ಮಳೆ ಅನಾಹುತ: ನದಿಗೆ ಬಿದ್ದ ವ್ಯಕ್ತಿ ನೀರುಪಾಲು, ಚರಂಡಿಗೆ ಬಿದ್ದು ವ್ಯಕ್ತಿ ಸಾವು
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಮಳೆ ಪರಿಣಾಮ ಬಿ.ಸಿ.ರೋಡು ನಗರ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ವ್ಯಕ್ತಿಯೋರ್ವ ನೀರುಪಾಲಾಗಿದ್ದರೆ, ಜಿಲ್ಲೆಯ ವಿಟ್ಲದಲ್ಲಿ ಚರಂಡಿಗೆ ಬಿದ್ದ ವ್ಯಕ್ತಿಯೋರ್ವ ಸಾವನ್ನಪ್ಪಿದ ಘಟನೆ ನಡೆದಿದೆ.
ಕೆಲಸ ಮುಗಿಸಿ ಕೈ ಕಾಲು ತೊಳೆಯಲು ಎಂದು ನೇತ್ರಾವತಿ ನದಿಗೆ ಇಳಿದ ವ್ಯಕ್ತಿಯೋರ್ವ ಆಯತಪ್ಪಿ ನದಿಗೆ ಬಿದ್ದು ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ನಾಪತ್ತೆಯಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಿ.ಸಿ.ರೋಡು ನಗರ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಛತ್ತೀಸ್ ಘಡ್ ರಾಜ್ಯ ದ ಬಸ್ತರ ಜಿಲ್ಲೆಯ ಬಡ್ಡೆಬಂದಮ ಗ್ರಾಮದ ಜಮ್ಮವಾಡ ನಿವಾಸಿ ಆನಂದ ಕಶ್ಯಪ (28), ಕಾಣೆಯಾದ ವ್ಯಕ್ತಿ. ಕಳೆದ ಒಂದು ತಿಂಗಳಿನಿಂದ ಬಂಟ್ವಾಳ ರೈಲ್ವೆ ಸ್ಟೇಷನ್ ನ ಪಕ್ಕದಲ್ಲಿ ರೈಲ್ವೆ ವಿದ್ಯುದೀಕರಣ ಕಾಮಗಾರಿ ನಡಿತಿದೆ. ಜೊತೆಯಲ್ಲಿ ಛತ್ತೀಸ್ ಘಡ್ ಮೂಲದ ಕೆಲಸಗಾರರು ಇದ್ದರು. ಆನಂದ ಕಶ್ಯಪ ಅವರು ಕೆಲಸ ಮುಗಿಸಿ ಬಳಿಕ ಅಲ್ಲೇ ಸಮೀಪ ನೇತ್ರಾವತಿ ನದಿಗೆ ಕೈಕಾಲು ತೊಳೆಯುವ ಉದ್ದೇಶದಿಂದ ನೀರಿಗೆ ಇಳಿದ ವೇಳೆ ಆಯ ತಪ್ಪಿ ನದಿಗೆ ಬಿದ್ದು ಬೊಬ್ಬೆ ಹೊಡೆದಾಗ ಆತನೊಂದಿಗೆ ಇತರ ಕೆಲಸಗಾರರು ಓಡಿ ಹೋಗಿ ನೋಡಿದಾಗ ಆತ ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ಕಾಣೆಯಾಗಿದ್ದಾನೆ ಎಂದು ನಗರ ಪೋಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಚರಂಡಿಗೆ ಬಿದ್ದು ಚಂದಳಿಕೆ ನಿವಾಸಿ ಸಾವು
ಚರಂಡಿಯ ನೀರಿಗೆ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿ ಬಂದಿದೆ. ಮೃತರನ್ನು ಚಂದಳಿಕೆ ನಿವಾಸಿ ಪಕ್ರು ಎಂದು ಗುರುತಿಸಲಾಗಿದೆ. ಇವರ ಮೃತದೇಹ ವಿಟ್ಲ ನಾಲ್ಕು ಮಾರ್ಗ ಜಂಕ್ಷನ್ ಬಳಿ ವಿಟ್ಲ- ಕಾಸರಗೋಡು ಮುಖ್ಯ ರಸ್ತೆಯಲ್ಲಿನ ತೆರೆದ ಸ್ಥಿತಿಯಲ್ಲಿದ್ದ ಚರಂಡಿಗೆ ಮಲಗಿದ ಬಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಮದ್ಯಪಾನದ ಅಮಲಿನಲ್ಲಿ ನಿಯಂತ್ರಣ ಕಳೆದುಕೊಂಡ ಪಕ್ರು ಸ್ಲ್ಯಾಬ್ ತೆರೆದ ಸ್ಥಿತಿಯಲ್ಲಿದ್ದ ಚರಂಡಿಗೆ ಆಕಸ್ಮಿಕವಾಗಿ ಬಿದ್ದಿರಬಹುದೆಂದು ಶಂಕಿಸಲಾಗಿದೆ. ಚರಂಡಿಯಲ್ಲಿ ಮಳೆ ನೀರು ತುಂಬಿದ್ದು, ಕವುಚಿ ಬಿದ್ದ ಪರಿಣಾಮ ಮುಖ ನೀರಿನಲ್ಲಿ ಮುಳುಗಿ ಉಸಿರುಗಟ್ಟಿ ಸಾವನ್ನಪ್ಪಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka