ಹೊಸಬರಿಗೆ ಟಿಕೆಟ್ | ಉರುಳಿತು ಹಳೆಯ ವಿಕೆಟ್ : ಗೆಲುವಿನ ಸರದಾರ ಅಂಗಾರ ಸ್ಥಿತಿ ಹೀನಾಯ
ಬಿಜೆಪಿಯ 189 ಅಭ್ಯರ್ಥಿಗಳ ಪಟ್ಟಿ ಪ್ರಕಟವಾಗಿದ್ದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೂವರು ಹೊಸ ಮುಖಗಳಿಗೆ ಟಿಕೆಟ್ ನೀಡಲಾಗಿದೆ.
ಸುಳ್ಯದಿಂದ ಸಚಿವ ಅಂಗಾರ ಅವರನ್ನು ಕೈ ಬಿಟ್ಟು ಭಾಗೀರಥಿ ಮುರುಳ್ಯ ಅವರಿಗೆ ಟಿಕೆಟ್ ನೀಡಲಾಗಿದೆ. ಮಂಗಳೂರು ( ಉಳ್ಳಾಲ ) ಟಿಕೆಟ್ ಮಾಜಿ ಜಿ.ಪಂ. ಸದಸ್ಯ ಸತೀಶ್ ಕುಂಪಲ ಅವರಿಗೆ ಸಿಕ್ಕಿದೆ. ಪುತ್ತೂರು ಹಾಲಿ ಶಾಸಕ ಸಂಜೀವ ಮಠಂದೂರು ಅವರನ್ನು ಬಿಟ್ಟು ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಆಶಾ ತಿಮ್ಮಪ್ಪ ಗೌಡ ಅವರಿಗೆ ಟಿಕೆಟ್ ನೀಡಲಾಗಿದೆ.
ಉಳಿದಂತೆ ಹಾಲಿ ಶಾಸಕರಿಗೆ ಮತ್ತೆ ಟಿಕೆಟ್ ನೀಡಲಾಗಿದೆ. ಮಂಗಳೂರು ದಕ್ಷಿಣದಿಂದ ವೇದವ್ಯಾಸ ಕಾಮತ್ , ಮಂಗಳೂರು ಉತ್ತರದಿಂದ ಡಾ. ಭರತ್ ಶೆಟ್ಟಿ , ಬಂಟ್ವಾಳದಿಂದ ರಾಜೇಶ್ ನಾಯ್ಕ್, ಮೂಡುಬಿದಿರೆಯಿಂದ ಉಮಾನಾಥ್ ಕೋಟ್ಯಾನ್, ಬೆಳ್ತಂಗಡಿಯಿಂದ ಹರೀಶ್ ಪೂಂಜಾ ಮತ್ತೆ ಬಿಜೆಪಿ ಅಭ್ಯರ್ಥಿಗಳಾಗಲಿದ್ದಾರೆ.
ಪುತ್ತೂರು ಕ್ಷೇತ್ರಕ್ಕೆ ಆಶಾ ತಿಮ್ಮಪ್ಪ ಗೌಡ:
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಮತ್ತೆ ಒಕ್ಕಲಿಗ ಸಮುದಾಯಕ್ಕೆ ಒಲಿದಿದೆ. ದ.ಕ.ಜಿ.ಪಂ.ಮಾಜಿ ಅಧ್ಯಕ್ಷೆ, ಸುಳ್ಯ ವಿಧಾನಸಭಾ ಕ್ಷೇತ್ರದ ಕಡಬ ತಾಲೂಕಿನ ಕುಂತೂರು ಗ್ರಾಮದ ಆಶಾ ತಿಮ್ಮಪ್ಪ ಗೌಡ ಕುಂಡಡ್ಕ ಇವರು ಪುತ್ತೂರು ಬಿಜೆಪಿ ಅಭ್ಯರ್ಥಿ. ಪದವು ನಿವಾಸಿ ತಿಮ್ಮಪ್ಪ ಗೌಡ ಅವರ ಪತ್ನಿ 65ರ ಹರೆಯದ ಆಶಾರವರು ಬಿಜೆಪಿ ಪಕ್ಷದ ಹಿರಿಯ ಕಾರ್ಯಕರ್ತೆ. ಎಸ್ ಎಸ್ ಎಲ್ ಸಿ ವಿದ್ಯಾಭ್ಯಾಸ ಹೊಂದಿದ್ದಾರೆ. ಇವರು ನೆಲ್ಯಾಡಿ ಹಾಗೂ ಬೆಳ್ಳಾರೆಯಿಂದ ಜಿ. ಪಂ ಚುನಾವಣೆಗೆ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಇವರು ಜಿಲ್ಲಾ ಪಂಚಾಯತ್ ಅಧ್ಯಕ್ಷೆಯಾಗಿಯೂ ಕಾರ್ಯನಿರ್ವಹಿಸಿದ್ದಾರೆ.
ವಿಶೇಷ ಎಂದರೇ ಇವರು ಪೆರಾಬೆ ಗ್ರಾಮದಿಂದ ಬಿಜೆಪಿಯಿಂದ ಎಂಎಲ್ ಎ ಚುನಾವಣೆ ಸ್ಪರ್ಧಿಸುತ್ತಿರುವ ಎರಡನೇ ಅಭ್ಯರ್ಥಿ. ಈ ಹಿಂದೆ ಶಕುಂತಳಾ ಟಿ ಶೆಟ್ಟಿ ಬಿಜೆಪಿಯಿಂದ ಬಂಟ್ವಾಳ ಹಾಗೂ ಪುತ್ತೂರಿನಿಂದ ಶಾಸಕ ಸ್ಥಾನಕ್ಕೆ ಸ್ಪರ್ಧಿಸಿದ್ದರು. ಇತ್ತ ಪುತ್ತೂರು ಬಿಜೆಪಿ ಟಿಕೆಟ್ ಘೋಷಣೆ ಆಗ್ತಿದ್ದಂತೆ ಹಿಂದುತ್ವ ಸಂಘಟನೆಯ ಮುಖಂಡ ಅರುಣ್ ಕುಮಾರ್ ಪುತ್ತಿಲ ಅವರಿಗೆ ಟಿಕೆಟ್ ಕೈ ತಪ್ಪಿರುವ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲ ತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪುತ್ತೂರು ಕ್ಷೇತ್ರಕ್ಕೆ ಸುಳ್ಯ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಗೆ ಮಣೆ ಹಾಕಿದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದು ಬಿಜೆಪಿಗೆ ವೈನಸ್ಸು ಆಗೋ ಸಾಧ್ಯತೆ ಇದೆ.
ಉಳ್ಳಾಲ ಕ್ಷೇತ್ರ: ಸತೀಶ್ ಕುಂಪಲಗೆ ಅವಕಾಶ
ದಕ್ಷಿಣ ಕನ್ನಡ ಜಿಲ್ಲೆಯ ಬಹಳ ಕುತೂಹಲದ ಕ್ಷೇತ್ರ ಮಂಗಳೂರು ಉಳ್ಳಾಲ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಹೊಸ ಮುಖ ಬಿಜೆಪಿ ಮುಖಂಡ ಸತೀಶ್ ಕುಂಪಲ ಆಯ್ಕೆ ಆಗಿದ್ದಾರೆ. ಟಿಕೆಟ್ ಗಾಗಿ ಭಾರೀ ಪೈಪೋಟಿ ನಡುವೆ ಹೈಕಮಾಂಡ್ ಸತೀಶ್ ಕುಂಪಲ ಅವರಿಗೆ ಟಿಕೆಟ್ ನೀಡಿದೆ.
ಮಂಗಳೂರು ಕ್ಷೇತ್ರದಲ್ಲಿ ಈ ಬಾರಿ ಹೊಸ ಮುಖ ಸತೀಶ್ ಕುಂಪಲ ಅವರಿಗೆ ಟಿಕೆಟ್ ದೊರಕಿದೆ. ಕಳೆದ ಬಾರಿ ಸಂತೋಷ್ ರೈ ಬೋಳಿಯಾರು ಅವರು ಈ ಕ್ಷೇತ್ರದಲ್ಲಿ ಕಾಂಗ್ರೆಸ್ ನ ಯು.ಟಿ.ಖಾದರ್ ಅವರ ಎದುರು ಕಣಕ್ಕಿಳಿದು ಸೋತಿದ್ದರು. ಈ ಬಾರಿ ಸಂತೋಷ್ ರೈ ಅವರ ಬದಲು ಬಿಜೆಪಿ ಸತೀಶ್ ಕುಂಪಲ ಅವರಿಗೆ ಮಣೆ ಹಾಕಿದೆ. ಇಲ್ಲಿ ಎಸ್ ಡಿಪಿಐ ಪಕ್ಷದ ಅಭ್ಯರ್ಥಿ ರಿಯಾಝ್ ಫರಂಗಿಪೇಟೆ ಕೂಡಾ ಸ್ಪರ್ಧಿಸುತ್ತಿದ್ದಾರೆ.
ಗೆಲುವಿನ ಸರದಾರ ಅಂಗಾರ ಮೂಲೆಗುಂಪು: ಭಾಗೀರಥಿ ಮುರುಳ್ಯಗೆ ಟಿಕೆಟ್
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಬಿಜೆಪಿ ಪಕ್ಷದ ಪ್ರಮುಖ ಗೆಲುವಿನ ಕ್ಷೇತ್ರ. ಈವರೆಗೆ ಶಾಸಕರಾಗಿ ಸಚಿವರಾಗಿದ್ದ ಎಸ್.ಅಂಗಾರರಿಗೆ ಈ ಸಲದ ಚುನಾವಣೆಯಲ್ಲಿ ಟಿಕೆಟ್ ಕೈತಪ್ಪಿದೆ. ಈ ಸಲ ಅಂಗಾರರ ಬದಲಿಗೆ ಬೇರೆ ಸಮುದಾಯದ ಅಭ್ಯರ್ಥಿಗೆ ಟಿಕೆಟ್ ಕೊಡಬೇಕೆಂಬ ಆಗ್ರಹ ಕೂಡಾ ಕೇಳಿಬಂದಿತ್ತು. ಇದೀಗ ಸುಳ್ಯ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆ ಭಾಗೀರಥಿ ಮುರುಳ್ಯ ಅವರನ್ನು ಆಯ್ಕೆ ಮಾಡಲಾಗಿದೆ.
ಸುಳ್ಯ ತಾಲೂಕಿನ ಮುರುಳ್ಯ ಗ್ರಾಮದ ಶಾಂತಿನಗರ ಮುರುಳ್ಯದ ದಿ.ಗುರುವ ಮತ್ತು ದಿ.ಕೊರಗ್ಗು ದಂಪತಿಯ ಪುತ್ರಿ ಭಾಗೀರಥಿ ಮುರುಳ್ಯ ಅವರು ಪಿಯುಸಿ ವಿದ್ಯಾಭ್ಯಾಸ ಹೊಂದಿದ್ದಾರೆ. ಪ್ರಸ್ತುತ ಹೈನುಗಾರಿಕೆ, ಟೈಲರಿಂಗ್ ವೃತ್ತಿ ನಿರ್ವಹಿಸುತ್ತಿದ್ದಾರೆ. ಮೊದಲಿಗೆ ಬೀಡಿ ಕಾರ್ಮಿಕೆಯಾಗಿ, ಗೌರವ ಶಿಕ್ಷಕಿಯಾಗಿಯೂ ದುಡಿದಿದ್ದಾರೆ.
ರಾಷ್ಟ್ರಸೇವಿಕಾ ಸಮಿತಿ ಪ್ರಾಥಮಿಕ ಶಿಕ್ಷಣ ಪಡೆದಿರುವ ಭಾಗೀರಥಿ ಅವರು ರಾಷ್ಟ್ರ ಸೇವಿಕ ಸಮಿತಿ ಸದಸ್ಯೆಯಾಗಿ, ಮತ್ತಿತರವಾಗಿ ತೊಡಗಿಸಿಕೊಂಡಿದ್ದಾರೆ. ಬಿಜೆಪಿಯಿಂದ ಸ್ಪರ್ಧಿಸಿ ಎಣ್ಮೂರು ತಾಲೂಕು ಪಂಚಾಯತ್ ಕ್ಷೇತ್ರದ ಸದಸ್ಯೆಯಾಗಿ, ಜಾಲ್ಸೂರು ಜಿಲ್ಲಾ ಪಂಚಾಯತ್ ಕ್ಷೇತ್ರದ ಸದಸ್ಯೆಯಾಗಿ ದುಡಿದಿದ್ದಾರೆ.
ಸುಳ್ಯ ಬಿಜೆಪಿ ಮಂಡಲ ಸಮಿತಿ ಸದಸ್ಯೆಯಾಗಿ, ದ.ಕ.ಜಿಲ್ಲಾ ಬಿಜೆಪಿ ಕಾರ್ಯದರ್ಶಿಯಾಗಿ, ಬಿಜೆಪಿ ಪುತ್ತೂರು ಮಂಡಲ ಸಹಪ್ರಭಾರಿಯಾಗಿ, ರಾಜ್ಯ ಬಿಜೆಪಿ ಎಸ್.ಸಿ.ಮೋರ್ಚಾ ಉಪಾಧ್ಯಕ್ಷೆಯಾಗಿ ಉಡುಪಿ, ದ.ಕ. ಸಹಪ್ರಭಾರಿಯಾಗಿ, ದ.ಕ. ಜಿಲ್ಲಾ ಬಿಜೆಪಿ ಉಪಾಧ್ಯಕ್ಷೆಯಾಗಿ, ಬೆಳ್ತಂಗಡಿ ಮಂಡಲ ಸಹಪ್ರಭಾರಿಯಾಗಿದ್ದಾರೆ. ಪ್ರಸ್ತುತ ರಾಜ್ಯ ಬಿಜೆಪಿ ಮಹಿಳಾ ಮೋರ್ಚದ ಕಾರ್ಯಕಾರಿಣಿ ಸದಸ್ಯೆಯಾಗಿ, ಕೊಡಗು ಜಿಲ್ಲೆ ಮತ್ತು ಉಡುಪಿ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಪ್ರಭಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ವಿವಿಧ ಸಹಕಾರಿ ಸಂಘಗಳಲ್ಲಿ, ಧಾರ್ಮಿಕ ಕ್ಷೇತ್ರದಲ್ಲೂ, ಸಾಮಾಜಿಕ ಕ್ಷೇತ್ರದಲ್ಲೂ ತನ್ನನ್ನು ತೊಡಗಿಸಿಕೊಂಡಿದ್ದಾರೆ.
ಹಾಲಿ ಸಚಿವರಾಗಿದ್ದ ಅಂಗಾರ ಅವರಿಗೆ ಟಿಕೆಟ್ ಕೈತಪ್ಪಿದ್ದು ಹೀನಾಯ ಸ್ಥಿತಿ ಎಂದೇ ಹೇಳಬಹುದು. ಸತತ ಗೆಲುವು ದಾಖಲಿಸಿದ್ದ ಅಂಗಾರ ಅವರಿಗೆ ಟಿಕೆಟ್ ನೀಡದಿರಲು ಕಾರಣ ಏನು ಅನ್ನೋದು ರಹಸ್ಯವಾಗಿಯೇ ಉಳಿದಿದೆ. ಜೊತೆಗೆ ಗೆಲ್ಲುವವರೆಗೆ ಬೇರೆಯವರು ಗೆದ್ದ ನಂತರ ಆರೆಸ್ಸೆಸ್ ಮೂಲದವರಿಗೆ ಟಿಕೆಟ್, ಇದು ಬಿಜೆಪಿಯ ರಹಸ್ಯ ಅನ್ನೋ ಗುಸುಗುಸು ಮಾತುಗಳು ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಕೇಳಿ ಬಂದಿವೆ.
ರಾಜೀನಾಮೆ ಪರ್ವ ಆರಂಭ:
ಹಾಲಿ ಸಚಿವ ಎಸ್.ಅಂಗಾರರಿಗೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ ಬಿಜೆಪಿ ಟಿಕೆಟ್ ತಪ್ಪಿದ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯ ಹಿರಿಯ ಮುಖಂಡ ವೆಂಕಟ್ ವಳಲಂಬೆ ರಾಜೀನಾಮೆ ನೀಡಿದ್ದಾರೆ. ಈ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಳ್ಯ ಜೊತೆಗೆ ಪುತ್ತೂರು ಬಿಜೆಪಿ ಅಭ್ಯರ್ಥಿ ಬಗ್ಗೆ ಸ್ವಪಕ್ಷದಲ್ಲೇ ಅಸಮಾಧಾನ ವ್ಯಕ್ತವಾಗಿದ್ದು ಭಿನ್ನಮತಕ್ಕೆ ಕಾರಣವಾಗಿದೆ.
ಕಳೆದ 30 ವರ್ಷಗಳ ಕಾಲ ಕ್ಷೇತ್ರ ಮತ್ತು ಪಕ್ಷಕ್ಕೆ ಯಾವುದೇ ಚ್ಯುತಿ ಬಾರದ ರೀತಿ ದುಡಿದ ಸಾಮಾನ್ಯ ಮನೆತನದಿಂದ ಬಂದಿರುವ ಸರಳ ಸಜ್ಜನಿಕೆಯ ಎಲ್ಲರ ಜನಮನ ಗೆದ್ದಿರುವ ಪಕ್ಷಾತೀತವಾಗಿ ಕ್ಷೇತ್ರದ ಅಭಿವೃದ್ಧಿಯನ್ನು ಮಾಡಿರುವ ಎಸ್.ಅಂಗಾರರಂತಹ ಪ್ರಾಮಾಣಿಕ ನಾಯಕನ ಜೊತೆ ಚರ್ಚಿಸದೆ ಏಕಪಕ್ಷೀಯವಾಗಿ ಅಭ್ಯರ್ಥಿ ಘೋಷಣೆ ಮಾಡಿರುವುದರಿಂದ ನನ್ನ ಮನಸ್ಸಿಗೆ ತುಂಬಾ ನೋವಾಗಿರುತ್ತದೆ. ಆದುದರಿಂದ ನನ್ನ ಪಾರ್ಟಿಯ ಜಿಲ್ಲಾ ಉಪಾಧ್ಯಕ್ಷ ಸ್ಥಾನಕ್ಕೆ ಈ ಕ್ಷಣದಿಂದಲೇ ರಾಜೀನಾಮೆ ನೀಡಿರುತ್ತೇನೆ ಎಂದು ಜಿಲ್ಲಾ ಅಧ್ಯಕ್ಷ ಸುದರ್ಶನ ಮೂಡುಬಿದ್ರೆ ಇವರಿಗೆ ರಾಜೀನಾಮೆ ಸಲ್ಲಿಸಿದ್ದೇನೆ ಎಂದು ವೆಂಕಟ್ ವಳಲಂಬೆ ತಿಳಿಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw