ಸಿಲಿಂಡರ್ ಸ್ಫೋಟ, ಮನೆ ಸಂಪೂರ್ಣ ನೆಲಸಮ
ಕೊಟ್ಟಿಗೆಹಾರ: ಮನೆಯಲ್ಲಿದ್ದ ಸಿಲಿಂಡರ್ ಸ್ಫೋಟದಿಂದ ಮನೆ ಸಂಪೂರ್ಣ ನೆಲಸಮವಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಗಬ್ಗಲ್ ಸಮೀಪದ ಕಂಬಳಿಹಾರ ಗ್ರಾಮದಲ್ಲಿ ನಡೆದಿದೆ.
ಮನೆ ಮಾಲೀಕ ಬಸಯ್ಯ ಹಿರೇಮಠ್ ಕೂಲಿಗೆ ಹೋಗಿದ್ರಿಂದ ಭಾರೀ ಅನಾಹುತವೊಂದು ತಪ್ಪಿದಂತಾಗಿದೆ. ಸಿಲಿಂಡರ್ ಸಿಡಿದು ಸ್ಫೋಟಗೊಂಡ ರಭಸಕ್ಕೆ ಗುಡಿಸಲಿನಲ್ಲಿದ್ದ ವಸ್ತುಗಳು ಶೇ.100ಕ್ಕೆ 100ರಷ್ಟು ಸಟ್ಟು ಕರಕಲಾಗಿ ಇಡೀ ಗುಡಿಸಲಿದ್ದ ಜಾಗವೇ ಬೂದಿಮಯವಾಗಿದೆ.
ಬಸಯ್ಯ ಹಿರೇಮಠ್ ಗೆ ಹೆಂಡತಿ–ಮಕ್ಕಳು ಯಾರೂ ಇಲ್ಲ. ಏಕಾಂಗಿಯಾಗಿ ಬದುಕುತ್ತಿರುವ ಹಿರೇಮಠ್ ಕೂಲಿ ಮಾಡಿಕೊಂಡು ಗುಡಿಸಲಿನಲ್ಲಿ ವಾಸ ಮಾಡುತ್ತಿದ್ದರು. ಇಂದು ಸ್ವತಃ ತಾನೇ ಅಡುಗೆ ಮಾಡಿ ಬೆಳಗ್ಗೆ ಊಟ ಮಾಡಿ ಮಧ್ಯಾಹ್ನದ ಊಟಕ್ಕೂ ಬಾಕ್ಸ್ ತೆಗೆದುಕೊಂಡು ಹೋಗಿದ್ದರು. ಆದರೆ, ಮಧ್ಯಾಹ್ನದ ವೇಳೆಗೆ ಸಿಲಿಂಡರ್ ಸಿಡಿದು ಇಡೀ ಗುಡಿಸಲೇ ಸರ್ವನಾಶವಾಗಿದೆ.
ಒಂದು ವೇಳೆ ಸಿಲಿಂಡರ್ ಸ್ಫೋಟಗೊಳ್ಳುವ ವೇಳೆ ಗುಡಿಸಲು ಹಾಗೂ ಅಕ್ಕಪಕ್ಕ ಯಾರಾದರೂ ಇದ್ದಿದ್ದರೆ ಜೀವಹಾನಿಯೇ ಸಂಭವಿಸುತ್ತಿತ್ತು. ಆದರೆ, ಮಧ್ಯಾಹ್ನದ ವೇಳೆ ಆಗಿದ್ದರಿಂದ ಭಾರೀ ಅನಾಹುತವೊಂದು ಕೂದಲೆಳೆ ಅಂತರದಲ್ಲಿ ಪಾರಾದಂತಾಗಿದೆ. ವಿಷಯ ತಿಳಿದು ಕೂಲಿಯಿಂದ ವಾಪಸ್ ಬಂದ ಬಸ್ಸಯ್ಯ ಹಿರೇಮಠ್ ಮನೆ ಸ್ಥಿತಿ ಕಂಡು ಕಣ್ಣೀರಿಟ್ಟಿದ್ದಾರೆ.
ಇದ್ದೊಂದು ಗುಡಿಸಲು ಬೆಂಕಿಗಾಹುತಿಯಾಗಿದ್ದರಿಂದ ಅವರಿಗೆ ಮಲಗೋಕು ಜಾಗ ಇಲ್ಲದಂತಾಗಿದೆ. ಬಾಳೂರು ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಬಾಳೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: