ಬಾಕಿ ಸಂಬಳ ಕೇಳಿದ ದಲಿತ ಯುವಕನನ್ನು ಸಜೀವವಾಗಿ ಸುಟ್ಟು ಮೃತದೇಹ ಫ್ರೀಜರ್ ನಲ್ಲಿಟ್ಟ ಬಾರ್ ಗುತ್ತಿಗೆದಾರರು
ಅಲ್ವಾರ್: ಬಾರ್ ನಲ್ಲಿ ಸೇಲ್ಸ್ ಮ್ಯಾನ್ ಆಗಿ ದುಡಿಯುತ್ತಿದ್ದ ದಲಿತ ಯುವಕ, ಸಂಬಳ ಕೇಳಿದನೆಂಬ ಕಾರಣಕ್ಕೆ ಆತನನ್ನು ಜೀವಂತವಾಗಿ ಸುಟ್ಟು ಹತ್ಯೆ ಮಾಡಿರುವ ಘಟನೆ ರಾಜಸ್ಥಾನದ ಅಲ್ವಾರ್ ನಲ್ಲಿ ನಡೆದಿದೆ.
ಕಮಲ್ ಕಿಶೋರ್ ಎಂಬ ದಲಿತ ಯುವಕ ಭೀಕರವಾಗಿ ಹತ್ಯೆಗೀಡಾಗಿದ್ದಾನೆ. ಹತ್ಯೆಯ ಬಳಿಕ ಬಾರ್ ಗುತ್ತಿಗೆದಾರರು ಮೃತದೇಹವನ್ನು ಮದ್ಯದಂಗಡಿಯಲ್ಲಿದ್ದ ಆಳವಾದ ಫ್ರೀಜರ್ ನಲ್ಲಿಟ್ಟಿದ್ದರು ಎನ್ನುವುದು ಪೊಲೀಸರ ತನಿಖೆಯಿಂದ ತಿಳಿದು ಬಂದಿದೆ.
ಸಂತ್ರಸ್ತ ದಲಿತ ಯುವಕ ಕಮಲ್ ಕಿಶೋರ್ ಗೆ 5 ತಿಂಗಳ ಸಂಬಳವನ್ನು ಗುತ್ತಿಗೆದಾರರಾದ ಸುಭಾಷ್ ಮತ್ತು ರಾಕೇಶ್ ಯಾದವ್ ಅವರಿಂದ ಕೇಳಿದ್ದಾನೆ. ಬಾಕಿ ಕೇಳಿದ ಕಾರಣಕ್ಕೆ ಯುವಕನನ್ನು ಇಬ್ಬರೂ ಜೀವಂತವಾಗಿ ಸುಟ್ಟು ಹಾಕಿದ್ದಾರೆ ಎಂದು ಕಮಲ್ ಕಿಶೋರ್ ನ ಸಹೋದರ ರೂಪ್ ಸಿಂಗ್ ಖೈರ್ಥಾಲ್ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಕಮಲ್ ಕಿಶೋರ್ ಗೆ ಐದು ತಿಂಗಳ ಸಂಬಳ ಬಾಕಿ ಇತ್ತು. ಸಂಬಳ ಕೇಳಿದ ಬಳಿಕ ಶನಿವಾರ ಗುತ್ತಿಗೆದಾರ ಹಾಗೂ ಇನ್ನೋರ್ವ ಮನೆಗೆ ಬಂದು ಕಮಲ್ ಕಿಶೋರ್ ನನ್ನು ಅವರ ಮನೆಗೆ ಕರೆದುಕೊಂಡು ಹೋಗಿದ್ದರು. ರಾತ್ರಿ ಕಮಲ್ ಕಿಶೋರ್ ಗೆ ಮದ್ಯದಂಗಡಿಯಲ್ಲಿದ್ದಾಗ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲಾಗಿದೆ ಎಂದು ರೂಪ್ ಸಿಂಗ್ ಆರೋಪಿಸಿದ್ದಾರೆ.
ಭಾನುವಾರ ಫ್ರೀಜರ್ ನೊಳಗೆ ಕಮಲ್ ಕಿಶೋರ್ ನ ಮೃತದೇಹ ಪತ್ತೆಯಾಗಿತ್ತು. ಇನ್ನೂ ಈ ಘಟನೆಯನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು ಎಂದ ಕುಟುಂಬವು ಒತ್ತಾಯಿಸಿದೆ. ಆದರೆ ಮರಣೋತ್ತರ ಪರೀಕ್ಷೆ ನಡೆಸಲು ನಿರಾಕರಿಸಲಾಗಿತ್ತು. ಆ ಬಳಿಕ ಸುದೀರ್ಘ ಹೋರಾಟ ನಡೆಸಿದ ಬಳಿಕ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ಹಸ್ತಾಂತರಿಸಲಾಗಿದೆ ಎಂದು ಕುಟುಂಬಸ್ಥರು ಹೇಳಿದ್ದಾರೆ.
ಮಹಾನಾಯಕ ಟೆಲಿಗ್ರಾಮ್ ಗ್ರೂಪ್ ಗೆ ಜಾಯಿನ್ ಆಗಿ
https://t.me/joinchat/Q8oMxBZkakVUy7-VpEsIXQ
ನಿಮ್ಮ ಸುದ್ದಿಗಳನ್ನು ಕಳುಹಿಸಿ: mahanayakain@gmail.com