ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಧಾರಾಕಾರ ಮಳೆ: ಜನಜೀವನ ಅಸ್ತವ್ಯಸ್ತ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಗುರುವಾರವೂ ಧಾರಕಾರ ಮಳೆ ಮುಂದುವರಿದಿದ್ದು, ಮಳೆಯ ಹಿನ್ನೆಲೆಯಲ್ಲಿ ಇಂದು ಕೂಡ ಶಾಲೆಗಳಿಗೆ ರಜೆ ನೀಡಲಾಗಿದೆ. ನಿರಂತರ ಮಳೆಯಿಂದಾಗಿ ಜನ ಜೀವನ ಅಸ್ತವ್ಯಸ್ತವಾಗಿದ್ದು, ತಗ್ಗು ಪ್ರದೇಶಗಳಲ್ಲಿ ನೀರು ನಿಂತು ಸ್ಥಳೀಯ ಜನರಿಗೆ ತೊಂದರೆ ಸೃಷ್ಟಿಯಾಗಿದೆ.
ವಿವಿಧೆಡೆಗಳಲ್ಲಿ ಕೃಷಿ ತೋಟಗಳಿಗೆ ನೀರು ನುಗ್ಗಿದ ಪರಿಣಾಮ ಕೃಷಿಗೆ ತೀವ್ರ ಹಾನಿಯಾಗಿದ್ದು, ಮಂಗಳೂರು ನಗರದ ಹಲವೆಡೆಗಳಲ್ಲಿ ರಸ್ತೆಯಲ್ಲಿ ನೀರು ನಿಂತು ವಾಹನ ಸವಾರರಿಗೆ ಕಷ್ಟಕರವಾಗಿದೆ.
ಮಂಗಳೂರು ನಗರದ ನಂತೂರು ಸರ್ಕಲ್ ಬಳಿ ಟ್ರಾಫಿಕ್ ಜಾಮ್ ಉಂಟಾಗಿದ್ದು, ವಾಹನಗಳು ಸರತಿ ಸಾಲಿನಲ್ಲಿ ನಿಲ್ಲುವಂತಾಗಿತ್ತು. ಗುರುವಾರ ಬೆಳಗ್ಗೆ ಸ್ವಲ್ಪ ಬಿಡುವು ನೀಡಿದ್ದ ಮಳೆ, ಮತ್ತೆ ಆರಂಭವಾಗಿದ್ದು, ಧಾರಾಕಾರವಾಗಿ ಸುರಿಯುತ್ತಿದೆ.
ಇನ್ನೂ ನಗರದ ಪಿವಿಎಸ್, ಹಂಪನಕಟ್ಟೆ, ಲಾಲ್ ಬಾಗ್ ಮೊದಲಾದೆಡೆಗಳಲ್ಲಿ ಸಂಚಾರ ದಟ್ಟಣೆ ಕೂಡ ಕಂಡು ಬಂದಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ನಿರಂತರ ಮಳೆಯ ಹಿನ್ನೆಲೆಯಲ್ಲಿ ರೆಡ್ ಅಲಾರ್ಟ್ ಘೋಷಿಸಲಾಗಿದೆ. ನದಿ ಬದಿಯ ನಿವಾಸಿಗಳು ಎಚ್ಚರಿಕೆ ವಹಿಸಲು ಜಿಲ್ಲಾಡಳಿತ ಸೂಚನೆ ನೀಡಿದೆ.
ಮಂಗಳೂರು ಏರ್ಪೋರ್ಟ್ನ ರನ್ ವೇ ಬಳಿಯಿಂದಾಗಿ ಅದ್ಯಪಾಡಿಗೆ ತೆರಳುವ ರಸ್ತೆ ಕೊಚ್ಚಿ ಹೋಗಿದ್ದು, ಅದ್ಯಪಾಡಿ ಬಳಿ ಇರುವ ರನ್ ವೇ ಕುಸಿದ ಪರಿಣಾಮ ಅದ್ಯಪಾಡಿಯಿಂದ ಕೈ ಕಂಬ ಹೋಗುವ ರಸ್ತೆ ಬಂದ್ ಆಗಿದೆ. ಅದ್ಯಪಾಡಿ-ಕೈಕಂಬ ಸಂಪರ್ಕಿಸುವ ರಸ್ತೆ ಇದಾಗಿದ್ದು, ಕೆಲ ದಿನಗಳ ಹಿಂದೆಯೇ ಇಲ್ಲಿ ಮೋರಿ ಕುಸಿದಿತ್ತು. ಆ ಬಳಿಕ ರಸ್ತೆಯ ಎರಡೂ ಬದಿಗಳಲ್ಲಿ ಬ್ಯಾರಿಕೇಡ್ ಗಳನ್ನು ಅಳವಡಿಸಿ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು.
ಪಂಜಿಕಲ್ಲಿನಲ್ಲಿ ಶೆಡ್ ಮೇಲೆ ಗುಡ್ಡ ಕುಸಿದು ಮೂವರು ಕಾರ್ಮಿಕರು ನಿನ್ನೆ ಸಾವನ್ನಪ್ಪಿದ್ದರು. ಘಟನೆ ನಡೆದ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ವಿ.ಸುನಿಲ್‌ಕುಮಾರ್ ಮತ್ತು ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಅವರು ಭೇಟಿ ನೀಡಿ ಗುರುವಾರ ಪರಿಶೀಲಿಸಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka