ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಶೈಕ್ಷಣಿಕ ಸಮಾವೇಶ: ಸಚಿವ ಬಿ.ಸಿ.ನಾಗೇಶ್, ವೀರೇಂದ್ರ ಹೆಗಡೆ ಭಾಗಿ
ಬೆಳ್ತಂಗಡಿ: ಉತ್ತಮ ಚಾರಿತ್ರ್ಯವಿಲ್ಲದ ಶಿಕ್ಷಣ ಪರಿಮಳವಿಲ್ಲದ ಹೂವಿನಂತೆ ವ್ಯರ್ಥ. ಶಿಕ್ಷಕರು ಅಧ್ಯಯನ ಶೀಲತೆಯನ್ನು ಬೆಳೆಸಿಕೊಂಡು ಸಾಧಕರನ್ನು ರೂಪಿಸುವ ಕಾರ್ಯವನ್ನು ಮಾಡಬೇಕು, ಪ್ರತಿಭೆಯ ವಿಕಸನದೊಂದಿಗೆ ಆದರ್ಶ ವ್ಯಕ್ತಿತ್ವ ನಿರ್ಮಾಣವೇ ಶಿಕ್ಷಣದ ಗುರಿಯಾಗಬೇಕು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.
ಅವರು ಶುಕ್ರವಾರ ಉಜಿರೆಯಲ್ಲಿ ಸಿದ್ಧವನ ಗುರುಕುಲದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪದವಿಪೂರ್ವ ಕಾಲೇಜುಗಳ ಪ್ರಾಚಾರ್ಯರ ಸಂಘದ ಆಶ್ರಯದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಶೈಕ್ಷಣಿಕ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.
ಇಂದು ಎಲ್ಲರಿಗೂ ಸಾಧನೆ ಮಾಡಲು ಸಮಾನ ಅವಕಾಶಗಳಿವೆ. ಶ್ರೀ ಸಾಮಾನ್ಯರ ಮಕ್ಕಳು ಕೂಡಾ ಉತ್ತಮ ಸಾಧನೆಯಿಂದ ಉನ್ನತ ಮಟ್ಟದ ಅಧಿಕಾರಿಗಳಾಗಿ ಸ್ಥಾನ-ಮಾನ ಪಡೆಯಬಹುದು. ಸಂಸ್ಕಾರಯುತ ಶಿಕ್ಷಣ ಇಂದು ಅನಿವಾರ್ಯವಾಗಿದೆ.
ವಿದ್ಯಾರ್ಥಿಗಳ ಬೌದ್ಧಿಕ ಬೆಳವಣಿಗೆಗೆ ಇಂದು ವಿಫುಲ ಅವಕಾಶಗಳಿವೆ. ಇಂದಿನ ವಿದ್ಯಾರ್ಥಿಗಳನ್ನು ಎದುರಿಸಲು ಉಪನ್ಯಾಸಕರು ನಿರಂತರ ಅಧ್ಯಯನಶೀಲರಾಗಿ ಜ್ಞಾನ ತುಂಬಿದ ಕೊಡಗಳಾದರೆ ಮಾತ್ರ ವಿದ್ಯಾರ್ಥಿಗಳಿಗೆ ಸರಿಯಾದ ವಿಚಾರಗಳನ್ನು ನೀಡಲು ಸಾಧ್ಯವಿದೆ ಎಂದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪಾಠ-ಪ್ರವಚನಗಳ ಗುಣಮಟ್ಟ ಹಾಗೂ ವಿದ್ಯಾರ್ಥಿಗಳ ಉನ್ನತ ಸಾಧನೆ ಬಗ್ಯೆ ಹೆಗ್ಗಡೆಯವರು ಮೆಚ್ಚುಗೆ ವ್ಯಕ್ತ ಪಡಿಸಿ ಎಲ್ಲರನ್ನೂ ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಂಶುಪಾಲರುಗಳು ಮತ್ತು ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಹಾಗೂ ಉಪನ್ಯಾಸಕರುಗಳನ್ನು ಗೌರವಿಸಿ ಮಾತನಾಡಿದ ರಾಜ್ಯ ಸರಕಾರದ ಶಿಕ್ಷಣ ಸಚಿವ ಬಿ.ಸಿ. ನಾಗೇಶ್, ರಾಷ್ಟ್ರೀಯ ಶಿಕ್ಷಣ ನೀತಿಯ ಬಗ್ಗೆ ಚಿಂತನ-ಮಂಥನ ಹಾಗೂ ಪರಿಶೀಲನೆಗಳು ನಡೆಯುತ್ತಿದ್ದು, ಯಾವುದೇ ವರ್ಗದ ಶಿಕ್ಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಅನ್ಯಾಯವಾಗದಂತೆ ಇದನ್ನು ಅನುಷ್ಠಾನಗೊಳಿಸಲಾಗುವುದು ಎಂದರು.
ಹೊಸ ಶಿಕ್ಷಣ ನೀತಿ ಬಗ್ಯೆ ಹೆಚ್ಚಿನ ಜನರು ಒಲವು ತೋರುತ್ತಿದ್ದು 2030 ರೊಳಗೆ ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನಗೊಳ್ಳುವ ಸಾಧ್ಯತೆ ಇದೆ ಎಂದು ಸಚಿವರು ಅಭಿಪ್ರಾಯ ವ್ಯಕ್ತ ಪಡಿಸಿದರು. ಇಂದಿನ ಶಿಲ್ಷಣ ಉದ್ಯೋಗಗಳನ್ನು ಪಡೆಯಲು ಅವಕಾಶವೊದಗಿಸುತ್ತಿದೆ ಆದರೆ ಸಾದ್ಯವಾಗುತ್ತಿಲ್ಲ ಆದ್ದರಿಂದ ಹೊಸ ಶಿಕ್ಷಣ ನೀತಿ ಬರಬೇಕಾಗಿದೆ ಎಂದರು
ಅಧ್ಯಕ್ಷತೆ ವಹಿಸಿದ ಮೂಡಬಿದ್ರೆಯ ಡಾ. ಎಂ. ಮೋಹನ ಆಳ್ವ ಮಾತನಾಡಿ, ಶಿಕ್ಷಣ ಕ್ಷೇತ್ರದಲ್ಲಿ ವ್ಯಾಪಾರೀ ಮನೋಭಾವ ನಿವಾರಣೆಯಾಗಬೇಕು. ಮಾನವೀಯ ಮೌಲ್ಯಗಳೊಂದಿಗೆ ಜೀವನದ ಸವಾಲುಗಳನ್ನು ಧೈರ್ಯ ಮತ್ತು ಆತ್ಮವಿಶ್ವಾಸದಿಂದ ಎದುರಿಸುವ ಸಾಮರ್ಥ್ಯ ಬೆಳೆಸುವ ಶಿಕ್ಷಣ ನೀಡಬೇಕು ಎಂದು ಸಲಹೆ ನೀಡಿದರು.
ಶಿಕ್ಷಣ ಸಚಿವರು ಸರ್ಕಾದ ಪರವಾಗಿ ಹೆಗ್ಗಡೆಯವರನ್ನು ಗೌರವಿಸಿದರು. ಪದವಿಪೂರ್ವ ಶಿಕ್ಷಣ ಇಲಾಖೆಯ ಜಿಲ್ಲಾ ಉಪನಿರ್ದೇಶಕ ಸಿ.ಡಿ. ಜಯಣ್ಣ, ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಎಸ್. ಸತೀಶ್ಚಂದ್ರ, ಎಸ್.ಡಿ.ಎಂ. ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರೊ. ದಿನೇಶ್ ಚೌಟ ಉಪಸ್ಥಿತರಿದ್ದರು
ಪ್ರಾಚಾರ್ಯರ ಸಂಘದ ಅಧ್ಯಕ್ಷ ಕೆ.ಎಸ್. ಗಂಗಾಧರ ಆಳ್ವ ಸ್ವಾಗತಿಸಿದರು ಉಜಿರೆಯ ಮಹಾವೀರ ಜೈನ್ ಮತ್ತು ದೀಕ್ಷಿತ್ ರೈ ಕಾರ್ಯಕ್ರಮ ನಿರ್ವಹಿಸಿದರು.
ಈ ಸಂದರ್ಭದಲ್ಲಿ ಜಿಲ್ಲೆಯಲ್ಲಿ ನಿವೃತ್ತರಾದ 18 ಮಂದಿ ಪ್ರಾಂಶುಪಾಲರುಗಳನ್ನು ಸನ್ಮಾನಿಸಲಾಯಿತು.
ಕನ್ಯಾಡಿ ಶಾಲೆಗೆ ಭೇಟಿ ನೀಡಿದ ಶಿಕ್ಷಣ ಸಚಿವರು
ಧರ್ಮಸ್ಥಳ ಗ್ರಾಮದ ಕನ್ಯಾಡಿಯಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆಗೆ ಶುಕ್ರವಾರ ಭೇಟಿ ನೀಡಿದ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಶಾಲೆಯ ಚಟುವಟಿಕೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಉನ್ನತ ಸಾಧನೆ ಮಾಡಿದ ವಿದ್ಯಾರ್ಥಿನಿ ಶೌರ್ಯ ಅವರನ್ನು ಸಚಿವರು ಗೌರವಿಸಿ ಅಭಿನಂದಿಸಿದರು.ಈ ವೇಳೆ ಕ್ಷೇತ್ರ ಶಿಕ್ಷಣಾಧಿಕಾರಿ ವಿರೂಪಾಕ್ಷ, ಶಾಲಾ ಮುಖ್ಯೋಪಾಧ್ಯಾಯಿನಿ ಫ್ಲೇವಿಯಾ ಡಿ’ಸೋಜಾ, ಧರ್ಮಸ್ಥಳ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಶ್ರೀನಿವಾಸ ರಾವ್, ರಾಜೇಂದ್ರ ಅಜ್ರಿ ಉಪಸ್ಥಿತರಿದ್ದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka