ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾರೀ ಮಳೆ | ಜನ ಜೀವನ ಅಸ್ತವ್ಯಸ್ಥ
ದಕ್ಷಿಣಕನ್ನಡ: ಹವಾಮಾನ ಇಲಾಖೆ ಆರೆಂಜ್ ಅಲಾರ್ಟ್ ಘೋಷಿಸಿದ ಬೆನ್ನಲ್ಲೇ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾರೀ ಮಳೆಯಾಗುತ್ತಿದ್ದು, ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಮಂಗಳೂರು ಸೇರಿದಂತೆ ವಿವಿಧ ಭಾಗಗಳಲ್ಲಿ ಜನಜೀವನ ಅಸ್ತವ್ಯಸ್ಥವಾಗಿದೆ.
ಜಿಲ್ಲೆಯಲ್ಲಿ ನಿನ್ನೆಯವರೆಗೆ 24 ಗಂಟೆಗಳ ಅವಧಿಯಲ್ಲಿ 66.3 ಮಿ.ಮೀ. ಮಳೆಯಾಗಿದ್ದು, ಇಂದು ಮತ್ತೆ ಮಳೆ ಮುಂದುವರಿದೆ. ನಿನ್ನೆ ರಾತ್ರಿಯಿಂದ ಆರಂಭವಾಗಿರುವ ಮಳೆ ಬಿಟ್ಟೂ ಬಿಡದಂತೆ ನಿರಂತರವಾಗಿ ಸುರಿಯುತ್ತಿದೆ.
ಜಿಲ್ಲೆಯಾದ್ಯಂತ ವಿವಿಧಡೆ ಹಾನಿ ಸಂಭವಿಸಿದೆ ಎಂದು ಹೇಳಲಾಗಿದೆ. ಜಿಲ್ಲೆಯಲ್ಲಿ ಹರಿಯುತ್ತಿರುವ ನೇತ್ರಾವತಿ, ಕುಮಾರಧಾರ, ಫಲ್ಗುಣಿ ನದಿಗಳು ತುಂಬಿ ತುಳುಕುತ್ತಿವೆ. ಬಂಟ್ವಾಳದಲ್ಲಿ ನೇತ್ರಾವತಿ ನದಿ 5.1 ಮೀಟರ್, ಉಪ್ಪಿನಂಗಡಿಯಲ್ಲಿ 21 ಮೀಟರ್, ಗುಂಡ್ಯದಲ್ಲಿ 4.4 ಮೀಟರ್ ತುಂಬಿ ತುಳುಕುತ್ತಿದ್ದು, ಇಂದು ಸುರಿಯುತ್ತಿರುವ ಮಳೆಯಿಂದಾಗಿ ನೀರಿನ ಮಟ್ಟ ಇನ್ನಷ್ಟು ಹೆಚ್ಚಳವಾಗಬಹುದು ಎಂದು ಹೇಳಲಾಗಿದೆ.
ಇನ್ನೂ ಪಶ್ಚಿಮ ಘಟ್ಟದ ತಪ್ಪಲಿನಲ್ಲಿರುವ ಬೆಳ್ತಂಗಡಿ, ಕಡಬ, ಸುಳ್ಯ ತಾಲೂಕುಗಳಲ್ಲಿ ಕಳೆದ ಮೂರು ನಾಲ್ಕು ದಿನಗಳಲ್ಲಿ ಬಿರುಸಿನ ಮಳೆ ಮುಂದುವರಿದಿದೆ. ಇನ್ನೂ ಭಾರೀ ಮಳೆಯ ಹಿನ್ನೆಲೆಯಲ್ಲಿ ಸಮುದ್ರದಲ್ಲಿಯೂ ಅಲೆಗಳ ಅಬ್ಬರ ಕಂಡು ಬಂದಿದೆ.
ಇನ್ನೂ ಜುಲೈ 20ರಂದು ಕರಾವಳಿ ಭಾಗದಲ್ಲಿ ಆರೆಂಜ್ ಅಲಾರ್ಟ್ ಇರಲಿದ್ದು, ಸಾರ್ವಜನಿಕರು ಎಚ್ಚರಿಕೆಯಿಂದಿರುವುದು ಉತ್ತಮ. ದುಸ್ಥಿತಿಯಲ್ಲಿರುವ ಮನೆಗಳಲ್ಲಿರುವವರ ಸುರಕ್ಷತೆಗೆ ಜಿಲ್ಲಾಡಳಿತ ಮುಂದಾಗಬೇಕಿದೆ.