ದಲಿತ ಯುವಕನ ಮೇಲೆ ವಿಕೃತಿ ಮೆರೆದ ಪಿಎಸ್ ಐ ಸಸ್ಪೆಂಡ್: ಪ್ರಕರಣ ಸಿಐಡಿಗೆ ವರ್ಗಾವಣೆ
ಚಿಕ್ಕಮಗಳೂರು: ದಲಿತ ಯುವಕನಿಗೆ ಸಂಬಂಧವೇ ಇಲ್ಲದ ಪ್ರಕರಣದಲ್ಲಿ ಬಂಧಿಸಿ, ಲಾಕಪ್ ನಲ್ಲಿ ಚಿತ್ರಹಿಂಸೆ ನೀಡಿ, ಸಹ ಕೈದಿಯೋರ್ವನ ಮೂತ್ರ ಕುಡಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕ್ಕಮಗಳೂರು ಜಿಲ್ಲೆ ಗೋಣಿಬೀಡು ಪೊಲೀಸ್ ಠಾಣೆಯ ಪಿಎಸ್‌ಐ ಅರ್ಜುನ್ ನನ್ನು ಅಮಾನತು ಮಾಡಲಾಗಿದೆ.
ಪಶ್ಚಿಮ ವಲಯ ಐಜಿಪಿ ದೇವ್ ಜ್ಯೋತಿ ರೇ ಈ ಬಗ್ಗೆ ಆದೇಶ ಹೊರಡಿಸಿದ್ದು, ಗೋಣಿಬೀಡು ಪಿಎಸ್‌ಐ ಅರ್ಜುನ್ ನನ್ನು ಸಸ್ಪೆಂಡ್ ಮಾಡಿ ಆದೇಶ ಹೊರಡಿಸಿದ್ದಾರೆ ಎಂದು ತಿಳಿದು ಬಂದಿದೆ.
ಇನ್ನೂ ಆರೋಪಿ ಅರ್ಜುನ್ ನ ದುಷ್ಟ ಕೃತ್ಯದ ಬಳಿಕ ಆತನನ್ನು ಉಡುಪಿಗೆ ವರ್ಗಾವಣೆ ಮಾಡಿ ರಕ್ಷಿಸುವ ಪ್ರಯತ್ನ ನಡೆದಿತ್ತು. ಆದರೆ ರಾಜ್ಯಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಇದೀಗ ಆತನನ್ನು ಅಮಾನತು ಮಾಡಿ ಆದೇಶಿಸಲಾಗಿದೆ.
ಇನ್ನೂ ದಲಿತ ಯುವಕ ಪುನೀತ್ ನ ಮೇಲಿನ ದೌರ್ಜನ್ಯ ಪ್ರಕರಣವನ್ನು ಸಿಐಡಿ ತನಿಖೆಗೆ ಹಸ್ತಾಂತರಿಸಲಾಗಿದೆ ಎನ್ನುವ ಮಾಹಿತಿಗಳು ಲಭ್ಯವಾಗಿವೆ. ಸದ್ಯ ಆರೋಪಿಯನ್ನು ಅಮಾನತು ಮಾಡಿ ಆದೇಶ ನೀಡಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಸಮರ್ಪಕ ಕ್ರಮ ನಡೆಯದ ಹಿನ್ನೆಲೆಯಲ್ಲಿಸಾರ್ವಜನಿಕರ ಆಕ್ರೋಶದ ಬಗ್ಗೆ ಮಹಾನಾಯಕ ಮಾಧ್ಯಮದಲ್ಲಿ ನಿನ್ನೆ ವರದಿ ಪ್ರಕಟವಾಗಿತ್ತು.