ದಲಿತರು ಮಾಧ್ಯಮಗಳ ಆರಂಭಿಸುವ ಮುನ್ನ ಇದನ್ನೊಮ್ಮೆ ಓದಿ….
ನಮ್ಮ ಸುದ್ದಿ ಹಾಕಲಿಲ್ಲ ನಾವೇ ಒಂದು ಚಾನಲ್ ಮಾಡೋಣ ಎಂದಿದ್ದಾರೆ.. ಅನೇಕರು.
ಇದು ಕಷ್ಟವೂ ಅಲ್ಲ ಹಾಗೆಯೇ ಸುಲಭವೂ ಅಲ್ಲ.
ಒಂದು ಅನುಭವ ಹೇಳ್ತಿನಿ.. ನಾನು ಕೂಡ ಎಂ.ಎ. ಪತ್ರಿಕೋದ್ಯಮ ಮಾಡಿಕೊಂಡು ರಾಜ್ಯಮಟ್ಟದ ನಂ ಒನ್ ಪತ್ರಿಕೆಯಲ್ಲಿ ಕೆಲಸ ಮಾಡುತ್ತ ಕೈ ತುಂಬಾ ಸಂಬಳ ತೆಗೆದುಕೊಳ್ಳುತ್ತಿದ್ದೆ. ದಲಿತರ ಸುದ್ದಿ ವಿಚಾರದಲ್ಲಿ ಅಲ್ಲಿ ಆದ ಅನೇಕ ಅವಮಾನಗಳಿಂದ ಬೇಸತ್ತು ರಾಜಿನಾಮೆ ಕೊಟ್ಟು ಆಚೆ ಬಂದೆ.
ಆಗ ನನಗೆ ಅನ್ನಿಸಿದ್ದು, ನಾವೇಕೆ ದಲಿತರು ಮಾಧ್ಯಮ ಸ್ಥಾಪಿಸಬಾರದು ಎಂದು. ಹಾಗೆ ಒಂದಷ್ಟು ದಲಿತ ಮುಖಂಡರ ಜೊತೆ ಚರ್ಚೆ ಮಾಡಿದೆ. ಎಲ್ಲರೂ ಮಾಡೋಣ ಎಂದರು. ಬಂಡವಾಳ ಇಲ್ಲದ ನನಗೆ ನಮ್ಮವರು ಕೈ ಹಿಡಿಯುತ್ತಾರೆ ಎಂದುಕೊಂಡಿದ್ದೆ. ನನಗೆ ಗೊತ್ತು ಪತ್ರಿಕೆ ಅಥವಾ ಚಾನೆಲ್ ಮಾಡುವುದು ಬಿಳಿಯಾನೆ ಸಾಕಿದಂತೆ. ಅದು ಅಕ್ಷರಶಃ ಸತ್ಯ ಕೂಡ. ಕೆಲವರು ಉತ್ದಾಹದಿಂದಲೇ ನೀವು ಮಾಡಿ ನಾವು ದಲಿತ ನೌಕರರ ಚಂದಾದಾರನ್ನಾಗಿ ಮಾಡಿಸುತ್ತೇವೆ ಎಂದರು.
500 ರೂಪಾಯಿ ಚಂದಾ ಮಾಡಿಸಲು ದಲಿತ ನೌಕರರ ನೌಕರರ ಮನೆ ಮನೆ ಅಲೆದೆ. ಅಪಮಾನ ಅನುಭವಿಸಿದೆ. ಒಂದಷ್ಟು ಜನ ಭರವಸೆ ಕೊಟ್ಟರು . ನೂರು ಜನ ಭೇಟಿ ಮಾಡಿದ್ದಕ್ಕೆ ಕೈ ಹಿಡಿದಿದ್ದು ಮೂರು ಮಂದಿ.
ಇನ್ನೂ ನೆನಪಿದೆ…
ಅದೊಂದು ದಿನ ಒಬ್ಬ ಒಂದೂವರೆ ಲಕ್ಷ ರೂಪಾಯಿ ಪಗಾರ ಪಡೆಯುವ ಪ್ರೊಫೆಸರ್ ಐನೂರು ರೂಪಾಯಿ ಕೊಡಲು ಸಂಬಳ ಆಗಿಲ್ಲ, ಮುಂದಿನ ತಿಂಗಳು ಬನ್ನಿ ಎಂದರು. ಆಚೆ ಬಂದಾಗ ಇವೆಲ್ಲಿ ಮಾಡ್ತಾವೆ… ಸುಲಭನಾ ಎಂದು ಮಾತನಾಡಿಕೊಂಡಿದ್ದು ಕೇಳಿಸಿತು.
ಭಾನುವಾರ ಸಾವಿರ ರೂಪಾಯಿ ಕೊಟ್ಟು ಮದ್ಯಾಹ್ನದ ಬಾಡೂಟ ಬೇಯಿಸಿ ತಿಂದು ಮಲಗುವ, ಬಾಬಾ ಸಾಹೇಬರ ಫೋಟೋ ಹಾಕಿಕೊಂಡರೆ ಎಲ್ಲಿ ಜಾತಿ ಗೊತ್ತಾಗುತ್ತದೆಯೋ ಎಂದು ನಾಚಿಕೆ ಪಡುವ ನನ್ನ ಜನಗಳಿಗೆ ಮಾಧ್ಯಮ ಪ್ರಮುಖ ಎಂದು ಯಾವತ್ತೂ ಅನ್ನಿಸಲೇ ಇಲ್ಲ..
ನಾನು ಅವತ್ತು ತೀರ್ಮಾನಿಸಿದೆ ಯಾವತ್ತೂ ನಮ್ಮಜನರ ಕೈಲಿ ಚಂದಾ ಎಂದು ಕೇಳಬಾರದೆಂದು ಮತ್ತು ಇವತ್ತಿನವರೆಗೆ ಕೇಳಿಲ್ಲ. ಇನ್ನು ರಾಜಕಾರಣಿಗಳ ,ಅಧಿಕಾರಿಗಳ ಜೊತೆ ಮಾತನಾಡಿದೆ ಯಾರೊಬ್ಬರೂ ಕೈ ಹಿಡಿಯಲಿಲ್ಲ. ಅದರಲ್ಲೂ ಮಾಜಿ ಮಂತ್ರಿ ಹೆಚ್.ಸಿ.ಮಹದೇವಪ್ಪ ಅವರ ಮನೆಗೆ ಅವರಿವರ ಪರಿಚಯದ ಮೂಲಕ ಹತ್ತಾರು ಬಾರಿ ಹೋಗಿ ಬೇಡಿಕೊಂಡೆ ಅವರೂ ಸಹಾಯ ಮಾಡಲಿಲ್ಲ. ಅವರು ಜಿಲ್ಲಾ ಉಸ್ತುವಾರಿ ಸಚಿವರಾದರು ಒಂದು ಸಣ್ಣ ಸಹಾಯ ಮಾಡಲಿಲ್ಲ.
ಮೊದಲು ಸೋತೆ… ಮತ್ತೆ ಯಾರ ಸಹಾಯವೂ ಇಲ್ಲದೇ ‘ಭೀಮ ವಿಜಯ ಪತ್ರಿಕೆ’ ಆರಂಭಿಸಿ ಗೆದ್ದೆ. ಅದೇ ಮಹದೇವಪ್ಪನವರನ್ನು ಗೆಸ್ಟ್ ಆಗಿ ಕರೆದು ನನ್ನ ಸಾಧನೆ ತೋರಿಸಿದೆ.
ಇವತ್ತು ನನ್ನ ಸಾಧನೆ ನನಗೆ ಹೆಮ್ಮೆ ಇದೆ. ನನಗೆ ಸಹಾಯ ಮಾಡಿದವರ ಪೈಕಿ ದಲಿತರಿಗಿಂತ ಇತರೇ ವರ್ಗದವರೇ ಹೆಚ್ಚು. ಕೆ.ಟಿ. ಶಿವ ಪ್ರಸಾದ್ ಅಂತಹವರು ಬೆನ್ನು ತಟ್ಟಿ ಪ್ರೋತ್ಸಾಹಿಸಿದರು.
ಈವರೆಗೆ ನಾನು ಯಾರಿಂದಲೂ ಒಂದು ಪೈಸೆ ಹಣಕಾಸಿನ ಸಹಾಯ ಪಡೆದಿಲ್ಲ. ಕೇಳಿಯೂ ಇಲ್ಲ. ಖುಷಿ ವಿಚಾರ ಎಂದರೆ ಭೀಮ ವಿಜಯ ಇಂದು ಇದೇ ಬಹುಜನ ಸಮುದಾಯದ ದನಿಯಾಗಿದೆ. ನೂರಾರು ಜನರಿಗೆ ನ್ಯಾಯ ಕೊಡಿಸಿದೆ. ಅವಮಾನಿಸಿದ ಜನರೇ ಇಂದು ಇದು ನಮ್ಮ ಪತ್ರಿಕೆ ಎಂದು ಹೆಮ್ಮೆಯಿಂದ ಹೇಳುತ್ತಿದ್ದಾರೆ. ಆ ಖುಷಿ ನನಗಿದೆ.
ಯಾರು ಅಂಬೇಡ್ಕರ್ ಫೋಟೋ ಹಾಕಲು ಅವಮಾನ ಎನ್ನುತ್ತಿದ್ದರೋ ಅದೇ ಫೋಟೋ ಭೀಮ ವಿಜಯದಲ್ಲಿ ಪ್ರತಿದಿನ ಮುಖಪುಟದಲ್ಲಿರುತ್ತದೆ.
ಅಂಬೇಡ್ಕರ್ ಎನ್ನುವುದು ನಮ್ಮ ಶಕ್ತಿದೀಪವಾಗಿದೆ. ನಿಜ ಒಂದು ಮಾಧ್ಯಮವನ್ನು ನಾವು ಸ್ಥಾಪಿಸಿ ದೀರ್ಘಾವಧಿಯಲ್ಲಿ ಉಳಿಸಿಕೊಂಡು ಹೋಗುವುದು ಅಷ್ಟು ಸುಲಭವಲ್ಲ. ಹಾಗೆಯೇ ಕಷ್ಟವೂ ಇಲ್ಲ. ಇವತ್ತು ಗೆಳೆಯ B R Bhaskar Prasad ನಂತಹವರು ಎಲ್ಲವೂ ಇದ್ದು ಒಂದು ಮಾಧ್ಯಮವನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. ರಾಜಕಾರಣಿಗಳು ಬೇರೆ ಮಾಧ್ಯಮಗಳಿಗೆ ಲಕ್ಷ ಲಕ್ಷ ಜಾಹಿರಾತು ನೀಡುತ್ತಾರೆ ನಮ್ಮವರಿಗೆ ನಯಾಪೈಸೆ ಕೊಡುವುದಿಲ್ಲ. ಹೀಗೆ ಒಮ್ಮೆ ಮೀಸಲು ಕ್ಷೇತ್ರದ ಶಾಸಕ ಹೆಚ್.ಕೆ. ಕುಮಾರಸ್ವಾಮಿ ಗೆ ಪತ್ರಿಕೆ ಪುಟ ಜಾಸ್ತಿ ಮಾಡಬೇಕು ಸಹಾಯ ಮಾಡಿ ಎಂದೆ. ಪಾಪ…. ಕಷ್ಟದಲಿದ್ದೀನಿ ಎಂದರು. ಪಾಪ ಏನು ಕಷ್ಟವೋ ಏನೋ ಎಂದು ಸುಮ್ಮನಾದೆ. ಆಗ ತಾನೆ ಮಗನ ಫಿಲಂ ಗೆ 5 ಕೋಟಿ ಖರ್ಚು ಮಾಡಿ ಸುಸ್ತಾಗಿದ್ದರು.
ನಿಜ ಹೇಳುತ್ತೇನೆ ಭೀಮ ವಿಜಯ ನನ್ನ ಸ್ನೇಹಿತರ ಸಹಕಾರ ನನ್ನ ಬುದ್ದಿ ಶಕ್ತಿ ಶ್ರಮದಿಂದ ಮಾತ್ರ ಬೆಳೆಸಿ ಇಂದು ಬಹುಜನರ ಧ್ವನಿ ಮಾಡಿದ್ದೇನೆ… ಒಬ್ಬನೇ ಒಬ್ಬ ರಾಜಕಾರಣಿ ಒಂದು ರೂಪಾಯಿ ಸಹಾಯ ಮಾಡಿಲ್ಲ. ಅದರಲ್ಲೂ ನಮ್ಮ ಸಮುದಾಯದ ರಾಜಕಾರಣಿಗಳು ಯಾರೂಅನೇಕರು.ರೂಪಾಯಿಯನ್ನೂ ಕೊಟ್ಟಿಲ್ಲ. ಹಾಗಾಗಿ ನಾವು ಯಾರ ದರ್ದಲ್ಲೂ ಇಲ್ಲ. ಎಲ್ಲರ ಮೇಲೆಯೂ ಬರೆಯುತ್ತೇವೆ. ಇದು ನಮ್ಮ ಶಕ್ತಿ.
ಇವತ್ತು ನಮ್ಮ ಪತ್ರಿಕೆಗೆ ಇಡೀ ರಾಜ್ಯಾದ್ಯಂತ ಓದುಗರಿದ್ದಾರೆ. ರಾಜ್ಯ ಮಟ್ಟದ ಪತ್ರಿಕೆ ಮಾಡಬೇಕೆಂಬ ಅಧಮ್ಯ ಬಯಕೆ, ಆದರೆ ಅದನ್ನು ಮೇಲೆತ್ತಲೂ ನಮ್ಮಲ್ಲಿ ಸಹಕಾರ ಮಾಡುವರಿಲ್ಲ. ಎಲ್ಲಿಂದಲೂ ಕರೆ ಮಾಡಿ ನಮ್ಮ ಜಿಲ್ಲೆಗೂ ಕಳಿಸಿ ಎನ್ನುತ್ತಾರೆ ಆದರೆ ಸಾಧ್ಯವಾಗಿಲ್ಲ. ಇದರ ನಡುವೆಯೂ ನಾವು ಎಲ್ಲರನ್ನೂ ತಲುಪುತ್ತಿದ್ದೇವೆ. ನೊಂದವರಿಗೆ ದನಿಯಾಗುತ್ತಿದ್ದೇವೆ ಎಂಬ ಖುಷಿ ಇದೆ. ಉದಾಹರಣೆಗೆ ಕಿರಗುಂದದ ಪುನೀತ್ ಕಿರಗುಂದ ಮೂತ್ರ ಕುಡಿಸಿದ ಪ್ರಕರಣವನ್ನು ಭೇದಿಸಿದ್ದು. ನ್ಯಾಯ ಕೊಡಿಸಲು ಎಲ್ಲಿದ್ದರೇನಂತೆ ಅಲ್ಲವೇ ?
ಇದನ್ನು ಯಾಕೆ ಹೇಳುತ್ತಿದ್ದೇನೆ ಎಂದರೆ ಅವರಿವರನ್ನು ನಂಬಿ ಪತ್ರಿಕೆ ಅಥವಾ ಚಾನೆಲ್ ಮಾಡಲು ಕೈ ಹಾಕಬೇಡಿ.. ಭ್ರಮೆಯಿಂದ ಈ ಕ್ಷೇತ್ರಕ್ಕೆ ಬರಬೇಡಿ. ನಿಮ್ಮ ಶ್ರಮ ಮತ್ತು ಬಂಡವಾಳದ ಮೇಲೆ ನಂಬಿಕೆ ಇಡಿ . ನಮ್ಮ ಜನಗಳು ನಮ್ಮನ್ನು ಕೈ ಹಿಡಿಯುವುದಿಲ್ಲ.
ಯಾರೋ ಬಂದು ಕೈ ಹಿಡಿದು ನಡೆಸುತ್ತಾರೆ ಎಂದು ಭ್ರಮಾಲೋಕದಿಂದ ಮಾಧ್ಯಮ ಆರಂಭಿಸಲು ಹೋಗಬೇಡಿ…
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka