಕುಟುಂಬಸ್ಥರನ್ನು ಮನೆಯಿಂದ ಹೊರ ಕರೆದೊಯ್ದು ಸುರಕ್ಷಿತ ಸ್ಥಳಕ್ಕೆ ತೆರಳಿದ್ದಾರೆ. ಇದರಿಂದಾಗಿ ಇಡೀ ಕುಟುಂಬಸ್ಥರ ಪ್ರಾಣ ಉಳಿದಿದೆ. ದುರಾದೃಷ್ಟವೆಂದರೆ, ಮನೆಯವರನ್ನು ಎಚ್ಚರಿಸಿ ಪ್ರಾಣ ಕಾಪಾಡಿದ ಹಸುವನ್ನು ರಕ್ಷಿಸಲು ಸಾಧ್ಯವಾಗಲಿಲ್ಲ.
ಸಂಭವಿಸಬಹುದಾಗಿದ್ದ ಭಾರೀ ಅನಾಹುತದಿಂದ ವಿನೋದ್ ಹಾಗೂ ಕುಟುಂಬಸ್ಥರು ಪಾರಾಗಿದ್ದಾರೆ. ಆದರೆ ಅವರು ಇನ್ನೂ ಗುಡ್ಡದಲ್ಲೇ ಇದ್ದಾರೆ. ಅವರನ್ನು ರಕ್ಷಿಸಿ ಕರೆತರಬೇಕು ಎಂದು ಪ್ರವೀದಾ ಮನವಿ ಮಾಡಿಕೊಂಡಿದ್ದಾರೆ. ಪತಿ ಫೋನ್ ಮೂಲಕ ತನ್ನೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಅವರು ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: