ದಲಿತರನ್ನು ಮುಟ್ಟಿದ್ರೆ ಹುಷಾರ್… | ಸಕಲೇಶಪುರದಲ್ಲಿ ಬಜರಂಗದಳಕ್ಕೆ ಎಚ್ಚರಿಕೆ ಸಂದೇಶ
ಸಕಲೇಶಪುರ: ಗೋರಕ್ಷಣೆ ಹೆಸರಿನಲ್ಲಿ ಬಜರಂಗದಳದಿಂದ ದಲಿತರ ಮೇಲೆ ನಡೆಸಿದ ಹಲ್ಲೆಯನ್ನು ಖಂಡಿಸಿ ಸಕಲೇಶಪುರದಲ್ಲಿ ದಲಿತ ಸಂಘಟನೆಗಳು ಬೃಹತ್ ಪ್ರತಿಭಟನೆ ನಡೆಸಿದ್ದು, ದಲಿತರನ್ನು ಮುಟ್ಟಿದ್ರೆ, ಹುಷಾರ್… ಎಂಬ ಸಂದೇಶ ರವಾನಿಸಿದೆ.
ಬಜರಂಗದಳದ ಕಾರ್ಯಕರ್ತರು ವಿನಾ ಕಾರಣ ದಲಿತರನ್ನು ಟಾರ್ಗೆಟ್ ಮಾಡಿ ಕಿರುಕುಳ ನೀಡುತ್ತಿದ್ದಾರೆ. ಇದಕ್ಕೆ ಪೊಲೀಸರು ಕೂಡ ಬೆನ್ನೆಲುಬಾಗಿದ್ದಾರೆ. ತಾಲೂಕಿನ ಶಾಂತಿ ಸೌಹಾರ್ದತೆಗೆ ಮಾರಕವಾಗುತ್ತಿರುವ ಬಜರಂಗದಳದ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಭಾರೀ ಪ್ರಮಾಣದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ಪ್ರವಾಸಿ ಮಂದಿರದಿಂದ ಮೆರವಣಿಗೆ ಮೂಲಕ ಹೊರಟು ಮಿನಿ ವಿಧಾನಸೌಧ ಮುಂಭಾಗದಲ್ಲಿರುವ ಅಂಬೇಡ್ಕರ್ ಪ್ರತಿಮೆಗೆ ಹಾರಾರ್ಪಣೆ ಮಾಡಿ, ಅಶೋಕ ರಸ್ತೆಯಿಂದ ಷಾಪ್ ಸಿದ್ದೇಗೌಡ ಶಾಲೆ ತಿರುವಿನ ಸಮೀಪದ ಬಿ.ಎಂ. ರಸ್ತೆಗೆ ಬಂದು ಹಳೆಯ ಬಸ್ ನಿಲ್ದಾಣದ ಮುಂಭಾಗದಲ್ಲಿ ಕೆಲ ಕಾಲ ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ಬಳಿಕ ಬಹಿರಂಗ ಸಭೆ ನಡೆಯಿತು.
ಸಕಲೇಶಪುರ ಮೊದಲಿನಿಂದಲೂ ಶಾಂತಿ ಸುವ್ಯವಸ್ಥೆಗೆ ಹೆಸರಾಗಿದ್ದು, ಕಳೆದ ಎರಡು ವರ್ಷಗಳಿಂದೀಚೆಗೆ ಹಿಂದುತ್ವದ ಹೆಸರಿನಲ್ಲಿ ಬಜರಂಗದಳದ ರಘು ಮತ್ತು ಸಹಚಾರರು ಗಲಭೆ ಎಬ್ಬಿಸಲು ಪ್ರಯತ್ನಿಸುತ್ತಿದ್ದಾರೆ. ಇವರಿಗೆ ಪೊಲೀಸರು ಕೂಡ ರಾಜ ಮರ್ಯಾದೆ ನೀಡುತ್ತಿದ್ದಾರೆ. ಪಂಚಾಯತ್ ನ ಮಾಜಿ ಅಧ್ಯಕ್ಷ ಮಂಜುನಾಥ್ ಅವರ ಮೇಲೆ ಗೋರಕ್ಷಣೆಯ ಹೆಸರಿನಲ್ಲಿ ಬಜರಂಗದಳದ ಕಿಡಿಗೇಡಿಗಳು ಹಲ್ಲೆ ನಡೆಸಿದ್ದಾರೆ. ಹಲ್ಲೆ ನಡೆಸಿರುವ ದೀಪು ಎಂಬಾತನನ್ನು ತಕ್ಷಣವೇ ಬಂಧಿಸಬೇಕು. ಹಲ್ಲೆ ಬಗ್ಗೆ ನ್ಯಾಯ ಕೇಳಲು ಹೋದಾಗ ದಲಿತ ಹೋರಾಟಗಾರರ ಮೇಲೆಯೇ ಸುಳ್ಳು ದೂರು ದಾಖಲಿಸಿದ ಡಿವೈಎಸ್ ಪಿ ಉದಯ ಭಾಸ್ಕರ್ ಅವರನ್ನು ಅಮಾನತು ಮಾಡಬೇಕು ಎಂದು ಆಗ್ರಹಿಸಿದರು.
ಇದೇ ವೇಳೆ ಉಪ ವಿಭಾಗಾಧಿಕಾರಿ ಪ್ರತೀಕ್ ಬಯಾಲ್ ಅವರಿಗೆ ಮನವಿ ಪತ್ರ ನೀಡಲಾಯಿತು. ಪ್ರತಿಭಟನೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದ ಹಿನ್ನೆಲೆಯಲ್ಲಿ ಹೊಳೆನರಸೀಪುರ ಡಿವೈಎಸ್ ಪಿ ಮುರಳೀಧರ್ ಅವರ ನೇತೃತ್ವದಲ್ಲಿ ಬಂದೋಬಸ್ತ್ ಏರ್ಪಡಿಸಲಾಯಿತು.
ಪ್ರತಿಭಟನೆಯಲ್ಲಿ ವಕೀಲ ವೇಣು, ವಕೀಲ ರಾಧಾಕೃಷ್ಣ, ಬೈಕೆರೆ ದೇವರಾಜ್, ವಳಲ ಹಳ್ಳಿ ವೀರೇಶ್, ಹೆತ್ತೂರು ನಾಗರಾಜ್, ಲಕ್ಷ್ಮಣ್ ಕೀರ್ತಿ, ಎಸ್.ಎನ್.ಮಲ್ಲಪ್ಪ, ಭೀಮ್ ಆರ್ಮಿ ತಾಲೂಕು ಅಧ್ಯಕ್ಷ ವಿಕ್ರಂ ಸಕ್ಪಾಲ್. ಪುರಸಭಾ ಸದಸ್ಯ ಅಣ್ಣಪ್ಪ, ಕೌಡಹಳ್ಳಿ ತಿಮ್ಮಯ್ಯ, ಕಲ್ಗಣೆ ಪ್ರಶಾಂತ್, ಕೋಮಾರಯ್ಯ, ದೊಡ್ಡಿರಯ್ಯ, ಬೆಳಗೋಡು ಬಸವರಾಜ್, ನಲ್ಲುಲ್ಲಿ ಈರಯ್ಯ, ಸಿಐಟಿಯು ಧರ್ಮೇಶ್ ಹಾಗೂ ಪೃಥ್ವಿ, ರಾಜಶೇಖರ್, ಸಂದೇಶ್, ಹೆನ್ನಲಿ ಶಾಂತರಾಜು, ಸಂದೀಪ್ ಮೊದಲಾದವರು ಭಾಗವಹಿಸಿದ್ದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka