ಕಾಂತಾರ—2 ಚಿತ್ರೀಕರಣಕ್ಕೆ ಒಪ್ಪಿಗೆ ನೀಡಿತೇ ದೈವ? | ಕೋಲದ ವೇಳೆ ರಿಷಬ್ ಶೆಟ್ಟಿಗೆ ದೈವ ನೀಡಿದ ನುಡಿ ಏನು?
ಚಿತ್ರರಂಗದಲ್ಲಿ ಭಾರೀ ಸೆನ್ಸೇಷನ್ ಕ್ರಿಯೇಟ್ ಮಾಡಿದ ಕನ್ನಡ ಸಿನಿಮಾವೇ ‘ಕಾಂತಾರ’. ಆದರೆ ಈ ಸಿನಿಮಾದ ಬಿಡುಗಡೆಯ ನಂತರ ದೈವಾರಾಧನೆ ಬಗೆಗಿನ ವಾದ ವಿವಾದಗಳು, ದೈವಗಳ ಕುರಿತು ಸಿನಿಮಾ ಮಾಡಲು ಕೆಲವರು ಆಕ್ಷೇಪವನ್ನೂ ವ್ಯಕ್ತಪಡಿಸಿದ್ದರಿಂದ ‘ಕಾಂತಾರ 2’ ಬಗ್ಗೆ ಸಹಜವಾಗಿಯೇ ಕುತೂಹಲ ಮೂಡಿತ್ತು. ಹೀಗಾಗಿ ಸಿನಿಮಾ ತಂಡ ದೈವದ ಮೊರೆ ಹೋಗಿದ್ದು ಚಿತ್ರ ಮಾಡಲು ಅನುಮತಿ ಸಿಕ್ಕಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಆದರೆ ಸಿನಿಮಾ ತಂಡ ಅಧಿಕೃತವಾಗಿ ಈ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ.
ಕಾಂತಾರ ಸಿನಿಮಾ ಯಶಸ್ವಿಯಾದ ಬಳಿಕ ಕೋಲ ಕೊಡುವುದಾಗಿ ಹರಕೆ ಹೇಳಿಕೊಂಡಿದ್ದು ನಟ ನಿರ್ದೇಶಕ ರಿಷಬ್ ಶೆಟ್ಟಿ ತಂಡದೊಂದಿಗೆ ಬಂದು ಮಂಗಳೂರು ಭಾಗದಲ್ಲಿ ಕೋಲ ಸಂದಾಯ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಮಂಗಳೂರು ನಗರದ ಪಚ್ಚನಾಡಿಯ ಬಂದಳೆ ಮಡಿವಾಳ ಕುಟುಂಬಸ್ಥರಿಂದ ನಡೆದ ಅಣ್ಣಪ್ಪ ಪಂಜುರ್ಲಿ ಕೋಲದಲ್ಲಿ ಕಾಂತಾರ 2 ಸಿನಿಮಾ ಮಾಡುವ ಕುರಿತು ರಿಷಬ್ ಒಪ್ಪಿಗೆ ಕೇಳಿದ್ದರು.
ಮಧ್ಯರಾತ್ರಿ ನಡೆದ ದೈವದ ಜೊತೆಗಿನ ಮಾತುಕತೆಯಲ್ಲಿ ದೈವ ಹಲವು ಸೂಚನೆಗಳ ಜೊತೆ ಸಿನಿಮಾ ಮಾಡಲು ಅನುಮತಿ ನೀಡಿದೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಸಿನಿಮಾದ ಕಥೆ ಮಾಡಲು ರಿಷಬ್ ಶೆಟ್ಟಿ ಅಂಡ್ ಟೀಮ್ ಹುರುಪಿನಿಂದಲೇ ತಯಾರಾಗಿದೆ. ಈ ಕುರಿತು ಚಿತ್ರತಂಡ ಅಧಿಕೃತವಾಗಿ ಮಾಹಿತಿ ನೀಡದೇ ಇದ್ದರೂ, ಕೋಲದಲ್ಲಿ ಭಾಗವಹಿಸಿದ್ದ ಹಲವರು ಈ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.
ಇನ್ನು ರಿಷಬ್ ಶೆಟ್ಟಿ ಭಾಗಿಯಾಗಿದ್ದ ಕೋಲದಲ್ಲಿ ದೈವವು ‘ಸಂಪ್ರದಾಯಬದ್ಧವಾಗಿ ನೀವು ಸಿನಿಮಾ ಮಾಡಿದ್ದೀರಿ. ಎಲ್ಲೂ ಕೂಡಾ ದೈವಗಳ ಆಚರಣೆಗೆ ಚ್ಯುತಿ ಬಾರದಂತೆ ನಡೆದುಕೊಂಡಿದ್ದೀರಿ. ಮುಂದೆಯೂ ನಿಮ್ಮ ತಂಡದೊಂದಿಗೆ ನಾನು ಇರುತ್ತೇನೆ’ ಎಂದು ಅಭಯ ನೀಡಿದೆ’ ಎಂದು ಕೋಲದಲ್ಲಿ ಭಾಗಿಯಾದವರು ಹೇಳುತ್ತಿದ್ದಾರೆ. ಆದರೆ ಈ ಬಗ್ಗೆ ಅಧಿಕೃತ ಹೇಳಿಕೆ ಇನ್ನು ಬಂದಿಲ್ಲ. ಇನ್ನು ಕಾಂತಾರ ಸಿನಿಮಾ ತಂಡದ ಜೊತೆ ರಿಷಬ್ ಕುಟುಂಬ ಕೂಡ ಕೋಲ ಕಾರ್ಯಕ್ರಮದಲ್ಲಿ ಭಾಗಿಯಾಗಿತ್ತು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LwWxa0YtfZe3V04Rgx7ZIV
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka