ಆಟವಾಡುತ್ತಾ ಡಬ್ಬದೊಳಗೆ ಇಳಿದ ಐದು ಮಕ್ಕಳು ಉಸಿರುಗಟ್ಟಿ ಸಾವು!
ಬಿಕಾನೆರ್: ಆಟವಾಡುತ್ತಿದ್ದ ಐದು ಮಕ್ಕಳು ಧಾನ್ಯ ತುಂಬಿಸಿ ಸಂಗ್ರಹಿಸಿಡುವ ಡಬ್ಬದೊಳಗೆ ಇಳಿದಿದ್ದು, ಈ ವೇಳೆ ಡಬ್ಬ ಆಕಸ್ಮಿಕವಾಗಿ ಲಾಕ್ ಆಗಿದ್ದು, ಪರಿಣಾಮವಾಗಿ ಉಸಿರುಗಟ್ಟಿ ಎಲ್ಲ ಮಕ್ಕಳು ಸಾವಿಗೀಡಾಗಿದ್ದಾರೆ.
ರಾಜಸ್ಥಾನದ ಬಿಕನೇರ್ ಎಂಬಲ್ಲಿ ಈ ಘಟನೆ ನಡೆದಿದೆ. ಮಾಲಿ, ಪೂನಮ್, ರವೀನಾ, ರಾಧಾ, ಸೇವರಾಂ ಎಂಬ ಮಕ್ಕಳು ಸಾವಿಗೀಡಾದವರಾಗಿದ್ದಾರೆ. ಸಾವಿಗೀಡಾದ ಮಕ್ಕಳು ನಾಲ್ಕರಿಂದ 5 ವರ್ಷದೊಳಗಿನವರಾಗಿದ್ದಾರೆ ಎಂದು ತಿಳಿದು ಬಂದಿದೆ.
ಧಾನ್ಯಗಳನ್ನು ತುಂಬಿಡಲು ಇಟ್ಟಿದ್ದ ಡಬ್ಬಗಳ ಬಳಿಯಲ್ಲಿ ಆಟವಾಡುತ್ತಿದ್ದ ಮಕ್ಕಳು, ಆಟವಾಡುತ್ತಾ, ಒಬ್ಬರ ಹಿಂದೊಬ್ಬರು ಡಬ್ಬದ ಒಳಗೆ ಇಳಿದಿದ್ದಾರೆ. ಈ ವೇಳೆ ಆಕಸ್ಮಿಕವಾಗಿ ಡಬ್ಬದ ಬಾಗಿಲು ಮುಚ್ಚಿದೆ.
ಘಟನೆ ನಡೆದಾಗ ಈ ಸ್ಥಳದಲ್ಲಿ ಯಾರು ಕೂಡ ಇರಲಿಲ್ಲ. ಹಾಗಾಗಿ ಮಕ್ಕಳು ಡಬ್ಬದಲ್ಲಿ ಲಾಕ್ ಆಗಿದ್ದಾರೆ ಎನ್ನುವ ವಿಚಾರ ಯಾರಿಗೂ ತಿಳಿದಿರಲಿಲ್ಲ. ಸಮೀಪದಲ್ಲಿದ್ದವರಲ್ಲಿ ವಿಚಾರಿಸಿದಾಗ ಡಬ್ಬ ಇರಿಸಲಾಗಿದ್ದ ಕೋಣೆಗೆ ಹೋಗಿದ್ದಾರೆ ಎಂದು ಹೇಳಿದ್ದಾರೆ. ಅನುಮಾನ ಬಂದ ಡಬ್ಬ ಇದ್ದ ಪ್ರದೇಶಕ್ಕೆ ಬಂದು ನೋಡಿದಾಗ ಮಕ್ಕಳು ಡಬ್ಬದೊಳಗೆ ಸಿಲುಕಿ ಮೃತಪಟ್ಟಿರುವುದು ತಿಳಿದು ಬಂದಿದೆ.