ದಲಿತ ಯುವಕನ ಹತ್ಯೆ: ಆರೋಪಿಗಳ ರಕ್ಷಣೆ ಮಾಡಿದವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ‘ಧರ್ಮಸ್ಥಳ ಪೊಲೀಸ್ ಠಾಣೆ ಚಲೋ’
ಬೆಳ್ತಂಗಡಿ: ಶಿಬಾಜೆಯಲ್ಲಿ ನಡೆದ ದಲಿತ ಯುವಕನ ಹತ್ಯೆ ಪ್ರಕರಣದ ಆರೋಪಿಗಳನ್ನು ರಕ್ಷಿಸುವ ಪ್ರಯತ್ನಗಳು ನಡೆಯುತ್ತಿದೆ. ಆರೋಪಿಗಳ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕು ಆರೋಪಿಗಳ ರಕ್ಷಣೆ ಮಾಡಿದವರ ವಿರುದ್ದ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿ ಜ. 23ರಂದು ಧರ್ಮಸ್ಥಳ ಪೊಲೀಸ್ ಠಾಣೆ ಚಲೋ ಕಾರ್ಯಕ್ರಮವನ್ನು ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಹಾಗೂ ಸಮಸ್ತ ದಲಿತ ಸಂಘಟನೆಗಳ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿರುವುದಾಗಿ ಡಿ.ಎಸ್.ಎಸ್. ಅಂಬೇಡ್ಕರ್ ವಾದದ ತಾಲೂಕು ಸಂಚಾಲಕ ನೇಮಿರಾಜ ಕಿಲ್ಲೂರು ತಿಳಿಸಿದ್ದಾರೆ.
ಬೆಳ್ತಂಗಡಿಯಲ್ಲಿ ಕರೆದಿದ್ದ ದಲಿತ ಮುಖಂಡರುಗಳ ಪತ್ರಿಕಾಗೋಷ್ಠಿಯಲ್ಲಿ ಅವರು ಈ ವಿಚಾರ ತಿಳಿಸಿದರು.
ಶಿಬಾಜೆಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ದಲಿತ ಯುವಕ ಶ್ರೀಧರನ್ನು ಅತ್ಯಂತ ವ್ಯವಸ್ಥಿತವಾಗಿ ಕೊಕೆ ಮಾಡಲಾಗಿದೆ. ಕೊಲೆ ಆರೋಪಿಗಳನ್ನು ರಕ್ಷಿಸುವ ಪ್ರಯತ್ನಕ್ಕೆ ಶಿಬಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಹಾಗೂ ಬಂಟ್ವಾಳ ಡಿ.ವೈ ಎಸ್.ಪಿ ಅವರೂ ಕೈಜೋಡಿಸುತ್ತಿದ್ದಾರೆ ಎಂದು ಆರೋಪಿಸಿದರು.
ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಹಾಗೂ ಕೊಲೆಯಾದ ಶ್ರೀಧರನ ಕುಟುಂಬಕ್ಕೆ ರೂ. 25 ಲಕ್ಷ ಪರಿಹಾರ ನೀಡಬೇಕು, ಮುಂತಾದ ಹಲವು ಬೇಡಿಕೆಗಳನ್ನು ಇಟ್ಟುಕೊಂಡು ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಧರ್ಮಸ್ಥಳ ನೇತ್ರಾವತಿಯಿಂದ ಧರ್ಮಸ್ಥಳ ಠಾಣೆಯವರೆಗೆ ಬೃಹತ್ ಪ್ರತಿಭಟನಾ ರ್ಯಾಲಿ ನಡೆಯಲಿದ್ದು, ಧರ್ಮಸ್ಥಳ ಪೊಲೀಸ್ ಠಾಣೆಯ ಎದುರು ನಡೆಯುವ ಪ್ರತಿಭಟನೆಯಲ್ಲಿ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದದ ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್, ಜಿಲ್ಲಾ ದಲಿತ ಸಂಘಟನೆಗಳ ಸಮನ್ವಯ ಸಮಿತಿಯ ಸಂಚಾಲಕ ಎಂ.ದೇವದಾಸ್, ಡಿ.ಎಸ್.ಎಸ್. ರಾಜ್ಯ ಸಂಘಟನಾ ಸಂಚಾಲಕ ಚಂದು ಎಲ್, ಅಶೋಕ್ ಕೊಂಚಾಡಿ, ಸುಂದರ ಮೇರ ಹಾಗೂ ಇತರ ಮುಖಂಡರುಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಪ್ರತಿಭಟನೆಯಲ್ಲಿ ತಾಲೂಕಿನ ವಿವಿಧ ಭಾಗಗಳಿಂದ ಹಾಗೂ ಹೊರ ತಾಲೂಕುಗಳಿಂದ ಸುಮಾರು ಐದು ಸಾವಿರಕ್ಕೂ ಹೆಚ್ಚು ಮಂದಿ ಕಾರ್ಯಕರ್ತರು ಭಾಗವಹಿಸುವ ನಿರೀಕ್ಷೆ ಇದೆ ಎಂದು ಅವರು ತಿಳಿಸಿದ್ದಾರೆ.
ದಲಿತ ಸಂಘರ್ಷ ಸಮಿತಿ ಅಂವೇಡ್ಕರ್ ವಾದದ ಮೈಸೂರು ವಿಭಾಗೀಯ ಸಂಚಾಲಕ ಬಿ.ಕೆ. ವಸಂತ ಮಾತನಾಡಿ, ಶಿಬಾಜೆಯಲ್ಲಿ ನಡೆದ ಶ್ರೀಧರ ಅವರ ಕೊಲೆ ಪ್ರಕರಣದ ತನಿಖೆ ನಡೆಸುತ್ತಿರುವ ಬಂಟ್ವಾಳ ಡಿ.ವೈ.ಎಸ್.ಪಿ ಅವರು ಆರೋಪಿಗಳನ್ನು ರಕ್ಷಿಸುವ ಕಾರ್ಯ ಮಾಡುತ್ತಿದ್ದಾರೆ. ಸರಕಾರ ಕೂಡಲೇ ಅವರ ವಿರುದ್ದ ಕ್ರಮ ಕೈಗೊಳ್ಳಬೇಕು ತನಿಖಾಧಿಕಾರಿಯನ್ನು ಕೂಡಲೇ ಬದಲಿಸಿ ಪ್ರಕರಣದ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕು ಹಾಗೂ ಕೊಲೆಗಾರರನ್ನು ರಕ್ಷಿಸುವ ಕಾರ್ಯ ಮಾಡಿದ ಶಿಬಾಜೆ ಗ್ರಾಮ ಪಂಚಾಯತ್ ಅಧ್ಯಕ್ಷನ ವಿರುದ್ದ ಕೂಡಲೇ ಪ್ರಕರಣ ದಾಖಲಿಸಬೇಕು ಹಾಗೂ ಆತನನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು.
ಕೊಲೆ ಪ್ರಕರಣ ನಡೆದು ಇಷ್ಟು ದಿನವಾದರೂ ಶಾಸಕರು ಇನ್ನೂ ಈ ಬಗ್ಗೆ ಮಾತನಾಡುತ್ತಿಲ್ಲ ಆರೋಪಿಗಳನ್ನು ಶಾಸಕರ ಬೆಂಬಲಿಗರೇ ರಕ್ಷಿಸುತ್ತಿದ್ದಾರೆ ಎಂಬ ಅನುಮಾನ ಮೂಡುತ್ತಿದೆ. ಈ ಬಗ್ಗೆ ಶಾಸಕರು ಇನ್ನಾದರೂ ಸರಿಯಾದ ನಿಲುವನ್ನು ತೆಗೆದುಕೊಳ್ಳಲಿ ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ದಲಿತ ಸಮುದಾಯ ಈ ಬಗ್ಗೆ ಸ್ಪಷ್ಟವಾದ ನಿಲುವನ್ನು ತೆಗೆದುಕೊಳ್ಳ ಬೇಕಾದೀತು ಎಂದು ಅವರು ಎಚ್ಚರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮುಗೇರ ಸಮನ್ವಯ ಸಮಿತಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಯಪ್ರಕಾಶ್ ಕನ್ಯಾಡಿ, ತಾಲೂಕು ಅಧ್ಯಕ್ಷ ಕೊರಗಪ್ಪ ಉಪಸ್ಥಿತರಿದ್ದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LG00SlXNdBFJ1LFb3E40gL
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw