ದಕ್ಷಿಣ ಕನ್ನಡದಲ್ಲಿ ಕಟ್ಟುನಿಟ್ಟಿನ ಕ್ರಮ: ತೀವ್ರ ಸಂಕಷ್ಟದಲ್ಲಿ ಸಿಲುಕಿದ ಕೂಲಿ ಕಾರ್ಮಿಕರು
ದಕ್ಷಿಣಕನ್ನಡ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದಿನಿಂದ ಕಟ್ಟುನಿಟ್ಟಿನ ಕ್ರಮ ಜಾರಿಯಾಗಿದ್ದು, ಇದೇ ಸಂದರ್ಭದಲ್ಲಿ ನಿರ್ಮಾಣ ಚಟುವಟಿಕೆಗಳನ್ನು ಕೂಡ ನಿರ್ಬಂಧಿಸಿರುವ ಹಿನ್ನೆಲೆಯಲ್ಲಿ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ನಿನ್ನೆ ರಾತ್ರಿಯಿಂದಲೇ ಕಟ್ಟುನಿಟ್ಟಿನ ಕ್ರಮಕ್ಕಾಗಿ ಪೊಲೀಸರು ಸರ್ಪಗಾವಲು ಹಾಕಿದ್ದಾರೆ. ಇದೇ ಸಂದರ್ಭದಲ್ಲಿ ಜಿಲ್ಲೆಯ ವಿವಿಧೆಡೆಗಳಲ್ಲಿ ಕೂಲಿ ಕಾರ್ಮಿಕರು ಕೆಲಸಕ್ಕೆ ಹೇಗೆ ಹೋಗುವುದು ಎನ್ನುವ ಆತಂಕದಲ್ಲಿದ್ದಾರೆ. ಜಿಲ್ಲಾಡಳಿತವು ಕೂಲಿ ಕಾರ್ಮಿಕರ ಮೇಲಿನ ನಿರ್ಬಂಧವನ್ನು ಸಡಿಲಿಸಬೇಕು. ಇಲ್ಲವಾದರೆ, ಕಟ್ಟಡ ನಿರ್ಮಾಣ ಮೊದಲಾದ ಕೆಲಸಗಳಲ್ಲಿ ತೊಡಗಿರುವ ಸಾವಿರಾರು ಕಾರ್ಮಿಕರು ಸಂಕಷ್ಟಕ್ಕೀಡಾಗಲಿದ್ದು, ಅವರ ಕುಟುಂಬದ ಪರಿಸ್ಥಿತಿ ಏನು ಎನ್ನುವ ಪ್ರಶ್ನೆಗಳು ಕೇಳಿ ಬಂದಿವೆ.
ಕೊರೊನಾ ನಿಯಂತ್ರಣ ಅಗತ್ಯ ನಿಜ, ಆದರೆ ಜನರು ಹಸಿವಿನಿಂದ ಸಾಯುವಂತಹ ಪರಿಸ್ಥಿತಿಯನ್ನು ಜಿಲ್ಲಾಡಳಿತ ನಿರ್ಮಾಣ ಮಾಡಬಾರದು. ಪ್ರತಿ ದಿನ ಕೆಲಸ ಮಾಡಿದರೆ ಮಾತ್ರವೇ ಜೀವಿಸಲು ಸಾಧ್ಯ ಎನ್ನುವ ಕುಟುಂಬಗಳು ಜಿಲ್ಲೆಯಲ್ಲಿವೆ. ಸರ್ಕಾರದ 2 ಕೆ.ಜಿ. ಅಕ್ಕಿಯಲ್ಲಿ ಜೀವನ ಸಾಗಿಸಲು ಸಾಧ್ಯವಿಲ್ಲ. ಒಂದೋ ಜಿಲ್ಲಾಡಳಿತ ಕಾರ್ಮಿಕರ ಕುಟುಂಬಗಳಿಗೆ ತಿಂಗಳಿ ಕನಿಷ್ಠ 10 ಸಾವಿರ ರೂಪಾಯಿ ಪರಿಹಾರ ನೀಡಬೇಕು. ಇಲ್ಲವಾದರೆ, ಕಾರ್ಮಿಕರಿಗೆ ಹಾಕಲಾಗಿರುವ ನಿರ್ಬಂಧವನ್ನು ತೆಗೆದು ಹಾಕಬೇಕು ಎನ್ನುವ ಒತ್ತಾಯಗಳು ಕೇಳಿ ಬಂದಿವೆ.
ನಿನ್ನೆ ನಡೆದ ಸಭೆಯ ಬಳಿಕ ದ.ಕ. ಜಿಲ್ಲಾಡಳಿತ ಬಿಡುಗಡೆ ಮಾಡಲಾಗಿರುವ ಮಾರ್ಗಸೂಚಿಯಲ್ಲಿ “ಯಾವುದೇ ನಿರ್ಮಾಣ ಚಟುವಟಿಕೆಗಳಿಗೆ ಅವಕಾಶವಿರುವುದಿಲ್ಲ. ಆದಾಗ್ಯೂ ನಿರ್ಮಾಣ ಚಟುವಟಿಕೆಗಳು ನಡೆಯುವ ಸ್ಥಳದಲ್ಲಿಯೇ ಕಾರ್ಮಿಕರು ಲಭ್ಯವಿದ್ದು, ಹೊರಗಿನ ಪ್ರದೇಶಗಳಿಂದ ಕಾರ್ಮಿಕರನ್ನು ಕರೆತರುವ ಅಗತ್ಯಯಿಲ್ಲದಿದ್ದಲ್ಲಿ ಅಂತಹ ನಿರ್ಮಾಣ ಕಾರ್ಯಗಳನ್ನು ನಡೆಸಬಹುದು ಎಂದು ಹೇಳಲಾಗಿದೆ. ಆದರೆ, ವಿವಿಧ ತಾಲೂಕುಗಳ ಪರಿಸ್ಥಿತಿಯನ್ನು ಗಮನಿಸಿದರೆ, ಗ್ರಾಮಗಳಿಂದ ನಗರ ಪ್ರದೇಶಗಳಿಗೆ ಬಂದು ಕೆಲಸಕ್ಕೆ ತೆರಳುವ ಕಾರ್ಮಿಕರಿಗೆ ಇದು ದೊಡ್ಡ ಪೆಟ್ಟು ನೀಡಿದಂತಾಗಿದೆ. ಕೊರೊನಾ ಸಂದರ್ಭದಲ್ಲಿ ಕಾರ್ಮಿಕರನ್ನು ನಿರ್ಬಂಧಿಸುವ ಕ್ರಮವನ್ನು ಜಿಲ್ಲಾಡಳಿತ ಕೂಡಲೇ ಕೈ ಬಿಡುವ ಮೂಲಕ ಕಾರ್ಮಿಕರ ಪರವಾಗಿ ಜಿಲ್ಲಾಡಳಿತ ನಿಲ್ಲ ಬೇಕು ಎನ್ನುವ ಅಭಿಪ್ರಾಯಗಳು ಕೇಳಿ ಬಂದಿವೆ.