ಚುನಾವಣೆಗಿಂತ ಮೊದಲು ಅಂಬೇಡ್ಕರ್ ಭವನಗಳಿಗೆ ಶಂಕುಸ್ಥಾಪನೆ ನೆರವೇರಿಸಿ: ಸೇಸಪ್ಪ ಬೆದ್ರಕಾಡು ಒತ್ತಾಯ
ಪುತ್ತೂರು: ದ.ಕ. ಜಿಲ್ಲಾ ದಲಿತ್ ಸೇವಾ ಸಮಿತಿ (ರಿ ) ವಿಟ್ಲ ವತಿಯಿಂದ ವಿಟ್ಲ ಮತ್ತು ಪುತ್ತೂರಿನ ಅಂಬೇಡ್ಕರ್ ಭವನಕ್ಕೆ ಮಂಜೂರಾದ ಜಮೀನಿನಲ್ಲಿ ಕೂಡಲೇ ಸಂಸ್ಥಾಪನೆ ನೆರವೇರಿಸಿ ಭವನ ನಿರ್ಮಿಸುವಂತೆ ಹಾಗೂ ಈ ಎರಡು ಭವನಗಳಿಗೆ ಹೆಚ್ಚಿನ ಅನುದಾನ ಒದಗಿಸುವಂತೆ ಒತ್ತಾಯಿಸಿ ದಲಿತ್ ಸೇವಾ ಸಮಿತಿ ವಿಟ್ಲ ಕಚೇರಿಯಿಂದ ಪುತ್ತೂರು ಶಾಸಕರ ಸಂಜೀವ ಮಠಂದೂರು ಅವರ ಕಚೇರಿ ಅವರಿಗೆ ಕಾಲ್ನಡಿಗೆ ಜಾಥಾ ಹಮ್ಮಿಕೊಳ್ಳಲಾಯಿತು.
ವಿಟ್ಲಾದಿಂದ ಪುತ್ತೂರಿಗೆ 14 ಕಿಲೋಮೀಟರ್ ದೂರ ಸಾಗಿದ ಕಾರ್ಯಕರ್ತರು ದಾರಿಯುದ್ಧಕ್ಕೂ ಅಂಬೇಡ್ಕರ್ ಘೋಷಣೆಗಳನ್ನು ಕೂಗುತ್ತಾ ಸಾಗಿದರು. ಬಳಿಕ ಶಾಸಕರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಶಾಸಕ ಸಂಜೀವ ಮಠಂದೂರು, ಅಂಬೇಡ್ಕರ್ ಭವನದ ನಿರ್ಮಾಣಕ್ಕೆ ಹೆಚ್ಚಿನ ಅನುದಾನ ತರಲು ತನ್ನಿಂದಾದ ಪ್ರಯತ್ನಗಳನ್ನು ಮಾಡುವುದಾಗಿ ಪ್ರತಿಭಟನಾಕಾರರಿಗೆ ಭರವಸೆ ನೀಡಿದರು.
ಶಾಸಕರ ಭೇಟಿಯ ಬಳಿಕ ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ದಲಿತ್ ಸೇವಾ ಸಮಿತಿ ಸ್ಥಾಪಕಾಧ್ಯಕ್ಷ ಸೇಸಪ್ಪ ಬೆದ್ರಕಾಡು, ಸದ್ಯದಲ್ಲೇ ವಿಧಾನ ಸಭಾ ಚುನಾವಣೆ ಬರುತ್ತಿದ್ದು, ಚುನಾವಣೆಗಿಂತ ಮೊದಲು ಅಂಬೇಡ್ಕರ್ ಭವನಗಳಿಗೆ ಶಂಕುಸ್ಥಾಪನೆ ನೆರವೇರಿಸಬೇಕು. ಇಲ್ಲವಾದರೆ, ಮುಂದಿನ ಹೋರಾಟವಾಗಿ ನಾವು ಉಪವಾಸ ಸತ್ಯಾಗ್ರಹವನ್ನು ನಡೆಸುತ್ತೇವೆ ಎಂದರು.
ಜಾಥಾದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ವಿಟ್ಲ ಮತ್ತು ಪುತ್ತೂರು ಠಾಣಾ ಪೊಲೀಸರು ಸೂಕ್ತ ಭದ್ರತೆಯನ್ನು ಒದಗಿಸಿದ್ದರು. ಅಲ್ಲದೆ ಸಮುದಾಯ ಆರೋಗ್ಯ ಕೇಂದ್ರ ವಿಟ್ಲ ವತಿಯಿಂದ ಆಂಬುಲೆನ್ಸ್ ವ್ಯವಸ್ಥೆಯನ್ನು ಮಾಡಲಾಗಿತ್ತು.
ದ.ಕ. ಜಿಲ್ಲಾ ದಲಿತ್ ಸೇವಾ ಸಮಿತಿ (ರಿ ) ವಿಟ್ಲ ಸ್ಥಾಪಕಧ್ಯಕ್ಷರಾದ ಸೇಸಪ್ಪ ಬೆದ್ರಕಾಡು, ಜಿಲ್ಲಾಧ್ಯಕ್ಷರಾದ ಚಂದ್ರಶೇಖರ್ ಯು. ವಿಟ್ಲ, ಉಪಾಧ್ಯಕ್ಷರು, ಪ್ರಸಾದ್ ಬೋಲ್ಮಾರ್, ಜಗದೀಶ್ ಮಂಜನಾಡಿ, ಜಿಲ್ಲಾ ಉಪಾಧ್ಯಕ್ಷೆ ಯಾಮಿನಿ ಬೆಟ್ಟoಪಾಡಿ, ಜಿಲ್ಲಾ ಗೌರವ ಅಧ್ಯಕ್ಷರು ಸೋಮಪ್ಪ ನಾಯ್ಕ ಮಲ್ಯ, ಜಿಲ್ಲಾ ಸಂಚಾಲಕರು ಗೋಪಾಲ್ ನೆರಳಕಟ್ಟೆ, ಪುತ್ತೂರು ತಾಲೂಕು ಅಧ್ಯಕ್ಷ ಅಣ್ಣಪ್ಪ ಕಾರೆಕಾಡು, ಮಹಿಳಾ ಅಧ್ಯಕ್ಷೆ ಲಲಿತಾ, ಉಳ್ಳಾಲ ತಾಲೂಕು ಅಧ್ಯಕ್ಷ ನಾಗೇಶ್ ಟಿ., ಮಹಿಳಾ ಅಧ್ಯಕ್ಷೆ ರೇಣುಕಾ, ಬಂಟ್ವಾಳ ತಾಲೂಕು ಅಧ್ಯಕ್ಷ ವಸಂತ ಕುಕ್ಕೆಬೆಟ್ಟು, ಮಹಿಳಾ ಅಧ್ಯಕ್ಷೆ ಲಲಿತಾ ಸಾಲೆತ್ತೂರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.
ಇದನ್ನೂ ಓದಿ: ವಿಟ್ಲ ಹಾಗೂ ಪುತ್ತೂರಿನಲ್ಲಿ ಸುಸಜ್ಜಿತ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಒತ್ತಾಯ: ದಲಿತ ಸೇವಾ ಸಮಿತಿಯಿಂದ ಕಾಲ್ನಡಿಗೆ ಜಾಥಾ
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/GoQnwP3qNkmAbAPcjb8n8F
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka