ಹೇಯ ಕೃತ್ಯ: ಉತ್ತರಪ್ರದೇಶದಲ್ಲಿ ದಲಿತ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ, ಇಬ್ಬರ ಬಂಧನ
ಉತ್ತರ ಪ್ರದೇಶದ ಫತೇಪುರದಲ್ಲಿ 15 ವರ್ಷದ ದಲಿತ ಬಾಲಕಿಯ ಮೇಲೆ ಆಕೆಯ ಗ್ರಾಮದ ಇಬ್ಬರು ಅತ್ಯಾಚಾರ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ದಯಾಶಂಕರ್ ಮತ್ತು ಶಮಿ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅವರು ಹೇಳಿದರು.
ಬಾಲಕಿ ಕೆಲವು ದಿನಗಳ ಹಿಂದೆ ಕಾನ್ಪುರದ ಹಳ್ಳಿಯಲ್ಲಿರುವ ತನ್ನ ಸಹೋದರಿಯ ಮನೆಗೆ ಹೋಗಿದ್ದಳು. ದಯಾಶಂಕರ್ ಮತ್ತು ಶಮಿ ಮಂಗಳವಾರ ಗ್ರಾಮಕ್ಕೆ ಹೋಗಿ ಬುಧವಾರ ಬಾಲಕಿಯನ್ನು ಕರೆದುಕೊಂಡು ಹೋಗಿದ್ದರು ಎಂದು ಚಂದ್ಪುರದ ಸ್ಟೇಷನ್ ಹೌಸ್ ಆಫೀಸರ್ (ಎಸ್ಎಚ್ಒ) ಅನಿರುದ್ಧ್ ದುಬೆ ತಿಳಿಸಿದ್ದಾರೆ.
ದಾರಿಯಲ್ಲಿ ಆರೋಪಿಗಳು ಫತೇಪುರದ ಜೆಹಾನಾಬಾದ್ ಪ್ರದೇಶದ ಐಟಿಐ ಕಾಲೇಜಿನ ಬಳಿ ತಮ್ಮ ಮೋಟಾರ್ ಸೈಕಲನ್ನು ನಿಲ್ಲಿಸಿ, ಬಾಲಕಿಯನ್ನು ಹೊಲಕ್ಕೆ ಎಳೆದೊಯ್ದು ಅತ್ಯಾಚಾರ ಎಸಗಿದ್ದಾರೆ. ನಂತರ, ಅವರು ಅವಳನ್ನು ಮನೆಗೆ ಬಿಟ್ಟರು ಎಂದು ದುಬೆ ಹೇಳಿದರು.
ಬಾಲಕಿಯ ತಂದೆ ನೀಡಿದ ದೂರಿನ ಆಧಾರದ ಮೇಲೆ ಗುರುವಾರ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅವರು ಹೇಳಿದರು.
ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಎಸ್ಎಚ್ಒ ತಿಳಿಸಿದ್ದಾರೆ.