ಕರೆ ಮಾಡಬೇಕಾದರೆ ಗುಡ್ಡದ ತುದಿಗೆ ಹೋಗಬೇಕು | ಮೊಬೈಲ್ ಗೂ, ಜನಪ್ರತಿನಿಧಿಗಳಿಗೂ ನೆಟ್ ವರ್ಕೇ ಇಲ್ಲ!
ದಕ್ಷಿಣಕನ್ನಡ: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ನೆಟ್ ವರ್ಕ್ ಸಮಸ್ಯೆಯಿಂದ ಜನರು ಕಿರಿಕಿರಿ ಅನುಭವಿಸುತ್ತಿದ್ದು, ಗ್ರಾಮೀಣ ಪ್ರದೇಶದ ಜನರಿಗೆ ನೆಟ್ ವರ್ಕ್ ಸಮಸ್ಯೆ ಒಂದು ಪಿಡುಗಾಗಿ ಪರಿಣಮಿಸಿದೆ.
ಜಿಲ್ಲೆಯ ಬಂಟ್ವಾಳ ತಾಲೂಕಿನ ಬೋಳಂತೂರಿನಲ್ಲಿ ನೆಟ್ ವರ್ಕ್ ಸಮಸ್ಯೆಯಿಂದ ಜನರು ಸಂಕಷ್ಟಕ್ಕೀಡಾಗಿದ್ದಾರೆ. ಕರೆ ಮಾಡಲು ಕೂಡ ನೆಟ್ ವರ್ಕ್ ಸಿಗುತ್ತಿಲ್ಲ. ಯಾರಿಗಾದರೂ ಕರೆ ಮಾಡಬೇಕಾದರೆ ಇಲ್ಲಿಂದ 2-3 ಕಿ.ಮೀ. ದೂರದಲ್ಲಿರುವ ಗುಡ್ಡಕ್ಕೆ ಹೋಗಿ ಕರೆ ಮಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.
ಇನ್ನೂ ದಕ್ಷಿಣಕನ್ನಡ ಜಿಲ್ಲೆಯ ವಿವಿಧ ಭಾಗಗಳಲ್ಲಿ ನೆಟ್ ವರ್ಕ್ ನಿಂದ ತೀವ್ರ ತೊಂದರೆಯಾಗುತ್ತಿದ್ದರೂ, ಇಲ್ಲಿನ ಜನ ಪ್ರತಿನಿಧಿಗಳು ಮೌನವಹಿಸಿದ್ದಾರೆ. ಇತ್ತೀಚೆಗಷ್ಟೆ ಬೆಳ್ತಂಗಡಿಯ ನೆರಿಯ, ದೇವಗಿರಿ ಸುತ್ತಮುತ್ತಲಿನ ಪ್ರದೇಶದಲ್ಲಿಯೂ ಜನರು ನೆಟ್ ವರ್ಕ್ ಸಮಸ್ಯೆಯಿಂದ ತೊಂದರೆಗೀಡಾಗಿದ್ದಾರೆ ಎಂದು ಮಹಾನಾಯಕ ಮಾಧ್ಯಮ ವರದಿ ಮಾಡಿತ್ತು. ವಿದ್ಯಾರ್ಥಿಗಳ ಆನ್ ಲೈನ್ ಕ್ಲಾಸ್ ಗಳಿಗೆ ಕೂಡ ಇಲ್ಲಿ ತೀವ್ರವಾದ ತೊಂದರೆಯಾಗುತ್ತಿದೆ. ಆದರೆ, ಈ ಬಗ್ಗೆ ಜನರ ಸಮಸ್ಯೆ ಪರಿಹರಿಸಲು ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸಂಪೂರ್ಣವಾಗಿ ವಿಫಲವಾಗಿದ್ದಾರೆ.
ಕೊವಿಡ್ 19 ನಂತಹ ಗಂಭೀರ ಸಮಸ್ಯೆಗಳ ಜೊತೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆಗಾಲದ ಸಂದರ್ಭದಲ್ಲಿ ಡೆಂಗ್ಯು, ಮಲೇರಿಯಾಗಳು ಸಾಮಾನ್ಯವಾಗಿದೆ. ಇಂತಹ ಸಂದರ್ಭದಲ್ಲಿ ತುರ್ತಾಗಿ ಆಂಬುಲೆನ್ಸ್ ಗೆ ಕರೆ ಮಾಡಬೇಕಾದರೂ ಗುಡ್ಡಗಾಡಿಗೆ ನಡೆದುಕೊಂಡು ಹೋಗಬೇಕಾದ ಪರಿಸ್ಥಿತಿ ಸೃಷ್ಟಿಯಾಗಿದೆ.
ದಕ್ಷಿಣಕನ್ನಡ ಜಿಲ್ಲೆಯಲ್ಲಿ ಯಾರಾದರೂ ಜನಪ್ರತಿನಿಧಿಗಳು ಇದ್ದರೆ, ಈ ಸಮಸ್ಯೆಗಳನ್ನು ಆಲಿಸಿ ಎಂದು ಜನರು ರೋಸಿಹೋಗಿ ಕೇಳುತ್ತಿದ್ದಾರೆ. ಸಂಬಂಧಪಟ್ಟ ಇಲಾಖೆಗಳ ಜೊತೆಗೆ ಮಾತನಾಡಿ ಈ ಸಮಸ್ಯೆಯನ್ನು ಜನಪ್ರತಿನಿಧಿಗಳು ಮಾಡಬಹುದು. ಆದರೆ, ಇವರು ಈ ಇಚ್ಛಾಶಕ್ತಿ ತೋರಿಸುತ್ತಿಲ್ಲ ಎನ್ನುವ ಆಕ್ರೋಶಗಳು ಕೇಳಿ ಬಂದಿವೆ.