ಕಾಂತಾರ: ದೈವಾರಾಧನೆಯಲ್ಲಿ ಮಾಂಸಾಹಾರ ಆಹಾರ ತ್ಯಜಿಸಬೇಕೇ? - Mahanayaka
3:50 PM Wednesday 11 - December 2024

ಕಾಂತಾರ: ದೈವಾರಾಧನೆಯಲ್ಲಿ ಮಾಂಸಾಹಾರ ಆಹಾರ ತ್ಯಜಿಸಬೇಕೇ?

kanthara
12/10/2022

ರಿಷಬ್ ಶೆಟ್ಟಿ ನಟನೆ, ನಿರ್ದೇಶನದ ‘ಕಾಂತಾರ’ ಚಿತ್ರ ಹೆಚ್ಚು ಚರ್ಚೆಗೀಡಾಗಿರೋದು ದೈವಾರಾಧನೆ ಅಥವಾ ಬೂತಾರಾಧನೆಯ ವಿಚಾರಕ್ಕೆ. ಅದರಲ್ಲೂ “ಶೂಟಿಂಗ್ ಸಮಯದಲ್ಲಿ ನಾನು ಮಾಂಸಾಹಾರ ತ್ಯಜಿಸಿದ್ದೆ” ಅನ್ನೋ ರಿಷಬ್ ಶೆಟ್ಟಿಯವರ ಹೇಳಿಕೆ ಸಾಕಷ್ಟು ಗೊಂದಲಗಳಿಗೂ ಕಾರಣವಾಗಿದೆ. ಮಾಂಸಾಹಾರವೇ ಪ್ರಧಾನವಾಗಿರೋ ದೈವಾರಾಧನೆಯಲ್ಲಿ ಮಾಂಸಾಹಾರ ತ್ಯಜಿಸಬೇಕು ಅನ್ನೋದು ಅನ್ನೋದು ತಮಾಷೆ ಅಲ್ವೇ?” ಅಂತ ಸಾಕಷ್ಟು ಜನರು ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನೆ ಮಾಡ್ತಾ ಇದ್ದಾರೆ.  ಹಾಗಿದ್ರೆ ರಿಷಬ್ ಶೆಟ್ಟಿ ಹೇಳಿಕೆ ತಪ್ಪೇ? ಅವರು ದೈವಾರಾಧನೆ ಅರಿಯದ ರಾಜ್ಯದ ಜನತೆಗೆ ತಪ್ಪಾದ ಸಂದೇಶ ನೀಡಿದ್ರಾ? ಹೀಗೆ ನೂರಾರು ಪ್ರಶ್ನೆಗಳು ಒಂದರ ಹಿಂದೊಂದರಂತೆ ಕೇಳಿ ಬಂದಿವೆ.

ದೈವಗಳು ಮತ್ತು ಮಾಂಸಾಹಾರ:

ದೈವಾರಾಧನೆಯಲ್ಲಿ ದೈವಗಳಿಗೆ ಮಾಂಸಾಹಾರದ ನೈವೇದ್ಯ ಮಾತ್ರವೇ ಅರ್ಪಿಸುತ್ತಾರೆ. ದೈವಗಳಿಗೆ ಹಣ್ಣು ಹಂಪಲುಗಳನ್ನು ಇಟ್ಟು ಪೂಜೆ ಮಾಡುತ್ತಾರಾದರೂ, ಒಂದು ತುಂಡು ತರಕಾರಿ ಕೂಡ ದೈವಗಳಿಗೆ ಬಡಿಸುವ ಸಂಪ್ರದಾಯವಿಲ್ಲ. ಅಂದ್ರೆ, ದೈವಗಳ ಆರಾಧನೆಯಲ್ಲಿ ಮಾಂಸಾಹಾರಕ್ಕೆ ಪ್ರಧಾನ ಸ್ಥಾನ ಇದೆ. ಜೊತೆಗೆ ಕೆಲವು ದೈವಗಳಿಗೆ ‘ಕಲಿ’ ಅಂದ್ರೆ, ಶೇಂದಿ ಅರ್ಪಿಸುವ ಕ್ರಮಗಳೂ ಇವೆ. ಇನ್ನೂ ಮುಂದುವರಿದು ನೋಡಿದ್ರೆ, ಕೊರಗಜ್ಜ ದೈವಕ್ಕೆ ಮದ್ಯ, ಚಕ್ಕುಲಿ, ಎಲೆ ಅಡಿಕೆ ಅರ್ಪಿಸುವಂತಹ ಆಚರಣೆಗಳು ಕೂಡ ಇವೆ. ಗುಳಿಗ ದೈವ ಜೀವಂತ ಕೋಳಿಯನ್ನು ಕಚ್ಚಿ ಹಸಿ ರಕ್ತ ಕುಡಿಯುವುದು ಕೂಡ ಚಾಲ್ತಿಯಲ್ಲಿದೆ. ಜೊತೆಗೆ ದೈವತಾಣದ ಆವರಣಗಳಲ್ಲಿ, ಕಟ್ಟೆಗಳಲ್ಲಿ ಕಲ್ಲು(ಬಲಿಪೀಠ)ಗಳನ್ನು ಸ್ಥಾಪಿಸಿ ಅಲ್ಲಿಯೇ ಕೋಳಿ, ಹಂದಿ, ಆಡು ಸೇರಿದಂತೆ ವಿವಿಧ ಪ್ರಾಣಿಗಳನ್ನು ಬಲಿಕೊಡುವ ಕ್ರಮಗಳು ದೈವಾರಾಧನೆಯಲ್ಲಿದೆ.

ದೈವಾರಾಧನೆಗಳಲ್ಲಿ ಮಾಂಸಾಹಾರ ತ್ಯಜಿಸಬೇಕೇ?

ಕಾಂತಾರ ಚಿತ್ರದ ನಾಯಕ ನಟ, ನಿರ್ದೇಶಕ ರಿಷಬ್ ಶೆಟ್ಟಿ, ಶೂಟಿಂಗ್ ಸಂದರ್ಭದಲ್ಲಿ ನಾನು ಮಾಂಸಾಹಾರ ತ್ಯಜಿಸಿದ್ದೆ ಎಂದಿದ್ದಾರೆ. ಅದರಲ್ಲಿ ಯಾವುದೇ ತಪ್ಪು ಇಲ್ಲ. ಯಾಕೆಂದರೆ, ದೈವಾರಾಧನೆ ಮಾಡುವವರು ಕೂಡ ದೈವಾರಾಧನೆಗಿಂತ ಮೊದಲು ಕೆಲವೊಂದು ನಿಯಮಗಳನ್ನು ಪಾಲಿಸುತ್ತಾರೆ. ಆ ಪೈಕಿ ಮಾಂಸಾಹಾರ ತ್ಜಜಿಸುವುದು ಕೂಡ ಹೆಚ್ಚಾಗಿ ಚಾಲ್ತಿಯಲ್ಲಿದೆ. ಅಂದ್ರೆ, ಇಲ್ಲಿ ಮಾಂಸಾಹಾರ ಕೆಟ್ಟದ್ದು ಅಂತ ಅಲ್ಲ. ನೇಮ(ಪೂಜೆ)ದ ಒಂದು ವಾರ, 15 ದಿನ ಅಥವಾ ಒಂದು ತಿಂಗಳ ಅವಧಿಗೂ ಮುಂಚಿತವಾಗಿ ಕೋಲಕಟ್ಟುವವರು(ದೈವಧಾರಿಗಳು) ಮಾಂಸಾಹಾರ ತ್ಯಜಿಸುತ್ತಾರೆ. ದೈವಕ್ಕೆ ಬಲಿ(ಸೇವೆ) ಸಿಗುವವರೆಗೂ ಅದರ ಸೇವೆ ಮಾಡುವವರು ಮಾಂಸಾಹಾರ ತಿನ್ನ ಬಾರದು, ತಿಂದರೆ ದೈವ ಮುನಿಸಿಕೊಳ್ಳುತ್ತದೆ ಅನ್ನೋ ನಂಬಿಕೆಯ ಕಾರಣಕ್ಕೆ ಆ ಸಂದರ್ಭದಲ್ಲಿ ಮಾಂಸಾಹಾರ ಸೇವನೆ ಮಾಡಬಾರದು ಅನ್ನೋ ಆಚರಣೆ ಆರಂಭವಾಯ್ತು. ಆದರೆ, ಅದು ಇತ್ತೀಚಿನ ದಿನಗಳಲ್ಲಿ ಬೇರೆ ಬೇರೆ ರೀತಿಯ ಅರ್ಥಗಳನ್ನು ಕೂಡ ಪಡೆದುಕೊಂಡಿದೆ ಅನ್ನೋದು ಸುಳ್ಳಲ್ಲ.

ದೈವದ ನೇಮದಲ್ಲಿ ದೈವಕ್ಕೆ ಮಾಂಸಾಹಾರದ ನೈವೇದ್ಯ ಅರ್ಪಿಸುವವರೆಗೂ ಅದರ ಸೇವೆ ಮಾಡುವವರು ಮಾಂಸಾಹಾರ ಮಾಡುವುದಿಲ್ಲ. ಯಾಕೆಂದರೆ, ಮೊದಲು ದೈವಕ್ಕೆ ದೈವ ಸ್ವೀಕರಿಸಿದ ಬಳಿಕವೇ ಅದು ಪ್ರಸಾದವಾಗಿ ಸ್ವೀಕರಿಸುವ ಕ್ರಮಗಳು ಇವೆ. ಹಾಗಂತ ದೈವರಾಧನೆ ನೋಡಲು ಬರುವವರು ಮಾಂಸಾಹಾರ ತ್ಯಜಿಸಿ ಬರಬೇಕು ಅನ್ನೋ ನಿಯಮಗಳಿಲ್ಲ. ರಿಷಬ್ ಶೆಟ್ಟಿ ದೈವದ ಪಾತ್ರವನ್ನು ಮಾಡುತ್ತಿರೋದ್ರಿಂದಾಗಿ ಅವರು, ತಮ್ಮ ಧಾರ್ಮಿಕ ಭಾವನೆಗಳಿಗೆ ಅನುಗುಣವಾಗಿ ಮಾಂಸಾಹಾರ ಸೇವನೆ ಮಾಡದೇ ವೃತ ಆಚರಿಸಿದ್ದರೆ, ಅದರಲ್ಲಿ ವಿರೋಧಿಸುವಂತಹದ್ದೇನಿಲ್ಲ. ಈ ಆಚರಣೆ ಕರಾವಳಿಯಿಂದ ಹೊರಗಿನ ಚಿಂತಕರಿಗೆ ವಿಚಿತ್ರವಾಗಿ ಕಂಡರೂ, ಇದು ಹಿಂದಿನಿಂದಲೂ ಪಾಲಿಸಿಕೊಂಡು ಬಂದಿರುವ ನಿಯಮವಾಗಿದೆ. ಯಾರನ್ನೂ ಮೆಚ್ಚಿಸುವುದಕ್ಕಾಗಿ ಆ ನಿಯಮವನ್ನು ಬಿಡುವಂತಹ ಪರಿಸ್ಥಿತಿ ಇಲ್ಲ. ದೈವಾರಾಧನೆ ಅನ್ನೋದು ತುಳುನಾಡಿನ ನೆಲ ಮೂಲದ ಆಚರಣೆ. ಅಲ್ಲಿ ಪ್ರತಿಯೊಂದು ಆಚರಣೆಗೂ ಅದರದ್ದೇ ಆದ ಅರ್ಥಗಳಿವೆ. ಇನ್ನೊಂದು ವಿಶೇಷ ಅಂದ್ರೆ, ದೈವರಾಧನೆಯಲ್ಲಿ ಬ್ರಾಹ್ಮಣ ಅರ್ಚಕರು ಇರುವುದಿಲ್ಲ. ಮಂತ್ರ ಹೇಳಿ ಆರಾಧಿಸುವ ಯಾವುದೇ ಕ್ರಮಗಳು ದೈವಾರಾಧನೆಯಲ್ಲಿಲ್ಲ. ಹಾಗಾಗಿಯೇ ಇಡೀ ಕರ್ನಾಟಕದಲ್ಲಿ ಕರಾವಳಿಯಲ್ಲಿ ದೇವಸ್ಥಾನಗಳಿಗಿಂತ ಹೆಚ್ಚು ದೈವಸ್ಥಾನಗಳು ಪ್ರಾಮುಖ್ಯತೆ ಪಡೆದುಕೊಂಡಿವೆ.

ಕಾಂತಾರ ಚಿತ್ರದಲ್ಲಿ ದೈವದ ಬಗ್ಗೆ ಒಂದು ಸಣ್ಣ ಪರಿಚಯ ಮಾತ್ರವೇ ಮಾಡಲಾಗಿದೆ. ದೈವಾರಾಧನೆ ಅನ್ನೋದು ಬಹಳ ವಿಶಾಲವಾದದ್ದು. ತುಳುನಾಡಿನ ಪಾರ್ದನಗಳಲ್ಲಿ ದೈವಗಳ ಕಥೆಗಳಿವೆ. ದೈವಗಳ ಪೈಕಿ ತುಳುನಾಡಿನ ಮೂಲ ಪುರುಷರು ಎಂದು ಗುರುತಿಸಿಕೊಳ್ಳುವ ಸತ್ಯಸಾರಮನಿ(ಕಾನದ –ಕಟದ), ಕೋಟಿ ಚೆನ್ನಯ್ಯ, ಕೊರಗಜ್ಜ ಹೀಗೆ ಬಹಳ ವಿಸ್ತಾರವಾದ ಕಥೆಗಳನ್ನು ಹೊಂದಿರುವ ಪ್ರಮುಖ ದೈವಗಳು ಕೂಡ ಇವೆ. ಪ್ರತಿ ದೈವಕ್ಕೂ ಅದರದ್ದೇ ಆದ ವಿಶೇಷತೆಗಳಿವೆ. ಮೇಲ್ಜಾತಿಯ ಜೊತೆಗಿನ ಸಂಘರ್ಷ ಪ್ರತಿಯೊಂದು ದೈವಗಳ ಕಥೆಯಲ್ಲೂ ಕಂಡು ಬರುತ್ತದೆ.

ಕಾಂತಾರ ಕ್ಲೈಮ್ಯಾಕ್ಸ್ ಸೀನ್!

ಒಂದು ಸಿನಿಮಾ ಮಾಡಬೇಕಾದರೆ, ಅದರ ಹಿಂದೆ ನಿರ್ದೇಶಕನ ಶ್ರಮ ಇರೋದು ಅಷ್ಟಿಷ್ಟಲ್ಲ. ಬರೇ ರೌಡಿಸಂ, ಡಬಲ್ ಮೀನಿಂಗ್ ಸಿನಿಮಾ, ಲವ್ ಸ್ಟೋರಿಗೆ ಸೀಮಿತವಾಗದೇ ಹೊಸ ಕಥಾ ವಸ್ತುವೊಂದನ್ನು ಹೆಕ್ಕಿ ತಂದು ರಿಷಬ್ ಶೆಟ್ಟಿ ಅತ್ಯದ್ಬುತವಾದ ಸಿನಿಮಾವನ್ನು ತಂದಿದ್ದಾರೆ. ಇದಲ್ಲದೇ ತಮ್ಮ ಚಿತ್ರದ ಕಥೆಗಾಗಿ ಅವರು ಸಾಕಷ್ಟು ಅಧ್ಯಯನ ಮಾಡಿರೋದಾಗಿಯೂ ಹೇಳಿದ್ದಾರೆ. ಚಿತ್ರದ ಕಥೆಗಳಲ್ಲಿಯೂ ಅಷ್ಟೇ, ಜಾತಿ ತಾರತಮ್ಯದ ನೀಚ ಆಚರಣೆಗಳನ್ನು ಕೂಡ ಅವರು ಕಟುವಾಗಿ ಟೀಕಿಸಿದ್ದಾರೆ. ಆದರೆ, ಒಂದು ಸಿನಿಮಾವನ್ನು ಸಿನಿಮಾವಾಗಿ ತೆಗೆದುಕೊಳ್ಳದೇ ಅದನ್ನು ವಿವಾದವಾಗಿ ಯಾಕೆ ಕಾಣಲಾಗುತ್ತಿದೆ? ಕಾಂತಾರ ಚಿತ್ರ, ತುಳುನಾಡಿಯ ಯಾವ ದೈವಗಳ ಅಸಲಿ ಕಥೆಯೂ ಅಲ್ಲ. ಅದೊಂದು ಮನರಂಜನೆಯ ಚಿತ್ರ. ಈ ಚಿತ್ರದಲ್ಲಿ ದೈವರಾಧನೆಯ ಸಣ್ಣಪುಟ್ಟ ತುಣುಕುಗಳು ಹೀಗೆ ಬಂದು ಹಾಗೆ ಹೋಗುತ್ತವೆ. ಕ್ಲೈಮ್ಯಾಕ್ಸ್ ಸೀನ್ ನಲ್ಲಿ ದೈವದ ದೃಶ್ಯಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಅಲ್ಲಿ ದೈವ ರೌಡಿಗಳ ಮೇಲೆ ಆಕ್ರಮಣ ಮಾಡುವ ದೃಶ್ಯ ಕೂಡ ಕಮರ್ಶಿಯಲ್. ಯಾಕೆಂದ್ರೆ, ದೆವ್ವ ಹಿಡಿದವರು ಮಾತ್ರವೇ ಜನರ ಮೇಲೆ ದಾಳಿ ಮಾಡುತ್ತಾರೆ. ದೈವಕ್ಕೆ ಅದರದ್ದೇ ಆದ ಪಾವಿತ್ರ್ಯತೆ ಮತ್ತು ನಿಯಮವಿದೆ. ದೈವಧಾರಿ ಎಂದಿಗೂ ಜನರ ಮೇಲೆ ದಾಳಿ ಮಾಡಲ್ಲ. ದೈವಕ್ಕೆ ಅಪಚಾರ ಬಗೆದರೆ, ಅಪಚಾರ ಬಗೆದವನಿಗೆ ಬೇರೆ ಬೇರೆ ರೀತಿಯಲ್ಲಿ ಅಪಾಯಗಳನ್ನು, ಅಪಜಯಗಳನ್ನು ತರುತ್ತದೆ, ಅಪಮೃತ್ಯು, ಅನಾರೋಗ್ಯ ಮೊದಲಾದ ರೀತಿಯಲ್ಲಿ ಶಿಕ್ಷಿಸುತ್ತದೆ ಅನ್ನೋ ನಂಬಿಕೆ ಇದೆಯೇ ಹೊರತು. ದೈವ ಮೈಮೇಲೆ ಬಂದು ಸಾಯಿಸುತ್ತದೆ ಅನ್ನೋ ನಂಬಿಕೆ ಇಲ್ಲ. ಅಂತಹ ಘಟನೆಗಳಿಗೆ ಉದಾಹರಣೆಯೂ ಇಲ್ಲ. ಈ ಒಂದು ವಿಚಾರ ಬಿಟ್ಟರೆ, ಕಾಂತಾರ ಚಿತ್ರ  ಸಾಕಷ್ಟು ವಾಸ್ತವ ಅಂಶಗಳನ್ನು ಹೊತ್ತು ತಂದಿದೆ ಅನ್ನೋದ್ರಲ್ಲಿ ಯಾವುದೇ ಅನುಮಾನಗಳಿಲ್ಲ.

ರಾಜಕೀಯ ಅಭಿಪ್ರಾಯಗಳು ಟೀಕೆಗೆ ಕಾರಣವಾಯ್ತೆ?

ರಿಷಬ್ ಶೆಟ್ಟಿ ಚಿತ್ರ ಬಿಡುಗಡೆಯ ಸಂದರ್ಭದಲ್ಲಿ ಹೇಳಿಕೆ ನೀಡುತ್ತಾ, “ಶೂಟಿಂಗ್ ಸಂದರ್ಭದಲ್ಲಿ ನಾನು ಮಾಂಸಾಹಾರ ತ್ಯಜಿಸಿದ್ದೆ” ಎಂದಿದ್ದರು. ಆ ಹೇಳಿಕೆ ರಿಷಬ್ ಶೆಟ್ಟಿ ಅವರ ವೈಯಕ್ತಿಕ ಧಾರ್ಮಿಕ ಭಾವನೆ. ಶೂಟಿಂಗ್ ಸಂದರ್ಭದಲ್ಲಿ ಮಾಂಸಾಹಾರ ಮಾಡಬಾರದು ಅಂತ ಅವರು ನಿರ್ಧರಿಸಿದ್ರು, ಹಾಗಾಗಿ ಮಾಂಸಾಹಾರ ಮಾಡಿಲ್ಲ. ಅದು ಅವರ ಧಾರ್ಮಿಕ ನಂಬಿಕೆಯೇ ಹೊರತು, ಅದು ವಿವಾದ ಅಲ್ಲ. ಆದರೆ, ಇದೇ ಸಂದರ್ಭದಲ್ಲಿ ರಾಜ್ಯದಲ್ಲಿ ಮಾಂಸಾಹಾರಿಗಳ ವಿರುದ್ಧ ಕೆಲವೊಬ್ಬರು ನೀಡುತ್ತಿರುವ ಹೇಳಿಕೆಯಿಂದ ಸಾಕಷ್ಟು ಚರ್ಚೆಗಳು ಜೀವಂತವಾಗಿತ್ತು. ಹೀಗಾಗಿ ರಿಷಬ್ ಶೆಟ್ಟಿ ಹೇಳಿಕೆ ಮಾಂಸಾಹಾರಿಗಳ ಆಕ್ರೋಶಕ್ಕೆ ಕಾರಣವಾಯ್ತು. ಇನ್ನೂ ಮುಂದುವರಿದರೆ, ರಿಷಬ್ ಶೆಟ್ಟಿಯವರ ರಾಜಕೀಯ ನಿಲುವುಗಳ ಹೇಳಿಕೆಗಳು ಕೂಡ ಅವರ ವಿರುದ್ಧ ಕಟು ಟೀಕೆಗೆ ಕಾರಣವಾಗಿದೆ ಅನ್ನೋ ಮಾತುಗಳು ಕೂಡ ಕೇಳಿ ಬಂದಿವೆ.

ಏನೇ ಆಗಲಿ, ಕಾಂತರ ಚಿತ್ರ ಕನ್ನಡ ಚಿತ್ರರಂಗದ ಕಡೆಗೆ ಭಾರತೀಯ ಚಿತ್ರರಂಗ ಮತ್ತೊಮ್ಮೆ ತಿರುಗಿ ನೋಡುವಂತೆ ಮಾಡಲು ಯಶಸ್ವಿಯಾಗುತ್ತಿದೆ. ಈ ನಿಟ್ಟಿನಲ್ಲಿ ಎಲ್ಲ ಅಸಮಾಧಾನಗಳನ್ನು ಮರೆತು ರಿಷಬ್ ಶೆಟ್ಟಿ  ಅವರಿಗೆ ಅಭಿನಂದನೆಗಳನ್ನು ಹೇಳಲೇ ಬೇಕಿದೆ. ಮುಂದಿನ ಚಿತ್ರಗಳಲ್ಲಿ ರಿಷಬ್ ಶೆಟ್ಟಿ  ಎಲ್ಲ ಸೂಕ್ಷ್ಮತೆಗಳನ್ನು ಗಮನದಲ್ಲಿಡುತ್ತಾರೆ ಅನ್ನುವ ಭರವಸೆಯಿರಲಿ. ಇನ್ನಷ್ಟು ಕನ್ನಡ ಚಿತ್ರಗಳು ಅದ್ದೂರಿ ಗೆಲುವುಗಳನ್ನು ಸಾಧಿಸಲಿ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ