ಅತ್ಯಾಚಾರಕ್ಕೊಳಗಾದ ಅಪ್ರಾಪ್ತ ದಲಿತ ಬಾಲಕಿಯನ್ನು ಇಡೀ ರಾತ್ರಿ ಠಾಣೆಯಲ್ಲಿಟ್ಟು ಹಿಂಸಿಸಿದ ಪೊಲೀಸರು! - Mahanayaka

ಅತ್ಯಾಚಾರಕ್ಕೊಳಗಾದ ಅಪ್ರಾಪ್ತ ದಲಿತ ಬಾಲಕಿಯನ್ನು ಇಡೀ ರಾತ್ರಿ ಠಾಣೆಯಲ್ಲಿಟ್ಟು ಹಿಂಸಿಸಿದ ಪೊಲೀಸರು!

police
09/09/2022

ಛತ್ತರ್ ಪುರ(ಮಧ್ಯಪ್ರದೇಶ): ಅತ್ಯಾಚಾರಕ್ಕೊಳಗಾದ ದಲಿತ ಬಾಲಕಿಯನ್ನು ಪೊಲೀಸರು ಇಡೀ ರಾತ್ರಿ ಪೊಲೀಸ್ ಠಾಣೆಯಲ್ಲೇ ಇರಿಸಿಕೊಂಡು, ಥಳಿಸಿ, ಪ್ರಕರಣವನ್ನು ಹಿಂದೆಗೆಯುವಂತೆ ಬೆದರಿಸಿದ ಆಘಾತಕಾರಿ ಘಟನೆ ಮಧ್ಯಪ್ರದೇಶದ ಛತ್ತರ್ ಪುರ ನಗರದಲ್ಲಿ ನಡೆದಿದೆ.

13 ವರ್ಷ ವಯಸ್ಸಿನ ಸಂತ್ರಸ್ತ ಬಾಲಕಿ ಆಗಸ್ಟ್ 27ರಂದು ಆಟವಾಡಲು ಮನೆಯಿಂದ ಹೊರಗೆ ಹೋಗಿದ್ದು, ಬಳಿಕ ಮರಳಿ ಬಾರದೇ ನಾಪತ್ತೆಯಾಗಿದ್ದಳು. ಘಟನೆ ಸಂಬಂಧ ನಾಪತ್ತೆಯಾದ ಮರುದಿನ ಬಾಲಕಿಯ ತಂದೆ ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ  ದೂರು ದಾಖಲಿಸಿದ್ದರು. ಈ ನಡುವೆ ಆಗಸ್ಟ್ 30ರಂದು ಬಾಲಕಿ ಮರಳಿ ಮನೆಗೆ ಬಂದಿದ್ದು, ತನ್ನನ್ನು ಬಾಬು ಖಾನ್ ಎಂಬಾತ ಅಪಹರಿಸಿ ಮೂರು ದಿನಗಳ ಕಾಲ ನಿರಂತರವಾಗಿ ಅತ್ಯಾಚಾರ ನಡೆಸಿದ್ದಾನೆ ಎಂದು ತನ್ನ ಪೋಷಕರಿಗೆ ತಿಳಿಸಿದ್ದಾಳೆ.

ಬಾಲಕಿಯ ಹೇಳಿಕೆಯಿಂದ ಭೀತರಾದ ಪೋಷಕರು ತಕ್ಷಣವೇ ಪೊಲೀಸರಿಗೆ ದೂರು ನೀಡಲು ತೆರಳಿದ್ದಾರೆ. ಆದರೆ, ಸಂತ್ರಸ್ತರ ಸಮಸ್ಯೆಗೆ ಸ್ಪಂದಿಸಲು ಬದಲು ಪೊಲೀಸರು,  ನಿನ್ನ ಮಗಳ ಹೇಳಿಕೆಯನ್ನು ಬದಲಿಸು ಎಂದು ಬಾಲಕಿಯ ತಂದೆಗೆ ಒತ್ತಡ ಹಾಕಿದ್ದು, ಇದಕ್ಕೆ ಒಪ್ಪದಿದ್ದಾಗ ತಂದೆಯನ್ನು ಪೊಲೀಸ್ ಠಾಣೆಯಿಂದ ಹೊರ ಕಳುಹಿಸಿ, ಸಂತ್ರಸ್ತ ಬಾಲಕಿಗೆ ಒದ್ದು, ಬೆಲ್ಟ್ ನಿಂದ ಹೊಡೆದು, ಇಡೀ ದಿನ ಪೊಲೀಸ್ ಠಾಣೆಯಲ್ಲೇ ಇರಿಸಿಕೊಂಡು ಪೊಲೀಸರು ಅಮಾನವೀಯತೆ ಮೆರೆದಿದ್ದಾರೆ ಎಂದು ಬಾಲಕಿ ಆರೋಪಿಸಿದ್ದಾಳೆ.

ಅಂತಿಮವಾಗಿ ಸೆಪ್ಟಂಬರ್ 1ರಂದು ಸಂಜೆ ಆರೋಪಿಯ ವಿರುದ್ಧ ಪೊಲೀಸರು ಅತ್ಯಾಚಾರ ಪ್ರಕರಣ ದಾಖಲಿಸಿದ್ದಾರೆ. ಆದರೆ, ಅಪಹರಿಸಿದ ವಿಚಾರವನ್ನು ಕೇಸ್ ನಿಂದ ಕೈಬಿಟ್ಟು ಪ್ರಕರಣ ದಾಖಲಿಸಿದ್ದರು. ಇದಲ್ಲದೇ ಬಾಲಕಿಗೆ 17 ವರ್ಷ ಎಂದು ಸುಳ್ಳು ವರದಿಯನ್ನು ನಮೂದಿಸಿದ್ದರು. ಅತ್ಯಾಚಾರ ಪ್ರಕರಣದ ಆರೋಪಿಯನ್ನು ರಕ್ಷಿಸಲು ಪೊಲೀಸರು ಎಲ್ಲಾ ಪ್ರಯತ್ನಗಳನ್ನೂ ಮಾಡಿದ್ದರು.

ಈ ನಡುವೆ ಸಂತ್ರಸ್ತೆ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಮೊರೆ ಹೋಗಿದ್ದು, ಇಲ್ಲಿ ದೂರು ದಾಖಲಾಗುತ್ತಿದ್ದಂತೆಯೇ ಪ್ರಕರಣ ಗಂಭೀರತೆ ಪಡೆದುಕೊಂಡಿದೆ.  ಅತ್ಯಾಚಾರ ಪ್ರಕರಣದ ಆರೋಪಿಯನ್ನು ಭಾರತೀಯ ದಂಡ ಸಂಹಿತೆ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆ ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಸ್ಕೋ) ಕಾಯ್ದೆಯ ಸಂಬಂಧಿತ ಸೆಕ್ಷನ್ ಗಳ ಅಡಿಯಲ್ಲಿ ಸೆಪ್ಟೆಂಬರ್ 3 ರಂದು ಬಂಧಿಸಲಾಗಿದ್ದು, ಆರೋಪಿಯನ್ನು ರಕ್ಷಿಸಲು ಯತ್ನಿಸಿರುವುದೇ ಅಲ್ಲದೇ ಬಾಲಕಿಯನ್ನು ಠಾಣೆಯಲ್ಲಿ ಅಕ್ರಮವಾಗಿ ಬಂಧಿಸಿದ  ಕೊತ್ವಾಲಿ ಪೊಲೀಸ್ ಠಾಣೆಯ ಗೃಹ ಅಧಿಕಾರಿ ಅನೂಪ್ ಯಾದವ್, ಸಬ್ ಇನ್ಸ್ ಪೆಕ್ಟರ್ ಮೋಹಿನಿ ಶರ್ಮಾ ಮತ್ತು ಸಹಾಯಕ ಸಬ್ ಇನ್ಸ್ ಪೆಕ್ಟರ್ ಗುರುದತ್ ಶೇಷಾ ಅವರನ್ನು  ಅಮಾನತುಗೊಳಿಸಿ ಛತ್ತರ್‌ಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಚಿನ್ ಶರ್ಮಾ ಆದೇಶಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ