ದಳಪತಿ-ಸೇತುಪತಿ ವಿಜಯ | ಕೊರೊನಾ ನಡುವೆ ದಾಖಲೆ ಬರೆದ ‘ಮಾಸ್ಟರ್’
ತಮಿಳು ನಟರಾದ ದಳಪತಿ ವಿಜಯ್ ಹಾಗೂ ವಿಜಯ್ ಸೇತುಪತಿ ಅಭಿನಯದ ಮಾಸ್ಟರ್ ಸಿನಿಮಾ ದಾಖಲೆ ಬರೆದಿದ್ದು, ಕೊರೊನಾ ಭೀತಿಯಿಂದ ಶೇ.50ರಷ್ಟು ಆಸನಗಳಿಗೆ ಮಾತ್ರವೇ ಅವಕಾಶ ನೀಡಿದ್ದರೂ, ಚಿತ್ರ ಗೆಲುವಿನ ನಗೆ ಬೀರಿದೆ.
ಕೊರೊನಾ ಹಿನ್ನೆಲೆಯಲ್ಲಿ ಚಿತ್ರಕ್ಕೆ ಜನರ ರೆಸ್ಪಾನ್ಸ್ ಹೇಗಿರುತ್ತದೆ ಎನ್ನುವ ಭಯ ಚಿತ್ರತಂಡಕ್ಕಿತ್ತು. ಆದರೆ, ಇಬ್ಬರು ದೈತ್ಯ ಕಲಾವಿದರ ಸಂಗಮದ ಮಾಸ್ಟರ್ ಚಿತ್ರನ್ನು ಜನರು ಅದ್ದೂರಿಯಾಗಿ ಸ್ವಾಗತಿಸಿದ್ದಾರೆ.
ತಮಿಳುನಾಡು, ಆಂಧ್ರ-ತೆಲಂಗಾಣ, ಕೇರಳ ಸೇರಿದಂತೆ ಹಲವು ರಾಜ್ಯಗಳು ಹಾಗೂ ವಿದೇಶದ ಹಲವು ದೇಶಗಳಲ್ಲಿ ಮಾಸ್ಟರ್ ಸಿನಿಮ ರಿಲೀಸ್ ಆಗಿದ್ದು, ರಿಲೀಸ್ ಆದ ಎಲ್ಲ ಪ್ರದೇಶಗಳಲ್ಲಿಯೂ ಯಶಸ್ಸುಗಳಿಸಿದ್ದು, ಭರ್ಜರಿ ಕಲೆಕ್ಷನ್ ಮಾಡಿದೆ.
ತಮಿಳುನಾಡಿನಲ್ಲಿ ಚಿತ್ರವು ಒಂದು ದಿನದಲ್ಲಿ 23ರಿಂದ 27 ಕೋಟಿ ರೂಪಾಯಿ ಗಳಿಸಿದೆ. ಲಾಕ್ ಡೌನ್ ಗಿಂತ ಮೊದಲು ಬಿಡಿಗಡೆಯಾಗಿದ್ದ ವಿಜಯ್ ಅವರ ಚಿತ್ರ ಸರ್ಕಾರ್ ಮೊದಲ ದಿನ 32 ಕೋಟಿ ಗಳಿಸಿತ್ತು. ಬಿಗಿಲ್ 26.5 ಕೋಟಿ ಗಳಿಸಿತ್ತು. ಮೆರ್ಸೆಲ್ 23.5 ಕೋಟಿ ಗಳಿಸಿತ್ತು. ಆದರೆ, ಕೊರೊನಾ ಸಂಕಷ್ಟದ ನಡುವೆಯೇ ‘ಮಾಸ್ಟರ್’ ಚಿತ್ರ 23ರಿಂದ 27 ಕೋಟಿ ಗಳಿಸಿ ದಾಖಲೆ ಬರೆದಿದೆ.
ಕರ್ನಾಟಕದಲ್ಲಿಯೂ ಮಾಸ್ಟರ್ ಚಿತ್ರಕ್ಕೆ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಮೊದಲ ದಿನ ಕರ್ನಾಟಕದಲ್ಲಿ ಮಾಸ್ಟರ್ 3 ಕೋಟಿ ರೂ.ಗಳಿಸಿದೆ. ಆಂಧ್ರ ಮತ್ತು ತೆಲಂಗಾಣದಲ್ಲಿ 4.5 ಕೋಟಿಯಿಂದ 5 ಕೋಟಿ ವರೆಗೆ ಗಳಿಸಿದೆ.