ದಲಿತ ಬಾಲಕಿಯ ಅತ್ಯಾಚಾರದ ವಿರುದ್ಧ ದ.ಕ. ಜಿಲ್ಲಾ ದಲಿತ್ ಸೇವಾ ಸಮಿತಿ ಪ್ರತಿಭಟನೆ: ಮಾಧ್ಯಮಗಳೇ ನಾಪತ್ತೆ, ಸಂಘಟಕರಿಂದ ಬೇಸರ
- ರಾಜೇಶ್ ನೆತ್ತೋಡಿ, ದಕ್ಷಿಣ ಕನ್ನಡ
ದಕ್ಷಿಣ ಕನ್ನಡ/ ವಿಟ್ಲ: ಇತ್ತೀಚೆಗೆ ಬಂಟ್ವಾಳ ತಾಲೂಕಿನ ಪೆರುವಾಯಿ ಗ್ರಾಮದ ದಲಿತ ಬಾಲಕಿಯ ಅತ್ಯಾಚಾರವನ್ನು ಖಂಡಿಸಿ ಮತ್ತು ಅತ್ಯಾಚಾರ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ದ.ಕ. ಜಿಲ್ಲಾ ದಲಿತ್ ಸೇವಾ ಸಮಿತಿ ( ರಿ ) ವಿಟ್ಲ ವತಿಯಿಂದ ಇಂದು ಪ್ರತಿಭಟನೆ ನಡೆಯಿತು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಬಹುಜನ ಸಮಾಜ ಪಕ್ಷ ದಕ್ಷಿಣ ಕನ್ನಡದ ಮಾಜಿ ಜಿಲ್ಲಾಧ್ಯಕ್ಷರಾದ ಗೋಪಾಲ್ ಮುತ್ತೂರು, ದಲಿತ ಬಾಲಕಿಯ ಮೇಲೆ ನಡೆದ ಅತ್ಯಾಚಾರವನ್ನು ಖಂಡಿಸಿ ಯಾವುದೇ ಹಿಂದೂ ಸಂಘಟನೆಗಳು ಪ್ರತಿಭಟನೆ ನಡೆಸ್ತಾ ಇಲ್ಲ, ಆರೋಪಿಗಳು ಮುಸ್ಲಿಮರಾಗಿದ್ದರೆ, ಬೆಂಕಿ ಹಚ್ತಾ ಇದ್ರು…ಇಂದು ನಡೆದಿರುವ ಸಾಂಕೇತಿಕ ಹೋರಾಟ ಮುಂದೆ ದೊಡ್ಡ ಮಟ್ಟದ ಹೋರಾಟವಾಗಿ ರೂಪುಗೊಳ್ಳಬೇಕು. ಬಹುಜನ ಸಮಾಜ ಪಾರ್ಟಿ ಈ ಹೋರಾಟಕ್ಕೆ ಬೆಂಬಲ ನೀಡುತ್ತದೆ ಎಂದು ಅವರು ತಿಳಿಸಿದರು.
ದಕ್ಷಿಣ ಕನ್ನಡ ಜಿಲ್ಲೆ ಭೀಮ್ ಸೇನೆ ಮುಖಂಡ ನಿತಿನ್ ಮುತ್ತೂರು ಮಾತನಾಡಿ, ಉಡುಪಿಯ ಪ್ರಕರಣದ ಬಗ್ಗೆ ಎಲ್ಲ ಶಾಸಕರು, ಎಂಪಿಗಳು ಎಲ್ಲಾ ರೀತಿಯ ಸಂಘಟನೆಗಳು ಧ್ವನಿ ಎತ್ತಿದವು. ಆ ಸಂಘಟನೆಗಳು ದಲಿತ ಬಾಲಕಿಯ ಮೇಲೆ ಅತ್ಯಾಚಾರ ನಡೆದ ಘಟನೆಯ ಸಂದರ್ಭದಲ್ಲಿ ಎಲ್ಲಿ ಹೋಗಿವೆ ಎಂದು ಪ್ರಶ್ನಿಸಿದರು.
ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಕೊಟ್ಟಿರುವ ಭಿಕ್ಷೆಯಿಂದ ಸುಳ್ಯ ವಿಧಾನ ಸಭಾ ಕ್ಷೇತ್ರದಲ್ಲಿ ಗೆದ್ದಿರುವಂತಹ ದಲಿತ ಸಮುದಾಯದ ಶಾಸಕಿಯಾದ ಭಗೀರಥಿ ಮುರುಳ್ಯರವರೇ, ಉಡುಪಿಯ ಘಟನೆಯನ್ನು ಖಂಡಿಸಿ ಪ್ರತಿಭಟನೆ ಮಾಡಿದ್ರಲ್ಲವೇ? ನಿಮಗೆ ಸಮೀಪದ ವಿಟ್ಲ ಕಾಣಿಸಲಿಲ್ಲವೇ? ಎಂದು ಪ್ರಶ್ನಿಸಿದ್ರು…
ಬಂಟ್ವಾಳ ತಾಲೂಕು ಭಾರತರತ್ನ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಸಮಾಜ ಸೇವಾ ಸಂಘದ ಅಧ್ಯಕ್ಷರಾದ ಸತೀಶ್ ಅರಳ ಮಾತನಾಡಿ, ದಲಿತರ ಮೇಲಿನ ದೌರ್ಜನ್ಯ ತಡೆಗಟ್ಟಲು ಬೇಕಾದಷ್ಟು ಕಾನೂನುಗಳಿದ್ದರೂ ಸಹ ದಲಿತರ ಮೇಲಿನ ಅತ್ಯಾಚಾರ, ದೌರ್ಜನ್ಯಗಳು ಹೆಚ್ಚಳವಾಗುತ್ತಿದೆ. ಆರೋಪಿಗಳು ಮುಸ್ಲಿಮರಾದರೆ, ನಮಗೆ ಕೆಲವು ಹಿಂದೂ ಸಂಘಟನೆಗಳ ಮುಖಂಡರು ಕರೆ ಮಾಡಿ, ನೀವ್ಯಾಕೆ ಈ ಪ್ರಕರಣದ ಬಗ್ಗೆ ಧ್ವನಿಯೆತ್ತುವುದಿಲ್ಲ ಎಂದು ಕೇಳುತ್ತಾರೆ, ಆದರೆ ವಿಟ್ಲದ ಘಟನೆಯ ಬಗ್ಗೆ ಯಾವುದೇ ಮುಖಂಡರು ಕರೆ ಮಾಡಿ ವಿಚಾರಿಸಿಲ್ಲ ಎಂದರು.
ದಲಿತರು ತಮ್ಮ ಸಮುದಾಯಕ್ಕೆ ಆಗಿರುವ ಅನ್ಯಾಯದ ಬಗ್ಗೆ ಪ್ರಶ್ನಿಸಬೇಕಾದರೆ, ಕೇವಲ ದಲಿತರು ಮಾತ್ರವೇ ಪ್ರತಿಭಟನೆಗೆ ಸೇರುತ್ತಾರೆ. ಬೇರೆ ಯಾವುದೇ ಸಮುದಾಯದವರು ಸೇರುವುದಿಲ್ಲ. ಆದ್ರೆ… ನಮ್ಮನ್ನು ಯಾರೇ ಶೆಟ್ರುಗಳು, ಭಟ್ರುಗಳು ಕರೆದ್ರೂ ಪ್ರತಿಭಟನೆಗೆ ಹೋಗ್ತೇವೆ…ನಾವು ಎಲ್ಲರನ್ನೂ ಸಮಾನ ದೃಷ್ಟಿಯಿಂದ ನೋಡ್ತೇವೆ. ನಾವು ನಮ್ಮ ಸಮುದಾಯದ ಪರವಾಗಿ ಹೋರಾಟ ಮಾಡಿದಾಗ ನೀವು ಯಾಕೆ ಪ್ರತಿಭಟನೆ ಮಾಡ್ತೀರಿ ಎಂಬಂತಹ ಕರೆಗಳು ಬರುತ್ತವೆ ಎಂದು ಅವರು ಹೇಳಿದರು.
ಸ್ಟುಡೆಂಟ್ ಸೋಶಿಯಲ್ ಎಜುಕೇಶನ್ ಸೊಸೈಟಿ ದಕ್ಷಿಣ ಕನ್ನಡ ಜಿಲ್ಲೆ ಇದರ ಸ್ಥಾಪಕಾಧ್ಯಕ್ಷರಾದ ಶ್ರೀನಿವಾಸ್ ರವರು ಮಾತನಾಡಿ, ಅತ್ಯಾಚಾರದ ಬಗ್ಗೆ ಮಾತನಾಡಲು ಬೇಸರವಾಗ್ತಿದೆ. ದಲಿತರು ದುರ್ಬಲವಾಗಿರೋದ್ರಿಂದ ದಲಿತರ ಹೆಣ್ಣು ಮಕ್ಕಳ ಮೇಲೆ ಹೆಚ್ಚಿನ ಸಂಖ್ಯೆಯಲ್ಲಿ ಅತ್ಯಾಚಾರವಾಗುತ್ತಿದೆ. ನಮ್ಮ ಬಳಿ ಅಧಿಕಾರವಿಲ್ಲ, ಅಧಿಕಾರ ಇದ್ದವರು, ಯಾರೋ ಒಬ್ಬರ ಗುಲಾಮರಾಗಿ ಅವರ ಎಂಜಲು ನೆಕ್ಕಿಕೊಂಡು ಅಧಿಕಾರ ನಡೆಸ್ತಾ ಇದ್ದಾರೆ ಎಂದು ವಾಗ್ದಳಿ ನಡೆಸಿದರು.
ಬಾಬಾ ಸಾಹೇಬರ ಭಿಕ್ಷೆ ಪಡೆದ ಸ್ವಜಾತಿಯ ಶಾಸಕಿ ಭಗೀರಥಿ ಮುರುಳ್ಯ, ಅವರ ಖದರ್ ಏನು… ಓಡ್ಕೊಂಡು ಹೋಗ್ತಾರೆ ಉಡುಪಿಗೆ, ಆದ್ರೆ ಸ್ವಜಾತಿಯ ಬಂಧುಗಳಿಗೆ ಅನ್ಯಾಯವಾದಾಗ ಒಂದು ಸೌಜನ್ಯ ತೋರಿಸುವ ಮುಖ ಇಲ್ಲ, ಇಂತಹ ಕರಟು ಮುಖವನ್ನು ಯಾರಿಗೆ ತೋರಿಸ್ತೀರಿ ಎಂದು ಪ್ರಶ್ನಿಸಿದರು.
ಮಾಧ್ಯಮಗಳ ನಡೆಯ ಬಗ್ಗೆ ಬೇಸರ:
ದಲಿತ ಬಾಲಕಿಯ ಮೇಲಿನ ಅತ್ಯಾಚಾರದ ಬಗ್ಗೆ ಇಂದು ಪ್ರತಿಭಟನೆ ನಡೆಸಲಾಗುವುದು ಎಂದು ಮಾಹಿತಿ ನೀಡಿದ್ದರೂ ಯಾವುದೇ ಮಾಧ್ಯಮಗಳೂ ಆಗಮಿಸದ ಹಿನ್ನೆಲೆಯಲ್ಲಿ ದ.ಕ. ಜಿಲ್ಲಾ ದಲಿತ್ ಸೇವಾ ಸಮಿತಿಯ ಸ್ಥಾಪಕರಾದ ಸೇಸಪ್ಪ ಬೆದ್ರಕಾಡು ಅವರು ಬೇಸರ ವ್ಯಕ್ತಪಡಿಸಿದರು.
ಇಂದು ಪ್ರತಿಭಟನೆ ಇದೆ ಎಂದು ಮಾಧ್ಯಮಗಳಿಗೆ ಆಹ್ವಾನ ನೀಡಿದ್ದೆವು. ಆದ್ರೆ, ಒಡಿಯೂರು ಸ್ವಾಮೀಜಿಯ ಕಾರ್ಯಕ್ರಮ ಇರುವ ಕಾರಣ ಬರಲು ಸಾಧ್ಯವಾಗುವುದಿಲ್ಲ ಎಂದು ಮಾಧ್ಯಮದವರು ತಿಳಿಸಿದ್ದಾರೆ. ದಲಿತ ಬಾಲಕಿಯ ಅತ್ಯಾಚಾರದಂತಹ ಘಟನೆಯ ವಿರುದ್ಧದ ಪ್ರತಿಭಟನೆ ಮಾಧ್ಯಮಗಳಿಗೆ ಮುಖ್ಯವಾಗಬೇಕಿತ್ತು. ಮಹಾನಾಯಕ ಮಾಧ್ಯಮ ಹೊರತುಪಡಿಸಿದರೆ ಬೇರಾವುದೇ ಮಾಧ್ಯಮಗಳು ಬಂದಿಲ್ಲ ಎಂದ ಅವರು ಮಹಾನಾಯಕ ಮಾಧ್ಯಮಕ್ಕೆ ಧನ್ಯವಾದಗಳನ್ನು ಸಲ್ಲಿಸಿದರು.
ಮರಾಠಿ ಸಮಾಜ ಸೇವಾ ಸಂಘ ಬಂಟ್ವಾಳ ಇದರ ಸಂಚಾಲಕರಾದ ಕೇಶವ ನಾಯ್ಕ, ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ ಕೆದಿಲ(ರಿ) ಅಧ್ಯಕ್ಷರಾದ ಮಾರಪ್ಪ ಸುವರ್ಣ, ಕಾರ್ಮಿಕ ಸಂಘಟನೆಯ ಮುಖಂಡರಾದ ರಾಮಣ್ಣ ವಿಟ್ಲ, ಪುತ್ತೂರು ಬ್ಲಾಕ್ ಕಾಂಗ್ರೆಸ್ ಎಸ್ ಟಿ ಘಟಕದ ಮುಖಂಡರಾದ ಮಹಾಲಿಂಗ ನಾಯ್ಕ, ಪುತ್ತೂರು ಬ್ಲಾಕ್ ಕಾಂಗ್ರೆಸ್ ಎಸ್ ಸಿ ಘಟಕದ ಅಧ್ಯಕ್ಷರಾದ ರಾಮಣ್ಣ ಪಿಳಿಂಜ, ಎಂ.ಎಸ್. ಮಿಜಾರು, ಸಾಮಾಜಿಕ ಕಾರ್ಯಕರ್ತರಾದ ಕೊರಗಪ್ಪ ಈಶ್ವರಮಂಗಲ, ಬಿಜೆಪಿ ಎಸ್ ಟಿ ಮೋರ್ಚಾ ಬಂಟ್ವಾಳ ಇದರ ಅಧ್ಯಕ್ಷರಾದ ರಾಮಣ್ಣ ನಾಯ್ಕ, ಶೇರ್ವಾಯ್ ಗ್ರಾ.ಪಂ. ಸದಸ್ಯರಾದ ನಾರಾಯಣ ನಾಯ್ಕ, ದಲಿತ್ ಸೇವಾ ಸಮಿತಿಯ ಜಿಲ್ಲಾಧ್ಯಕ್ಷರಾದ ಸೋಮಪ್ಪ ನಾಯ್ಕ ಮಲ್ಯ, ಜಿಲ್ಲಾಧ್ಯಕ್ಷರಾದ ಪ್ರೇಮಾ, ಕಾರ್ಯಾಧ್ಯಕ್ಷರಾದ ಚಂದ್ರಶೇಖರ ಯು. ವಿಟ್ಲ, ಜಿಲ್ಲಾ ಸಂಚಾಲಕರಾದ ಗೋಪಾಲ ನೇರಳ ಕಟ್ಟೆ, ಜಿಲ್ಲಾ ಮಹಿಳಾ ಗೌರವಾಧ್ಯಕ್ಷರಾದ ಮೀನಾಕ್ಷೀ ನೆಲ್ಲಿಗುಡ್ಡೆ, ಜಿಲ್ಲಾ ಉಪಾಧ್ಯಕ್ಷರಾದ ಯಾಮಿನಿ ಬೆಟ್ಟಂಪಾಡಿ, ಜಗದೀಶ್ ಮಂಜನಾಡಿ, ಪ್ರಸಾದ್ ಬೊಲ್ಮಾರ್, ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾದ ಧನಂಜಯ್ ನಾಯ್ಕ ಬಲ್ನಾಡು, ಪುತ್ತೂರು ಮಹಿಳಾ ಘಟಕದ ಅಧ್ಯಕ್ಷೆ ಲಲಿತಾ ಕಾರ್ಪಾಡಿ, ಮಾಜಿ ಅಧ್ಯಕ್ಷೆಯಾದ ಸುನಂದಾ, ಬಂಟ್ವಾಳ ತಾಲೂಕು ಅಧ್ಯಕ್ಷೆಯಾದ ವಸಂತ ಕುಕ್ಕೆ ಬೆಟ್ಟು, ಉಳ್ಳಾಲ ತಾಲೂಕು ಶಾಕೆ ಅಧ್ಯಕ್ಷರಾದ ನಾಗೇಶ್ ಮುಡಿಪು ಉಪಸ್ಥಿತರಿದ್ದರು.
ವಿಡಿಯೋ ನೋಡಿ:
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw